ಬೆಂಗಳೂರು: ರಾಜ್ಯದ ಬೇರೆ ಬೇರೆ ಕಡೆ ಬುಧವಾರ ಮುಂಜಾನೆ ಘಟಿಸಿದ ಎರಡು ರಸ್ತೆ ಅಪಘಾತಗಳಲ್ಲಿ ಕನಿಷ್ಠ 14 ಮಂದಿ ಸಾವನ್ನಪ್ಪಿದ್ದು, ಸುಮಾರು 19 ಮಂದಿ ಗಾಯಗೊಂಡಿದ್ದರು. ಉತ್ತರ ಕನ್ನಡ ಹಾಗೂ ರಾಯಚೂರು ಜಿಲ್ಲೆಗಳಲ್ಲಿ ಎರಡು ಪ್ರತ್ಯೇಕ ರಸ್ತೆ ಅಪಘಾತಗಳು ಸಂಭವಿಸಿವೆ.
ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದ ಕಾಗೇರಿ ಪೆಟ್ರೋಲ್ ಬಂಕ್ ಬಳಿ ಹಣ್ಣು ಹಾಗೂ ತರಕಾರಿ ಸಾಗಿಸುತ್ತಿದ್ದ ಟ್ರಕ್ 50 ಮೀಟರ್ ಆಳದ ಕಂದಕಕ್ಕೆ ಉರುಳಿ ಬಿದ್ದ ಪರಿಣಾಮ ಕನಿಷ್ಠ 10 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದು, ಹಲವರು ಗಂಭೀರವಾಗಿ ಗಾಯಗೊಂಡಿದ್ದರು. ರಾಯಚೂರಿನ ಸಿಂಧನೂರಿನಲ್ಲಿ ಇದೇ ರೀತಿ ವಾಹನವೊಂದು ಪಲ್ಟಿಯಾಗಿ ನಾಲ್ವರು ಸಾವನ್ನಪ್ಪಿದ್ದು, 10 ಜನರು ಗಾಯಗೊಂಡಿದ್ದರು. ಈ ಅಪಘಾತಗಳು ಇಡೀ ರಾಜ್ಯವನ್ನೇ ದುಃಖದ ಕಡಲಿಗೆ ದೂಡಿದೆ.
ಇತ್ತೀಚಿನ ವರ್ಷಗಳಲ್ಲಿ ರಾಜ್ಯದಲ್ಲಿ ಹಲವು ರಸ್ತೆ ಅಪಘಾತಗಳು ಸಂಭವಿಸಿದ್ದು, ಅವುಗಳ ಅಂಕಿ- ಅಂಶ ಮಾಹಿತಿ ಇಲ್ಲಿದೆ..
ವಾಹನ ಪಲ್ಟಿ ಅಪಘಾತಗಳು:
ವರ್ಷ | ಒಟ್ಟು ಅಪಘಾತಗಳು | ಸಾವನ್ನಪ್ಪಿದವರ ಸಂಖ್ಯೆ | ಗಾಯಗೊಂಡವರು | |
ಗಂಭೀರ ಗಾಯಗೊಂಡವರು | ಸಣ್ಣ ಪುಟ್ಟ ಗಾಯಗೊಂಡವರು | |||
2019 | 1634 | 391 | 1,000 | 1,228 |
2020 | 981 | 233 | 550 | 632 |
2021 | 1,091 | 265 | 651 | 808 |
2022 | 1,478 | 371 | 865 | 1,221 |
(ಮಾಹಿತಿ: ರಸ್ತೆ ಸಾರಿಗೆ ಸಚಿವಾಲಯ)
ಬೆಂಗಳೂರು ನಗರದಲ್ಲಿ 2015ರಿಂದ 2024ರವರೆಗೆ ವರದಿಯಾದ ಗಂಭೀರ ಹಾಗೂ ಗಂಭೀರವಲ್ಲದ ಪ್ರಕರಣಗಳ ಸಂಖ್ಯೆ ಹಾಗೂ ಅವುಗಳಲ್ಲಿ ಸಾವನ್ನಪ್ಪಿದ ಹಾಗೂ ಗಾಯಗೊಂಡವರ ಸಂಖ್ಯೆ:
ವರ್ಷ | ಗಂಭೀರ | ಸಾವನ್ನಪ್ಪಿದವರು | ಗಂಭೀರವಲ್ಲದ | ಗಾಯಗೊಂಡವರು | ಒಟ್ಟು |
2015 | 714 | 740 | 4,114 | 4,047 | 4,828 |
