ಬೆಂಗಳೂರು:ರಾಜ್ಯದಲ್ಲಿ ಕೃಷಿ ವಿಶ್ವವಿದ್ಯಾಲಯ ಸ್ಥಾಪಿಸುವ ಸಂಬಂಧ ಆಸ್ಟ್ರೇಲಿಯಾದ ವೆಸ್ಟ್ ಸಿಡ್ನಿ ವಿಶ್ವವಿದ್ಯಾಲಯದ ಕುಲಪತಿಗಳು ಹಾಗೂ ಅಧಿಕಾರಿಗಳು, ಆಸ್ಟ್ರೇಲಿಯಾದ ಕಾನ್ಸುಲೇಟ್ ಜನರಲ್ ಮೆಕ್‌ಗೀಚಿ ನೇತೃತ್ವದ ನಿಯೋಗ ಶುಕ್ರವಾರ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಹಾಗೂ ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್ ಅವರನ್ನು ಭೇಟಿಯಾಗಿ ಚರ್ಚಿಸಿತು.
ವಿಧಾನಸೌಧದಲ್ಲಿ ಭೇಟಿ ಮಾಡಿದ ನಿಯೋಗ ಹಲವು ವಿಚಾರಗಳ ಬಗ್ಗೆ ಚರ್ಚೆ ನಡೆಸಿತು. ವೆಸ್ಟ್ ಸಿಡ್ನಿ ವಿಶ್ವವಿದ್ಯಾಲಯವು ಭಾರತದಲ್ಲಿ ಕೃಷಿ ವಿಶ್ವವಿದ್ಯಾಲಯ ಸ್ಥಾಪಿಸಲು ಉತ್ಸುಕವಾಗಿದ್ದು, ಬೆಂಗಳೂರು ನಗರದಲ್ಲಿ ಆರಂಭಿಸಲು ಉದ್ದೇಶಿಸಿದೆ ಎಂದು ಕುಲಪತಿಗಳಾದ ಜಾರ್ಜ್ ವಿಲಿಯಮ್ಸ್ ಅಭಿಪ್ರಾಯಪಟ್ಟರು.
ಕೃಷಿಯಲ್ಲಿ ನೀರು ನಿರ್ವಹಣೆ ತಾಂತ್ರಿಕತೆ ಅಳವಡಿಕೆ, ಆಹಾರ ಸಂಸ್ಮರಣೆ ಮುಂತಾದ ಮುಖ್ಯ ವಿಷಯಗಳನ್ನು ಈ ಕೃಷಿ ವಿಶ್ವವಿದ್ಯಾಲಯದಲ್ಲಿ ಆದ್ಯತೆ ನೀಡಲಾಗುತ್ತದೆ. ಸ್ವತಂತ್ರವಾಗಿ ವಿಶ್ವವಿದ್ಯಾಲಯ ಸ್ಥಾಪಿಸುವುದು ಅಥವಾ ಕರ್ನಾಟಕದಲ್ಲಿನ ವಿಶ್ವವಿದ್ಯಾಲಯಗಳ ಸಹಯೋಗದಲ್ಲೂ ವೆಸ್ಟ್ ಸಿಡ್ನಿ ವಿಶ್ವವಿದ್ಯಾಲಯವು ಕಾರ್ಯ ನಿರ್ವಹಿಸಲು ಆಸಕ್ತಿ ಹೊಂದಿರುವುದಾಗಿ ಜಾರ್ಜ್ ವಿಲಿಯಮ್ಸ್ ತಿಳಿಸಿದರು.
ವಿದ್ಯಾರ್ಥಿ ವೇತನ ನೀಡುವ ಉದ್ದೇಶವಿರುವುದಾಗಿ ತಿಳಿಸಿದ ಅವರು, ಈಗಾಗಲೇ ವಿಯಟ್ನಾಂ ಇಂಡೋನೇಷ್ಯಾದಲ್ಲಿ ಕೃಷಿ ವಿಶ್ವವಿದ್ಯಾಲಯವನ್ನು ವೆಸ್ಟ್ ಸಿಡ್ನಿ ವಿಶ್ವವಿದ್ಯಾಲಯವು ಆರಂಭಿಸಿದೆ. ಯು.ಎ.ಇ.ಯಲ್ಲಿ ಸ್ಥಾಪನೆಗೆ ಮಾತುಕತೆ ನಡೆದಿದೆ. ಹಾಗಾಗಿ, ಕರ್ನಾಟಕದಲ್ಲೂ ಕೃಷಿ ವಿಶ್ವವಿದ್ಯಾಲಯ ಸ್ಥಾಪನೆಗೆ ಉತ್ಸುಕವಾಗಿದ್ದು, ನಮಗೆ 30 ಸಾವಿರ ಅಡಿ ಸ್ಥಳಾವಕಾಶ ಕಲ್ಪಿಸಿಕೊಡಬೇಕು ಎಂದು ಮನವಿ ಮಾಡಿದರು.