ಬೆಂಗಳೂರು: ''ಜೆಡಿಎಸ್ ಮತ್ತು ಬಿಜೆಪಿ ಮೈತ್ರಿ ಆಗಿದೆ. ಲೋಕಸಭೆ ಚುನಾವಣೆಯಲ್ಲಿ ರಾಜ್ಯದ ಎಲ್ಲ ಕ್ಷೇತ್ರಗಳಲ್ಲಿ ಎನ್ಡಿಎ ಮೈತ್ರಿಕೂಟದ ಅಭ್ಯರ್ಥಿಗಳನ್ನು ಒಳ್ಳೆಯ ಬಹುಮತದಿಂದ ಗೆಲ್ಲಿಸಬೇಕು'' ಎಂದು ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹೆಚ್.ಡಿ.ದೇವೇಗೌಡ ಅವರು ರಾಜ್ಯದ ಜನತೆಗೆ ಮನವಿ ಮಾಡಿದ್ದಾರೆ.
ಪಕ್ಷದ ರಾಜ್ಯ ಕಚೇರಿಯಲ್ಲಿ ಇಂದು ಹಮ್ಮಿಕೊಳ್ಳಲಾಗಿದ್ದ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ''ಮೈತ್ರಿಕೂಟದಲ್ಲಿ ಕೋಲಾರ, ಮಂಡ್ಯ ಹಾಗೂ ಹಾಸನ ಕ್ಷೇತ್ರಗಳನ್ನು ನಮಗೆ ಬಿಟ್ಟು ಕೊಟ್ಟಿದ್ದಾರೆ. ಉಳಿದ 25 ಕ್ಷೇತ್ರಗಳಲ್ಲಿ ಬಿಜೆಪಿಯ ಅಭ್ಯರ್ಥಿಗಳಿಗೆ ಮತ ನೀಡಿ'' ಎಂದು ಜನತೆಯನ್ನು ವಿನಂತಿ ಮಾಡಿಕೊಂಡರು.
''ಡಾ.ಸಿ.ಎನ್.ಮಂಜುನಾಥ್ ಅವರನ್ನು ನಮ್ಮ ಪಾರ್ಟಿಯಲ್ಲಿ ನಿಲ್ಲಿಸಬೇಕು ಅಂತ ಹೇಳಿ ಬಿಜೆಪಿ ಕೋರಿತ್ತು. ಇದಕ್ಕೆ ಕುಮಾರಸ್ವಾಮಿ ಅವರು ಒಪ್ಪಿಗೆ ನೀಡಿದ್ದಾರೆ. ಹಾಗೂ ಅದಕ್ಕೆ ಅಗತ್ಯವಾದ ಮಾತುಕತೆಗಳನ್ನು ಅವರೇ ನಡೆಸಿದ್ದಾರೆ. ನಂತರ ಮಂಜುನಾಥ್ ಅವರು ಯಡಿಯೂರಪ್ಪ ಅವರನ್ನು ಭೇಟಿ ಮಾಡಿ, ಆಶೀರ್ವಾದ ಪಡೆದಿದ್ದಾರೆ. ಅವರು ದೆಹಲಿಗೆ ತೆರಳಿ ಅಮಿಶ್ ಶಾ ಅವರನ್ನು ಭೇಟಿ ಮಾಡಲಿದ್ದಾರೆ'' ಎಂದು ಹೇಳಿದರು.
''ಡಾ.ಮಂಜುನಾಥ್ ಅವರ ಬಗ್ಗೆ ನನಗೆ ಗೌರವ, ಹೆಮ್ಮೆ ಇದೆ. ಜಯದೇವ ಆಸ್ಪತ್ರೆಯಲ್ಲಿ ಎರಡು ಸಾವಿರ ಬೆಡ್ಗಳನ್ನು ಮಾಡಿದ್ದಾರೆ. ಲಕ್ಷಾಂತರ ಜನರ ಜೀವ ಉಳಿಸಿದ್ದಾರೆ. ಅದು ದೊಡ್ಡ ಸಾಧನೆ. ಭಾರತದಲ್ಲಿ ಅಂತಹ ಸಾಧನೆ ಮಾಡಿರುವ ವ್ಯಕ್ತಿ ಯಾರಾದರೂ ಇದ್ದರೆ ಅದು ಡಾ.ಮಂಜುನಾಥ್ ಅವರು ಮಾತ್ರ. ಬಡವರಿಗೆ ಪುಕ್ಕಟೆಯಾಗಿ ಚಿಕಿತ್ಸೆ ನೀಡಿದ್ದಾರೆ. ಅಂತಹ ವ್ಯಕ್ತಿಯನ್ನು ಗೆಲ್ಲಿಸಿಕೊಳ್ಳಬೇಕು'' ಎಂದು ಕರೆ ನೀಡಿದರು.