2016 | 754 | 793 | 6,752 | 4,193 | 7,506 |
2017 | 609 | 642 | 4,455 | 4,256 | 5,064 |
2018 | 661 | 684 | 3,950 | 4,133 | 4,611 |
2019 | 744 | 766 | 3,944 | 4,253 | 4,688 |
2020 | 334 | 344 | 1,594 | 1,678 | 1,928 |
2021 | 618 | 651 | 2,593 | 2,828 | 3,211 |
2022 | 751 | 771 | 3,072 | 3,218 | 3,823 |
2023 | 882 | 910 | 4,092 | 4,191 | 4,974 |
2024 (Oct) | 705 | 723 | 3,264 | 3,360 | 3,969 |
ಬೆಂಗಳೂರು ಸಂಚಾರ ಪೊಲೀಸರ (ಬಿಟಿಪಿ) ಅಂಕಿ - ಅಂಶಗಳ ಪ್ರಕಾರ, 2023 ರಲ್ಲಿ ಬೆಂಗಳೂರಿನಲ್ಲಿ 4,974 ರಸ್ತೆ ಅಪಘಾತಗಳು (ಸಂಚಾರ ಅಪಘಾತಗಳು) ದಾಖಲಾಗಿವೆ. 2022ರಲ್ಲಿ ಸಂಭವಿಸಿದ 3,823 ಅಪಘಾತಗಳಿಗಿಂತ ಇದು ಹೆಚ್ಚಾಗಿದೆ. ಒಂದು ವರ್ಷದಲ್ಲಿ ಅಪಘಾತಗಳ ಸಂಖ್ಯೆ ಶೇ 30ರಷ್ಟು ಹೆಚ್ಚಳವಾಗಿದೆ. 2017ರಲ್ಲಿ 5,064 ಅಪಘಾತಗಳು ದಾಖಲಾಗಿದ್ದವು. ಅದರ ನಂತರ ದಾಖಲಾದ ಅಪಘಾತಗಳಲ್ಲಿ ಇದು ಅತ್ಯಧಿಕವಾಗಿದೆ. ಲಾಕ್ಡೌನ್ಗಳಿಂದಾಗಿ 2020 ಮತ್ತು 2021ರಲ್ಲಿ ಅಪಘಾತಗಳ ಸಂಖ್ಯೆ ಕಡಿಮೆಯಾಗಿತ್ತು. ಆದರೆ ಇದೀಗ ಮತ್ತೆ ಕೋವಿಡ್ ಪೂರ್ವ ಮಟ್ಟವನ್ನು ಮೀರಿಸುವತ್ತ ಸಾಗುತ್ತಿದೆ.
ಎನ್ಸಿಆರ್ಬಿ 2021-22
ಕರ್ನಾಟಕದಲ್ಲಿ ಆಕಸ್ಮಿಕ ಸಾವು | ||
ವರ್ಷ | 2021 | 2022 |
ಆಕಸ್ಮಿಕ ಸಾವಿನ ಸಂಖ್ಯೆ | 25,278 | 29,090 |
ಪ್ರಾಕೃತಿಕ ವಿಕೋಪದಿಂದ ಸಾವು | 154 | 140 |
ಇತರ ಕಾರಣಗಳು | 25,124 | 28,950 |
ಕರ್ನಾಟಕದಲ್ಲಿ ಆಕಸ್ಮಿಕ ಸಾವಿನ ಪ್ರಮಾಣ | 37.7% | 43.20% |
ಕರ್ನಾಟಕದಲ್ಲಿ 2022ರಲ್ಲಿ ಒಟ್ಟು 29,090 ಆಕಸ್ಮಿಕ ಸಾವುಗಳು ವರದಿಯಾಗಿತ್ತು. ಎನ್ಸಿಆರ್ಬಿ ದತ್ತಾಂಶದ ವಿಶ್ಲೇಷಣೆ ಹೇಳುವಂತೆ, 2022ರಲ್ಲಿ ಕರ್ನಾಟಕದಲ್ಲಿ ಆಕಸ್ಮಿ ಸಾವಿನ ಸಂಖ್ಯೆಗಳು ಹೆಚ್ಚಾಗಿವೆ.
