ಬೆಳಗಾವಿ:ರಾಜ್ಯದಲ್ಲಿ ಡೆಂಗ್ಯೂ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿವೆ. ದೇಹದಲ್ಲಿ ಕೆಂಪು ರಕ್ತ ಕಣಗಳ ಪ್ರಾಮುಖ್ಯತೆ ಎಷ್ಟಿದೆಯೋ, ಅಷ್ಟೇ ಪ್ರಾಮುಖ್ಯತೆ ಬಿಳಿ ರಕ್ತ ಕಣಗಳಿಗೆ ಕೂಡ ಇದೆ. ಪ್ರಮುಖವಾಗಿ ದೇಹದ ಸೋಂಕುಗಳ ವಿರುದ್ಧ ಹೋರಾಡುವ ಶಕ್ತಿಯನ್ನು ಬಿಳಿ ರಕ್ತ ಕಣಗಳು ಹೊಂದಿದ್ದು, ದೇಹದ ರೋಗ ನಿರೋಧಕ ಶಕ್ತಿ ಹೆಚ್ಚಿಸುವಲ್ಲಿಯೂ ಇವುಗಳ ಪಾತ್ರ ಪ್ರಮುಖವಾಗಿದೆ. ಬಿಳಿ ರಕ್ತ ಕಣಗಳನ್ನು ಹೇಗೆ ಕಾಪಾಡಿಕೊಳ್ಳಬೇಕು ಎಂದು ತಜ್ಞ ವೈದ್ಯರು ಕೆಲವು ಸಲಹೆ ನೀಡಿದ್ದಾರೆ.
ಹೆದರಿಕೆ ಬೇಡ:ಬೆಳಗಾವಿ ಬಿಮ್ಸ್ ಆಸ್ಪತ್ರೆ ನಿರ್ದೇಶಕ ಡಾ. ಅಶೋಕಕುಮಾರ ಶೆಟ್ಟಿ ಈಟಿವಿ ಭಾರತ ಜೊತೆಗೆ ಮಾತನಾಡಿ, ''ಆರೋಗ್ಯವಂತ ವ್ಯಕ್ತಿಯಲ್ಲಿ 1.5 ದಿಂದ 3.5 ಲಕ್ಷದವರೆಗೆ ಪ್ಲೇಟ್ ಲೇಟ್ಸ್ ಇರುತ್ತವೆ. ಯಾವುದೇ ವ್ಯಕ್ತಿ ಡೆಂಗ್ಯೂ ಬಾಧಿತನಾದರೆ ಆತನ ದೇಹದಲ್ಲಿ ಬಿಳಿ ರಕ್ತಕಣಗಳು ಹಂತ ಹಂತವಾಗಿ ಕಡಿಮೆ ಆಗುತ್ತವೆ. ಇಂಥ ಸಂದರ್ಭದಲ್ಲಿ ಯಾರೂ ಗಾಬರಿ ಪಡುವ ಅವಶ್ಯಕತೆ ಇಲ್ಲ. ಹೈಡ್ರೇಶನ್ ಕಡಿಮೆ ಆಗದಂತೆ ನೋಡಿಕೊಳ್ಳಬೇಕಷ್ಟೆ. ಕಿವಿ ಹಣ್ಣು ಮತ್ತು ಪಪ್ಪಾಯಿ ಹಣ್ಣು ಹೆಚ್ಚಿಗೆ ತಿಂದರೆ ರಕ್ತದ ಕಣಗಳು ಏರುತ್ತಾ ಹೋಗುತ್ತವೆ. ಇನ್ನು ಬಿಳಿ ರಕ್ತ ಕಣಗಳು ಕಡಿಮೆಯಾದರೆ ರಕ್ತಸ್ರಾವ ಆಗುತ್ತದೆ. ಬ್ರೆಶ್ ಮಾಡುವಾಗ ಹಲ್ಲಿನ ದವಡೆಯಲ್ಲಿ ರಕ್ತ ಬರುತ್ತದೆ. ಬಹಳ ಕಡಿಮೆಯಾದರೆ ದೇಹದ ಒಳಗೆ ರಕ್ತ ಸ್ರಾವವಾಗುವ ಸಾಧ್ಯತೆ ಇರುತ್ತದೆ. ಹಣ್ಣುಗಳನ್ನು ತಿಂದು ಹೈಡ್ರೇಶನ್ ಕಡಿಮೆ ಆಗದಂತೆ ಸರಿಯಾಗಿ ನೋಡಿಕೊಂಡರೆ ಯಾವುದೇ ಸಮಸ್ಯೆ ಉದ್ಭವಿಸುವುದಿಲ್ಲ'' ಎಂದು ವಿವರಿಸಿದರು.
''ಜಿಲ್ಲಾಸ್ಪತ್ರೆಯಲ್ಲಿ ದಾಖಲಾಗುವ ರೋಗಿಗಳಿಗೆ ರಕ್ತದ ಕಣಗಳ ಅವಶ್ಯಕತೆ ಇದ್ದರೆ ಹಾಕುತ್ತಿದ್ದೇವೆ. ಬಿಪಿಎಲ್ ಕಾರ್ಡ್ ಹೊಂದಿದ್ದರೆ, ಪೂರ್ಣ ಉಚಿತ ಮತ್ತು ಎಪಿಎಲ್ ಕಾರ್ಡ್ ಇದ್ದವರಿಗೆ ಸರ್ಕಾರದ ನಿಯಮಾನುಸಾರ ಕನಿಷ್ಠ ಶುಲ್ಕ ಪಡೆದು ರಕ್ತದ ಕಣಗಳನ್ನು ಹಾಕಲಾಗುತ್ತಿದೆ. ಶಿಬಿರಗಳಿಂದ ಸಂಗ್ರಹಿಸಿರುವ ರಕ್ತವನ್ನು ನಮ್ಮ ರಕ್ತ ಭಂಡಾರದಲ್ಲಿ ಶೇಖರಿಸಿಡುತ್ತೇವೆ. ಇದರಲ್ಲಿ ರಕ್ತದ ಕಣಗಳನ್ನು ಬೇರ್ಪಡಿಸಿಟ್ಟಿರುತ್ತೇವೆ. ಅವಶ್ಯಕತೆ ಇರುವ ರೋಗಿಗಳಿಗೆ ಅವುಗಳನ್ನು ಉಪಯೋಗಿಸುತ್ತೇವೆ. ಸದ್ಯಕ್ಕೆ ನಮ್ಮಲ್ಲಿ ರಕ್ತದ ಕಣಗಳು ಸಾಕಷ್ಟು ಪ್ರಮಾಣದಲ್ಲಿ ಲಭ್ಯಯಿವೆ. ಹಾಗಾಗಿ, ಡೆಂಗ್ಯೂ ಹೆಚ್ಚಾದರೂ ರೋಗಿಗಳಿಗೆ ಚಿಕಿತ್ಸೆ ನೀಡಲು ಬೆಡ್, ಔಷಧಿ ಸೇರಿ ಎಲ್ಲ ರೀತಿ ವ್ಯವಸ್ಥೆ ಮಾಡಿಕೊಂಡಿದ್ದೇವೆ'' ಎಂದು ಡಾ.ಅಶೋಕಕುಮಾರ ಶೆಟ್ಟಿ ಸಾರ್ವಜನಿಕರಿಗೆ ಧೈರ್ಯ ತುಂಬಿದರು.