ಕರ್ನಾಟಕ

karnataka

ETV Bharat / state

ಉದ್ಯೋಗ ಖಾತ್ರಿಯಲ್ಲಿ ಅವ್ಯವಹಾರ: 27 ಪಿಡಿಒಗಳ ಅಮಾನತುಗೊಳಿಸಿದ ರಾಯಚೂರು ಜಿಪಂ ಸಿಇಒ - ಮಹಾತ್ಮಗಾಂಧಿ ಉದ್ಯೋಗ ಖಾತರಿ ಯೋಜನೆ

ದೇವದುರ್ಗ ತಾಲೂಕಿನಲ್ಲಿನ ಗ್ರಾಮ ಪಂಚಾಯಿತಿಗಳಲ್ಲಿ ನಡೆದ ಅವ್ಯವ್ಯಹಾರ ಪ್ರಕರಣ ಸಂಬಂಧ 27 ಪಿಡಿಒಗಳನ್ನು ಅಮಾನತು ಮಾಡಿಸಲಾಗಿದೆ ಎಂದು ಜಿಪಂ ಸಿಇಒ ಮಾಹಿತಿ ನೀಡಿದ್ದಾರೆ.

Etv Bharat
Etv Bharat

By ETV Bharat Karnataka Team

Published : Jan 20, 2024, 8:43 PM IST

Updated : Jan 20, 2024, 9:27 PM IST

ರಾಯಚೂರು ಜಿಪಂ ಸಿಇಒ

ರಾಯಚೂರು: ದೇವದುರ್ಗ ತಾಲೂಕಿನಲ್ಲಿ ಮಹಾತ್ಮಗಾಂಧಿ ಉದ್ಯೋಗ ಖಾತರಿ ಯೋಜನೆಯಡಿಯಲ್ಲಿ ನಡೆದ ಅವ್ಯವಹಾರ ಪ್ರಕರಣ ಸಂಬಂಧ ಸರ್ಕಾರದ ಆದೇಶದ ಮೇರೆಗೆ ಒಟ್ಟು 32 ಪಿಡಿಒಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಇದರಲ್ಲಿ ನಮ್ಮ ಜಿಲ್ಲೆಯಲ್ಲಿರುವ 27 ಪಿಡಿಒಗಳನ್ನು ಅಮಾನತುಗೊಳಿಸಲಾಗಿದೆ. ಬೇರೆ ಜಿಲ್ಲೆಗೆ ವರ್ಗಾವಣೆಯಾಗಿರುವ ಇನ್ನುಳಿದ ಐವರು ಪಿಡಿಒಗಳ ಅಮಾನತು ಕುರಿತು ಸರ್ಕಾರಕ್ಕೆ ಪತ್ರ ಬರೆದಿರುವುದಾಗಿ ರಾಯಚೂರು ಜಿಲ್ಲಾ ಪಂಚಾಯಿತಿ ಸಿಇಒ ರಾಹುಲ್ ತುಕಾರಾಮ್ ಪಾಂಡ್ವೆ ಮಾಹಿತಿ ನೀಡಿದ್ದಾರೆ.

ಪ್ರಕರಣ ಸಂಬಂಧ ಅಂತಿಮ ವರದಿ ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಜೊತೆಗೆ ವರದಿಯನ್ನು ಇನ್ನೊಮ್ಮೆ ಪರಿಶೀಲಿಸಿ ಸಂಬಂಧಿತ ಆರೋಪದ ಮೇಲೆ ಎಫ್​ಐಆರ್ ದಾಖಲಿಸಲಾಗುವುದು ಎಂದು ಸಿಇಒ ತಿಳಿಸಿದರು.

ಜಿಲ್ಲೆಯ ದೇವದುರ್ಗ ತಾಲೂಕಿನಲ್ಲಿ ಉದ್ಯೋಗ ಖಾತ್ರೆ ಯೋಜನೆಯಡಿಯಲ್ಲಿ ಕೋಟ್ಯಂತರ ರೂ ಅವ್ಯವಹಾರವಾಗಿದೆ ಎಂಬ ಆರೋಪದ ಮೇಲೆ 33 ಗ್ರಾಪಂಗಳನ್ನು ವಿಶೇಷ ಸಾಮಾಜಿಕ ಪರಿಶೋಧನೆಗೆ ಒಳಪಡಿಸಲಾಗಿತ್ತು. ಮಧ್ಯಂತರ ವರದಿಯಲ್ಲಿ ಕರ್ತವ್ಯಲೋಪ ಮತ್ತು ಹಣ ದುರುಪಯೋಗ ನಡೆದಿರುವುದು ಮೇಲ್ನೋಟಕ್ಕೆ ದೃಢಪಟ್ಟಿತ್ತು. ಈ ಕುರಿತಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆಯ ಅಧಿಕಾರಿಗಳು ಇತ್ತೀಚೆಗೆ ಅವ್ಯವಹಾರದಲ್ಲಿ ಭಾಗಿಯಾಗಿರುವ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸುವಂತೆ ನಿರ್ದೇಶಿಸಿದ್ದರು. ಮೇಲಧಿಕಾರಿಗಳ ನಿರ್ದೇಶನದ ಮೇರೆಗೆ ಬುಧವಾರ ಜಿ.ಪಂ. ಸಿಇಒ ರಾಹುಲ್ ತುಕಾರಾಮ್ ಪಾಂಡ್ವೆ ಅವರು ಅವ್ಯವಹಾರದಲ್ಲಿ ಭಾಗಿಯಾಗಿರುವ ಪಿಡಿಒಗಳ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿ ವರದಿ ನೀಡುವಂತೆ ದೇವದುರ್ಗ ತಾಲೂಕು ಪಂಚಾಯಿತಿ ಇಒಗೆ ಸೂಚಿಸಿದ್ದರು.

ಇದನ್ನೂ ಓದಿ: ರಾಯಚೂರು: ಉದ್ಯೋಗ ಖಾತ್ರಿ ಯೋಜನೆಯಲ್ಲಿ ಭಾರಿ ಅವ್ಯವಹಾರ; ಪ್ರಕರಣ ದಾಖಲು

Last Updated : Jan 20, 2024, 9:27 PM IST

ABOUT THE AUTHOR

...view details