ಪ್ರಾಕೃತಿಕ ವಿಕೋಪಗಳಿಂದಾಗಿ 2022ರಲ್ಲಿ 140 ಸಾವುಗಳು ಸಂಭವಿಸಿದ್ದು, 2021ಕ್ಕಿಂತ ಕಡಿಮೆಯಾಗಿದೆ. 2021ರಲ್ಲಿ 154 ಸಾವು ಸಂಭವಿಸಿತ್ತು. 2022ರಲ್ಲಿ ಇತರ ಕಾರಣಗಳಿಂದ ಕರ್ನಾಟಕದಲ್ಲಿ 28,950 ಸಾವುಗಳು ಸಂಭವಿಸಿದ್ದರೆ, 2021ರಲ್ಲಿ 25,124 ಸಂಭವಿಸಿತ್ತು. ಎರಡು ವರ್ಷಗಳಿಗೆ ಹೋಲಿಸಿದರೆ, 2022ರಲ್ಲಿ ಇದು ಹೆಚ್ಚಾಗಿದೆ.
ರಾಜ್ಯದಲ್ಲಿ ಒಟ್ಟು ಅಪಘಾತ ಸಾವುಗಳ ಲಿಂಗವಾರು ವಿತರಣೆ:
ವರ್ಷ | ಪುರುಷರು | ಮಹಿಳೆಯರು | ತೃತೀಯ ಲಿಂಗಿಗಳು | ಒಟ್ಟು |
2021 | 20,801 | 4,475 | 2 | 25,278 |
2022 | 24,495 | 4,594 | 1 | 29,090 |
ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದವರು:
ವರ್ಷ | ಪ್ರಕರಣಗಳು | ಗಾಯಗೊಂಡವರು | ಸಾವನ್ನಪ್ಪಿದವರು |
2021 | 34,647 | 40,754 | 10,038 |
2022 | 39,765 | 48,154 | 11,705 |
ಇತ್ತೀಚೆಗೆ ರಾಜ್ಯದಲ್ಲಿ ಸಂಭವಿಸಿದ ರಸ್ತೆ ಅಪಘಾತಗಳು:
01/01/2024: ಬೆಂಗಳೂರಿನಲ್ಲಿ ಹೊಸ ವರ್ಷದ ಮುನ್ನಾ ದಿನ ಪಾರ್ಟಿಯಲ್ಲಿ ಪಾಲ್ಗೊಂಡು, ವಾಪಸ್ ಮನೆಗೆ ಹಿಂತಿರುಗುತ್ತಿದ್ದ ಮೂವರು ಸಾವನ್ನಪ್ಪಿದ್ದರೆ, ಇತರ 15 ಜನರು ವಿವಿಧ ಅಪಘಾತಗಳಲ್ಲಿ ಗಾಯಗೊಂಡಿದ್ದರು.
