ಚಿಕ್ಕಮಗಳೂರಿನಲ್ಲಿ ಮಂಗನ ಕಾಯಿಲೆ ಭೀತಿ ಚಿಕ್ಕಮಗಳೂರು:ಕಾಡಂಚಿನ ತಾಲೂಕುಗಳಾದ ಕೊಪ್ಪ, ಎನ್.ಆರ್.ಪುರ, ಶೃಂಗೇರಿ ತಾಲೂಕುಗಳಲ್ಲಿ ಮಂಗನ ಕಾಯಿಲೆ ಪ್ರಕರಣಗಳು ಹೆಚ್ಚಾಗುತ್ತಿದ್ದು, ಆರೋಗ್ಯ ಇಲಾಖೆ ಜನರಿಗೆ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸುವಂತೆ ಸೂಚಿಸಿದೆ.
ಜಿಲ್ಲಾ ವೈದ್ಯಾಧಿಕಾರಿ ಅಶ್ವಥ್ ಬಾಬು ಮಾತನಾಡಿ, "ನಮ್ಮ ಜಿಲ್ಲೆಯಲ್ಲಿ ಇದುವರೆಗೂ 7 ಮಂಗನ ಕಾಯಿಲೆ ಪ್ರಕರಣಗಳು ವರದಿಯಾಗಿದೆ. ಇದರಲ್ಲಿ 79 ವರ್ಷದ ವೃದ್ಧರೊಬ್ಬರು ಬಹುಅಂಗಾಂಗ ವೈಫಲ್ಯದಿಂದ ಮೃತಪಟ್ಟಿದ್ದಾರೆ. ಇನ್ನುಳಿದ 6 ಮಂದಿಯಲ್ಲಿ ಮೂವರು ಚೇತರಿಸಿಕೊಂಡು ಮನೆಗೆ ಮರಳಿದ್ದಾರೆ. ಇನ್ನು ಮೂವರಿಗೆ ಕೊಪ್ಪ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಅವರಿಗೆ ಯಾವುದೇ ಗಂಭೀರ ಆರೋಗ್ಯ ಸಮಸ್ಯೆ ಇಲ್ಲ. ಕೆಲವೇ ದಿನಗಳಲ್ಲಿ ಅವರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುತ್ತಾರೆ. ಕೊಪ್ಪ ತಾಲೂಕಿನ ಒಎಲ್‌ವಿ ಎಸ್ಟೇಟ್ ಮತ್ತು ಬರೇಗುಂಜಿ ಗ್ರಾಮ ವ್ಯಾಪ್ತಿಯಲ್ಲಿ ಹೆಚ್ಚು ಮಂಗನ ಕಾಯಿಲೆ ಪ್ರಕರಣಗಳು ಕಂಡು ಬರುತ್ತಿವೆ" ಎಂದರು.
ಚಿಕಿತ್ಸೆಗೆ ಸನ್ನದ್ಧ: ಆ ಭಾಗದ ಸುತ್ತ ಫೀವರ್ ಸರ್ವೈಲೆನ್ಸ್ ಮಾಡುತ್ತಿದ್ದೇವೆ. ಆರೋಗ್ಯ ಇಲಾಖೆಯ ಸಿಬ್ಬಂದಿ ಸ್ಥಳದಲ್ಲೇ ಇದ್ದುಕೊಂಡು ಜನರು ಯಾವ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ತಿಳಿಸುತ್ತಿದ್ದಾರೆ. ನಾವು ಡೆಫಾ ತೈಲವನ್ನು ಪ್ರತಿ ಮನೆಗೆ ವಿತರಿಸುತ್ತಿದ್ದೇವೆ, ಜನರು ಹೊರಗೆ ಹೋಗುವಾಗ ಈ ತೈಲವನ್ನು ಹಚ್ಚಿಕೊಂಡು ಹೋದರೆ ಜಿಗಣೆಗಳು ಕಚ್ಚುವುದಿಲ್ಲ. ಕೊಪ್ಪಳದ ಆಸ್ಪತ್ರೆಯಲ್ಲಿ ಮಂಗಳ ಕಾಯಿಲೆಗೆ ಚಿಕಿತ್ಸೆ ನೀಡಲು ಸನ್ನದ್ಧವಾಗಿದ್ದೇವೆ. ಜನವರಿಯಿಂದ ಇಲ್ಲಿಯವರೆಗೆ ಜಿಲ್ಲೆಯಲ್ಲಿ 7 ಡೆಂಗ್ಯೂ ಪ್ರಕರಣಗಳು ವರದಿಯಾಗಿದೆ. 7 ಮಂದಿ ರೋಗಿಗಳು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಯಾವುದೇ ಸಾವು ಸಂಭವಿಸಿಲ್ಲ, ಮಲೇರಿಯಾ ಮತ್ತು ಚಿಕನ್ ಗುನ್ಯಾ ಪ್ರಕರಣಗಳು ಜಿಲ್ಲೆಯಲ್ಲಿ ಕಂಡು ಬಂದಿಲ್ಲ" ಎಂದು ತಿಳಿಸಿದರು.
ಜಿಲ್ಲಾ ಸರ್ವೇಕ್ಷಣಾ ಅಧಿಕಾರಿ ಡಾ.ಭರತ್ ಮಾತನಾಡಿ, "ಮಂಗನ ಕಾಯಿಲೆ ಇರುವುದು ದೃಢವಾದರೆ ಅವರನ್ನು ನಾವು ತಾಲೂಕು ಆಸ್ಪತ್ರೆಯಲ್ಲಿ ದಾಖಲಿಸಿಕೊಳ್ಳುತ್ತಿದ್ದೇವೆ. ಹೆಚ್ಚಿನ ಚಿಕಿತ್ಸೆ ಅಗತ್ಯ ಇದ್ದರೆ ಮಣಿಪಾಲ್ಗೆ ಕಳುಹಿಸುತ್ತೇವೆ. ಇಲ್ಲದಿದ್ದರೆ ಇಲ್ಲಿಯೇ ಚಿಕಿತ್ಸೆ ನೀಡಿ ಗುಣಮುಖರಾದ ಬಳಿಕ ಡಿಸ್ಚಾರ್ಜ್ ಮಾಡುತ್ತೇವೆ. ಸೋಂಕು ಬಾರದಂತೆ ಮಲೆನಾಡು ಭಾಗದಲ್ಲಿರುವವರು ಕಾಡಿಗೆ ಹೋಗುವುದಿದ್ದರೆ, ಆರೋಗ್ಯ ಇಲಾಖೆ ನೀಡಿರುವ ದೀಪ ಹೆಸರಿನ ಆಯಿಲ್ ಅನ್ನು ಮೈ, ಕೈ, ಕಾಲುಗಳಿಗೆ ಹಚ್ಚಬೇಕು. ಜೊತೆಗೆ ಆದಷ್ಟು ಮೈ ಮುಚ್ಚುವಂತಹ ಬಟ್ಟೆ ಧರಿಸಬೇಕು. ಮನೆಗೆ ಬಂದು ಬಿಸಿ ನೀರಿನ ಸ್ನಾನ ಮಾಡಬೇಕು" ಎಂದು ಹೇಳಿದರು.
ಇದನ್ನೂ ಓದಿ:ಕ್ಯಾಸನೂರು ಫಾರೆಸ್ಟ್ ಡಿಸೀಸ್ ಬಗ್ಗೆ ಭಯ ಬೇಡ, ಮುನ್ನಚ್ಚರಿಕೆ ಅಗತ್ಯ: ಮಧು ಬಂಗಾರಪ್ಪ