''ಮಂಜುನಾಥ್ ಅವರ ಜವಾಬ್ದಾರಿಯನ್ನು ಕುಮಾರಸ್ವಾಮಿ ಅವರು ತೆಗೆದುಕೊಂಡಿದ್ದಾರೆ. ಅವರು ಬಿಜೆಪಿ ಜೊತೆ ಸೇರಿ ಕೆಲಸ ಮಾಡಲಿದ್ದಾರೆ. ಬೆಂಗಳೂರು ನಗರದಲ್ಲಿ ಮೂರು ಕ್ಷೇತ್ರ ಹಾಗೂ ಗ್ರಾಮೀಣದಲ್ಲಿ ಉಳಿದ ಕ್ಷೇತ್ರಗಳಿವೆ. ಇದು ನಿಮ್ಮ ಗಮನದಲ್ಲಿ ಇರಲಿ. ಮಂಡ್ಯ, ಹಾಸನವನ್ನು ಗೆಲ್ಲಬೇಕು ಹಾಗೂ ಮೈಸೂರು ಕ್ಷೇತ್ರದಲ್ಲಿ ಯದುವೀರ್ ಮಹಾರಾಜರು ಒಳ್ಳೆಯ ವ್ಯಕ್ತಿ. ತುಮಕೂರು ಕ್ಷೇತ್ರದಲ್ಲಿ ವಿ.ಸೋಮಣ್ಣ ಅವರನ್ನು ಗೆಲ್ಲಿಸಬೇಕು'' ಎಂದು ಮಹಿಳಾ ಕಾರ್ಯಕರ್ತರಿಗೆ ಸೂಚನೆ ನೀಡಿದರು.
ಮಹಿಳಾ ಮೀಸಲು ನೆನೆಗುದಿಗೆ ಬಿದ್ದಿತ್ತು:''ಕಳೆದ 25 ವರ್ಷಗಳಿಂದ ಮಹಿಳಾ ಮೀಸಲಾತಿ ವಿಧೇಯಕ ನೆನೆಗುದಿಗೆ ಬಿದ್ದಿತ್ತು. ಆಮೇಲೆ ಬಂದ ಯಾವ ಸರ್ಕಾರವೂ ಅದನ್ನು ಅಂಗೀಕಾರ ಮಾಡಲಿಲ್ಲ. ಮೋದಿ ಅವರ ಸರ್ಕಾರ ಅದನ್ನು ಸಾಕಾರ ಮಾಡಿದೆ. 2028ಕ್ಕೆ ಚುನಾವಣಾ ಮಹಿಳಾ ಮೀಸಲಾತಿ ಕೊಡುತ್ತೇವೆ. 9 ಸ್ಥಾನ ಕರ್ನಾಟಕದಲ್ಲಿ ಮಹಿಳೆಯರಿಗೆ ಎತ್ತಿ ಹಿಡಿಯುತ್ತೇವೆ. ಅಸೆಂಬ್ಲಿಯಲ್ಲಿ 80 ಸೀಟು ಮಹಿಳೆಯರಿಗೆ ಬರುತ್ತದೆ. ಮಹಿಳೆಯರಿಗೆ ಭವಿಷ್ಯದಲ್ಲಿ ಒಳ್ಳೆಯ ಕಾಲ ಬರುತ್ತದೆ'' ಎಂದು ಅವರು ಹೇಳಿದರು.
ಇದನ್ನೂ ಓದಿ:ಬಿಜೆಪಿ ಚಿಹ್ನೆ ಮೇಲೆ ಸ್ಪರ್ಧಿಸುವಂತೆ ಮಂಜುನಾಥ್ ಒಪ್ಪಿಸಿದ್ದು ನಾನೇ: ಕುಮಾರಸ್ವಾಮಿ