15/01/2024: ಬೆಂಗಳೂರು ಮತ್ತು ತುಮಕೂರಿನಲ್ಲಿ ವರದಿಯಾದ ಐದು ಅಪಘಾತಗಳಲ್ಲಿ ಆರು ಜನರು ಸಾವನ್ನಪ್ಪಿದ್ದರು. ಖಾಸಗಿ ಕಂಪನಿ ಉದ್ಯೋಗಿ ಚಂದ್ರಶೇಖರ್ ಬಿಎಲ್ (48) ತಮ್ಮ ಇಬ್ಬರು ಮಕ್ಕಳಾದ ಲೋಹಿತ್ (13) ಮತ್ತು ಗ್ರೀಷ್ಮಾ (9) ಅವರೊಂದಿಗೆ ಹತ್ತಿರದ ಹೋಟೆಲ್‌ಗೆ ಬೈಕ್‌ನಲ್ಲಿ ಹೋಗುತ್ತಿದ್ದಾಗ, ಹೆರೋಹಳ್ಳಿ ಕ್ರಾಸ್ ಬಳಿ ಆಟೋವೊಂದು ಅವರ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿತ್ತು. ಪರಿಣಾಮ ಚಂದ್ರಶೇಖರ್ ಕೆಳಗೆ ಬಿದ್ದು ತಲೆಗೆ ಮಾರಣಾಂತಿಕ ಗಾಯಗಳಾಗಿತ್ತು. ಅವರ ಮಕ್ಕಳು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದರು. ದೇವನಹಳ್ಳಿ ಬಳಿ ವೇಗವಾಗಿ ಬಂದ ಮೋಟಾರ್‌ಬೈಕ್ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ದಿನಗೂಲಿ ಕೆಲಸಗಾರ ನಾಗೇಶ್ ಸಾವನ್ನಪ್ಪಿದ್ದರು.
ಬೇಗೂರು - ಎಲೆಕ್ಟ್ರಾನಿಕ್ಸ್ ಸಿಟಿ ರಸ್ತೆಯಲ್ಲಿ ಬೆಳಗಿನ ಜಾವ 1.30ಕ್ಕೆ ಬೈಕ್‌ನಲ್ಲಿ ಪ್ರಯಾಣಿಸುತ್ತಿದ್ದ ಖಾಸಗಿ ಕಂಪನಿ ಉದ್ಯೋಗಿಯೊಬ್ಬರು ರಸ್ತೆಮಾರ್ಗಕ್ಕೆ ಡಿಕ್ಕಿ ಹೊಡೆದ ಪರಿಣಾಮ ಸಾವನ್ನಪ್ಪಿದ್ದರು. ಬೆಳಗಿನ ಜಾವ 2 ಗಂಟೆಗೆ, ಬಾಣಸವಾಡಿಯ ಸಿಎಂಆರ್ ರಸ್ತೆಯಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಮೆಲ್ವಿನ್ ಜೋಶುವಾ (25) ಅವರ ಕಾರು ನಿಲ್ಲಿಸಿದ್ದ ವಾಹನಕ್ಕೆ ನಂತರ ಮನೆಯೊಂದರ ಗೇಟ್ಗೆ ಡಿಕ್ಕಿ ಹೊಡೆದ ಪರಿಣಾಮ ಗಾಯಗೊಂಡು ಸಾವನ್ನಪ್ಪಿದ್ದರು. ಬೆಂಗಳೂರು-ಪುಣೆ ಹೆದ್ದಾರಿಯ ಸಿರಾ ಬಳಿ ವೇಗವಾಗಿ ಬಂದ ಟ್ರಕ್ ಡಿಕ್ಕಿ ಹೊಡೆದ ಪರಿಣಾಮ 45 ವರ್ಷದ ವಕೀಲ ಮಹೇಶ್ ಕಮ್ಮಾರ್ ಮತ್ತು ಅವರ ಸ್ನೇಹಿತ ಬ್ಯಾಂಕ್ ಉದ್ಯೋಗಿ ಉಮೇಶ್ ಕುಮಾರ್ (40) ಸಾವನ್ನಪ್ಪಿದ್ದರು.
16/01/2024: ಬೆಂಗಳೂರು ನಗರ ಹಾಗೂ ನೆಲಮಂಗಲದಲ್ಲಿ ವರದಿಯಾದ ಅಪಘಾತಗಳಲ್ಲಿ ತಂದೆ- ಮಗಳು ಸೇರಿದಂತೆ ನಾಲ್ವರು ಸಾವನ್ನಪ್ಪಿದ್ದರು.
