ಧಾರವಾಡ:"ಹನಿಟ್ರ್ಯಾಪ್ ಮಾಡಿ ಹಣಕ್ಕೆ ಬೇಡಿಕೆ ಇಡುತ್ತಿದ್ದ ಹುಬ್ಬಳ್ಳಿ ಹಾಗೂ ಧಾರವಾಡದ ನಾಲ್ವರನ್ನು ಬಂಧಿಸಲಾಗಿದೆ. ಧಾರವಾಡದ ಆಕಾಶ ಉಪ್ಪಾರ, ಹುಬ್ಬಳ್ಳಿಯ ಗಜಾಲಾಭಾನು, ರೇಣುಕಾ, ಮಲ್ಲಿಕಾಜಾನ್ ಎಂಬವರನ್ನು ಬಂಧಿಸಿ 4 ಮೊಬೈಲ್, 1 ಕಾರು, 5,50,000 ನಗದು ಹಣ, 85.05 ಗ್ರಾಂ ತೂಕದ 6,63,000 ರೂ ಬೆಲೆಬಾಳುವ ಚಿನ್ನಾಭರಣ ಹಾಗೂ 3 ಸಾವಿರ ರೂ ಮೌಲ್ಯದ ಬೆಳ್ಳಿ ಕಡಗ ಸೇರಿದಂತೆ ಒಟ್ಟು 14,73,000 ರೂ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ" ಎಂದು ಕಾನೂನು ಮತ್ತು ಸುವ್ಯವಸ್ಥೆ ಡಿಸಿಪಿ ಮಹಾನಿಂಗ ನಂದಗಾವಿ ತಿಳಿಸಿದ್ದಾರೆ.
"ಆರೋಪಿಗಳು ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತಿಗಳನ್ನು ಪರಿಚಯಿಸಿಕೊಂಡು ಬಳಿಕ ಭೇಟಿಯಾಗೋಣ ಎಂದು ಕರೆಸಿ, ಅವರ ಜೊತೆಗೆ ಸಲುಗೆಯಿಂದಿರುವ ವಿಡಿಯೋ ಮಾಡಿ ಹಣಕ್ಕೆ ಬೇಡಿಕೆ ಇಡುತ್ತಿದ್ದರು. ಹಣ ನೀಡದಿದ್ದರೆ ಮಹಿಳೆಯ ಜೊತೆಗಿನ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುವುದಾಗಿ ಬೆದರಿಸಿ ಹಣ ವಸೂಲಿ ಮಾಡುತ್ತಿದ್ದರು. ಬಂಧಿತರ ಪೈಕಿ ಆಕಾಶ ಉಪ್ಪಾರ ಮತ್ತು ರೇಣುಕಾ ಉಪ್ಪಾರ ದಂಪತಿಯಾಗಿದ್ದಾರೆ" ಎಂದು ಅವರು ಮಾಹಿತಿ ನೀಡಿದರು.