ಹಾಸನ:ಮಹಿಳೆ ಮೇಲಿನ ಅತ್ಯಾಚಾರ ಆರೋಪ ಪ್ರಕರಣ ಸಂಬಂಧ ಬಿಜೆಪಿ ಮುಖಂಡ ಹಾಗೂ ವಕೀಲ ದೇವರಾಜೇಗೌಡ ನ್ಯಾಯಾಂಗ ಬಂಧನ ಅವಧಿಯನ್ನು ಮತ್ತೆ 14 ದಿನಗಳ ಕಾಲ (ಜೂನ್ 7ರ ವರೆಗೆ) ವಿಸ್ತರಿಸಿ ಹಾಸನದ 2ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಆದೇಶಿಸಿದೆ. ನ್ಯಾಯಾಂಗ ಬಂಧನವು ಮುಕ್ತಾಯಗೊಂಡ ಹಿನ್ನೆಲೆಯಲ್ಲಿ ಶುಕ್ರವಾರ ಪೊಲೀಸರು ಅವರನ್ನು ಕೋರ್ಟ್ಗೆ ಹಾಜರುಪಡಿಸಿದ್ದರು.
ದೇವರಾಜೇಗೌಡ ವಿರುದ್ಧ ಅತ್ಯಾಚಾರ ಆರೋಪದ ಮೇಲೆ ಹೊಳೆನರಸೀಪುರ ಪೊಲೀಸ್ ಠಾಣೆಯಲ್ಲಿ ಮಹಿಳೆಯೊಬ್ಬರು ದೂರು ನೀಡಿದ್ದರು. ಪ್ರಕರಣ ಸಂಬಂಧ ಪೊಲೀಸರು ಮೇ 11ರಂದು ದೇವರಾಜೇಗೌಡರನ್ನು ಬಂಧಿಸಿದ್ದಾರೆ. ಆರಂಭದಲ್ಲಿ 14 ದಿನ ನ್ಯಾಯಾಂಗ ಬಂಧನಕ್ಕೆ ನೀಡಿ ಹಾಸನ ಜಿಲ್ಲೆಯ ಹೊಳೆನರಸೀಪುರ ಜೆಎಂಎಫ್ಸಿ ಕೋರ್ಟ್ ಆದೇಶಿಸಿತ್ತು.
ಈ ವೇಳೆ ಪೊಲೀಸರು ಹೆಚ್ಚಿನ ವಿಚಾರಣೆಗಾಗಿ 4 ದಿನ ತಮ್ಮ ಕಸ್ಟಡಿಗೆ ಅನುಮತಿ ಪಡೆದಿದ್ದರು. ಅದರಂತೆ ವಿಚಾರಣೆ ಮುಕ್ತಾಯ ಹಿನ್ನೆಲೆಯಲ್ಲಿ ಕೋರ್ಟ್ಗೆ ಹಾಜರುಪಡಿಸಿ ಬಳಿಕ ಮೇ 24ರ ವರೆಗೂ ಜೆಎಂಎಫ್ಸಿ ಕೋರ್ಟ್ ನ್ಯಾಯಾಂಗ ಬಂಧನಕ್ಕೆ ನೀಡಿತ್ತು. ಈ ಮಧ್ಯೆ ಒಂದು ದಿನ ಎಸ್ಐಟಿ ಕಸ್ಟಡಿಗೆ ನೀಡಿ ಕೋರ್ಟ್ ಆದೇಶಿಸಿತ್ತು. ಶುಕ್ರವಾರಕ್ಕೆ ಈ ನ್ಯಾಯಾಂಗ ಬಂಧನ ಅವಧಿ ಮುಗಿದಿತ್ತು.
ಇದೀಗ ಮತ್ತೆ 14 ದಿನಗಳ ವಿಸ್ತರಣೆ ಹಿನ್ನೆಲೆಯಲ್ಲಿ ಜೂನ್ 7ರ ವರೆಗೆ ದೇವರಾಜೇಗೌಡ ನ್ಯಾಯಾಂಗ ಬಂಧನದಲ್ಲಿರಬೇಕಾಗಿದೆ. ಈ ನಡುವೆ ಮೇ 28 ರಂದು ದೇವರಾಜೇಗೌಡರ ಜಾಮೀನು ಅರ್ಜಿ ವಿಚಾರಣೆ ನಡೆಯುವ ಸಾಧ್ಯತೆಯಿದೆ.
ಇದನ್ನೂ ಓದಿ:ಪೆನ್ಡ್ರೈವ್ ತಯಾರಿಸಿರುವುದೇ ಡಿ.ಕೆ.ಶಿವಕುಮಾರ್: ನನಗೆ 100 ಕೋಟಿ ಆಫರ್ ಕೊಟ್ಟಿದ್ದರು; ವಕೀಲ ದೇವರಾಜೇಗೌಡ ಆರೋಪ - Pen drive case