19/01/2024: ಚಿತ್ರದುರ್ಗ ಜಿಲ್ಲೆಯ ಮೊಲಕಾಲ್ಮೂರು ಬಳಿ ಕುಟುಂಬದ ಹಿರಿಯರೊಬ್ಬರ ಮೃತದೇಹವನ್ನು ಅಂತ್ಯಕ್ರಿಯೆಗೆ ಸಾಗಿಸುತ್ತಿದ್ದ ಕಾರಿನ ಮುಂಭಾಗದ ಚಕ್ರ ಸ್ಫೋಟಗೊಂಡು ಕಾರು ರಸ್ತೆಗೆ ಉರುಳಿ ಕಾರಿನಲ್ಲಿದ್ದ ಮೂವರು ಸಾವನ್ನಪ್ಪಿದ್ದರು.
07/04/2024: ಬೆಂಗಳೂರಿನಿಂದ ಗೋಕಾಕ್ಗೆ ಹೋಗುತ್ತಿದ್ದ ಖಾಸಗಿ ಬಸ್ ಬೆಳಗ್ಗೆ 4.30ರ ಸುಮಾರಿಗೆ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ಬಳಿ ಉರುಳಿ ಬಿದ್ದ ಪರಿಣಾಮ ಮೂವರು ಪ್ರಯಾಣಿಕರು ಸಾವನ್ನಪ್ಪಿದ್ದು, ಕನಿಷ್ಠ 35 ಜನರು ಗಾಯಗೊಂಡಿದ್ದರು.
22/04/2024: ತುಮಕೂರು ರಸ್ತೆಯ ಮಾದಾವರ ಬಳಿ ವೇಗವಾಗಿ ಬಂದ ಮಾರುತಿ ಓಮ್ನಿ ವ್ಯಾನ್ ಡಿಕ್ಕಿ ಹೊಡೆದು ಬೆಂಕಿ ಹೊತ್ತಿಕೊಂಡ ಪರಿಣಾಮ 16 ವರ್ಷದ ಬಾಲಕಿ ಸುಟ್ಟು ಕರಕಲಾಗಿದ್ದು, ಆಕೆಯ ಕುಟುಂಬದ ಏಳು ಸದಸ್ಯರು ಗಾಯಗೊಂಡಿದ್ದರು.
24/05/2024: ರಾಜ್ಯದಲ್ಲಿ ನಡೆದ ಎರಡು ಪ್ರತ್ಯೇಕ ಅಪಘಾತಗಳಲ್ಲಿ ಎಂಟು ಜನರು ಸಾವನ್ನಪ್ಪಿದ್ದು, 18 ಜನರು ಗಾಯಗೊಂಡಿದ್ದರು. ಹಾವೇರಿ ಜಿಲ್ಲೆಯ ರಾಣೆಬೆನ್ನೂರಿನಲ್ಲಿ NH-48ರ ಕೆಳ ಸೇತುವೆಯ ಕೆಳಗೆ ಬಹುಪಯೋಗಿ ವಾಹನವೊಂದು ಉರುಳಿ ಬಿದ್ದ ಕಾರಣ ಸ್ಥಳದಲ್ಲೇ ನಾಲ್ವರು ಪ್ರಯಾಣಿಕರು ಸಾವನ್ನಪ್ಪಿದ ಘಟನೆ ನಡೆದಿತ್ತು.
26/05/2024: ಹಾಸನ ನಗರದ ಹೊರವಲಯದಲ್ಲಿ ಬೆಂಗಳೂರು - ಮಂಗಳೂರು ರಾಷ್ಟ್ರೀಯ ಹೆದ್ದಾರಿ-75 ರಲ್ಲಿ ಬೆಳಗ್ಗೆ 5.50ಕ್ಕೆ ಸಂಭವಿಸಿದ ಅಪಘಾತದಲ್ಲಿ, ಕಾರು ಮೀಡಿಯನ್ ದಾಟಿ ವಿರುದ್ಧ ದಿಕ್ಕಿನಲ್ಲಿ ಬರುತ್ತಿದ್ದ ಟ್ರಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಒಂದು ಮಗು ಸೇರಿದಂತೆ ಒಂದೇ ಕುಟುಂಬದ ಆರು ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದರು.
27/05/2024: ಕರ್ನಾಟಕದಲ್ಲಿ 24 ಗಂಟೆಗಳಲ್ಲಿ ಎಂಟು ಪಾದಚಾರಿಗಳು, 30 ಸವಾರರು ಸೇರಿದಂತೆ 51 ಜನರು ಸಾವನ್ನಪ್ಪಿದ್ದರು.
07/06/2024: ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ನಗರಗೆರೆಯ ವಟದಹೊಸಹಳ್ಳಿ ಬಳಿ ಕಾರು ಕಂದಕಕ್ಕೆ ಉರುಳಿ ಮೂವರು ಸಾವನ್ನಪ್ಪಿದ್ದು, ಒಬ್ಬರು ಗಂಭೀರ ಗಾಯಗೊಂಡಿದ್ದರು.
28/06/2024: ಕರ್ನಾಟಕದ ಹಾವೇರಿ ಜಿಲ್ಲೆಯ ಪುಣೆ - ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಬೆಳಗಿನ ಜಾವ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಒಟ್ಟು 13 ಜನರು ಸಾವನ್ನಪ್ಪಿದ್ದರು.
18/08/2024: ಗದಗ ಜಿಲ್ಲೆಯ ನರಗುಂದ ತಾಲೂಕಿನ ಕೊಣ್ಣೂರು ಬಳಿ ಕಾರು ಮತ್ತು ಕೆಎಸ್‌ಆರ್‌ಟಿಸಿ ಬಸ್ ನಡುವೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ನಾಲ್ವರು ಸಾವನ್ನಪ್ಪಿದ್ದರು.
06/09/2024: ಉತ್ತರ ಕರ್ನಾಟಕದಲ್ಲಿ ನಡೆದ ಮೂರು ವಿಭಿನ್ನ ದ್ವಿಚಕ್ರ ವಾಹನ ಅಪಘಾತಗಳಲ್ಲಿ ಪೊಲೀಸ್, ದಂತವೈದ್ಯ ಮತ್ತು ಎಂಜಿನಿಯರ್ ಸೇರಿದಂತೆ ಎಂಟು ಸವಾರರು ಸಾವನ್ನಪ್ಪಿದ್ದರು.
08/09/2024: ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಕಟಗೊಂಡನಹಳ್ಳಿಯಲ್ಲಿ ಎರಡು ಕಾರುಗಳು ಮುಖಾಮುಖಿ ಡಿಕ್ಕಿಯಾಗಿ, ಘಟನೆಯಲ್ಲಿ ಪಾವಗಡ ಕುಟುಂಬದ ಮೂವರು ಸೇರಿದಂತೆ ಐದು ಜನರು ಪ್ರಾಣ ಕಳೆದುಕೊಂಡಿದ್ದರು.
02/12/2024: ಸಿರಾ ತಾಲೂಕಿನ ಚಿಕ್ಕನಹಳ್ಳಿ ಮೇಲ್ಸೇತುವೆಯಲ್ಲಿ ಬಸ್ ವಿಭಜಕಕ್ಕೆ ಡಿಕ್ಕಿ ಹೊಡೆದ ಪರಿಣಾಮ ಮೂವರು ಮಹಿಳೆಯರು ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದರು.
25/12/2024: ಹಾವೇರಿ ಜಿಲ್ಲೆಯಲ್ಲಿ ಎಸ್‌ಯುವಿ ಮತ್ತು ಕಾರು ಮುಖಾಮುಖಿ ಡಿಕ್ಕಿಯಾಗಿ 11 ವರ್ಷದ ಬಾಲಕ ಸೇರಿದಂತೆ ಒಂದೇ ಕುಟುಂಬದ ನಾಲ್ವರು ಸಾವನ್ನಪ್ಪಿದ್ದರು.
ಇದನ್ನೂ ಓದಿ: ಯಲ್ಲಾಪುರ, ಸಿಂಧನೂರಿನ ಪ್ರತ್ಯೇಕ ಅಪಘಾತದಲ್ಲಿ 14 ಜನ ಸಾವು: ಸರ್ಕಾರದಿಂದ ತಲಾ ₹3 ಲಕ್ಷ ಪರಿಹಾರ