ಕರ್ನಾಟಕ

karnataka

ETV Bharat / state

ಬೆಳಗಾವಿಯಲ್ಲಿ ಹೆಚ್ಚುತ್ತಿದೆ ಡೆಂಗ್ಯೂ ಪ್ರಕರಣ: ಒಂದೇ ತಿಂಗಳಲ್ಲಿ 68 ಕೇಸ್ ದೃಢ; ಕುಂದಾನಗರಿ ಜನತೆಗೆ ಡಿಹೆಚ್ಒ ಅಭಯ - Dengue in Belagavi

ಬೆಳಗಾವಿ ಜಿಲ್ಲೆಯಲ್ಲೂ ಡೆಂಗ್ಯೂ ಹಾವಳಿ ಅಧಿಕವಾಗುತ್ತಿದ್ದು, ಡೆಂಗ್ಯೂ ನಿಯಂತ್ರಣಕ್ಕೆ ಆರೋಗ್ಯಾಧಿಕಾರಿಗಳು ಜಾಗೃತಿ ಮೂಡಿಸುತ್ತಿದ್ದು, ಭಯ ಬೇಡ ಎಂದು ಭರವಸೆ ನೀಡುತ್ತಿದ್ದಾರೆ.

By ETV Bharat Karnataka Team

Published : Jul 4, 2024, 1:26 PM IST

Updated : Jul 4, 2024, 3:32 PM IST

ಬೆಳಗಾವಿಯಲ್ಲಿ ಹೆಚ್ಚುತ್ತಿದೆ ಡೆಂಗ್ಯೂ ಪ್ರಕರಣ
ಬೆಳಗಾವಿಯಲ್ಲಿ ಹೆಚ್ಚುತ್ತಿದೆ ಡೆಂಗ್ಯೂ ಪ್ರಕರಣ (ETV Bharat)

ಬೆಳಗಾವಿಯಲ್ಲಿ ಡೆಂಗ್ಯೂ ಹೆಚ್ಚುತ್ತಿದ್ದು, ತಡೆಗಟ್ಟಲು ಕ್ರಮ ಹಾಗೂ ರೋಗಿಗಳಿಗೆ ನೀಡುವ ಚಿಕಿತ್ಸೆ ಬಗ್ಗೆ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಮಹೇಶ ಕೋಣಿ ಮಾಹಿತಿ (ETV Bharat)

ಬೆಳಗಾವಿ:ಒಂದೆಡೆ ಸತತ ಮಳೆ, ಮತ್ತೊಂದೆಡೆ ಡೆಂಗ್ಯೂ ಪ್ರಕರಣಗಳು ಹೆಚ್ಚಾಗುತ್ತಿದ್ದು ಜಿಲ್ಲೆಯ ಜನರು ಆತಂಕಕ್ಕೆ ಒಳಗಾಗಿದ್ದಾರೆ. ಕಳೆದ ವರ್ಷಕ್ಕೆ ಹೋಲಿಸಿದರೆ ಬೆಳಗಾವಿಯಲ್ಲಿ ಶೇ.45ರಷ್ಟು ಪ್ರಕರಣಗಳು ಹೆಚ್ಚು ದಾಖಲಾಗಿವೆ. ಜೂನ್ ಒಂದೇ ತಿಂಗಳಲ್ಲಿ 68 ಕೇಸ್ ದೃಢಪಟ್ಟಿವೆ. ಹಾಗಾಗಿ, ಡೆಂಗ್ಯೂ ನಿಯಂತ್ರಣಕ್ಕೆ ಆರೋಗ್ಯಾಧಿಕಾರಿಗಳು ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ.

ಡೆಂಗ್ಯೂ ಪ್ರಮಾಣದ ಜತೆ ಶೇ.21ರಷ್ಟು ಪರೀಕ್ಷೆಯೂ ಹೆಚ್ಚಾಗಿದೆ. ಕಳೆದ ವರ್ಷ ಜನವರಿಯಿಂದ ಜೂನ್ ತಿಂಗಳವರೆಗೆ 1,237 ಜನರನ್ನು ಪರೀಕ್ಷೆ ಮಾಡಲಾಗಿತ್ತು. ಆ ಪೈಕಿ 101 ಕೇಸ್ ಪಾಸಿಟಿವ್ ಬಂದಿದ್ದವು. ಅದೇ ರೀತಿ ಈ ವರ್ಷ ಜನವರಿಯಿಂದ ಜೂನ್ ವರೆಗೆ 1,490 ಜನರನ್ನು ಪರೀಕ್ಷಿಸಲಾಗಿದೆ. ಅದರಲ್ಲಿ 177 ಪಾಸಿಟಿವ್ ಕೇಸ್ ದೃಢಪಟ್ಟಿವೆ. ಹಾಗಾಗಿ, ಶೇ.45ರಷ್ಟು ಕೇಸ್​ಗಳು ಹೆಚ್ಚಾಗಿವೆ.

ಇನ್ನು ಎರಡು ಸಂಶಯಸ್ಪಾದ ಸಾವು ಪ್ರಕರಣಗಳಾಗಿದ್ದು, ಅವು ಡೆಂಗ್ಯೂ ಎಂದು ಖಚಿತವಾಗಿಲ್ಲ. ಹೋದ ವರ್ಷ ಬೆಳಗಾವಿ, ಬೈಲಹೊಂಗಲ ಮತ್ತು ಖಾನಾಪುರ ತಾಲ್ಲೂಕುಗಳಲ್ಲಿ ಹೆಚ್ಚು ಕೇಸ್​ಗಳು ಕಂಡು ಬಂದಿದ್ದವು. ಈ ಬಾರಿ ಈ ತಾಲೂಕುಗಳ ಜೊತೆಗೆ ರಾಮದುರ್ಗದಲ್ಲೂ ಹೆಚ್ಚು ಕೇಸ್​ ಪತ್ತೆಯಾಗಿರೋದು ಆರೋಗ್ಯ ಇಲಾಖೆ ಅಂಕಿ ಅಂಶಗಳಿಂದ ಸ್ಪಷ್ಟವಾಗಿದೆ.

ಜ್ವರ, ತಲೆನೋವು, ಸುಸ್ತು, ಕಣ್ಣಿನ ನೋವು, ಸಾಮಾನ್ಯವಾಗಿ ಕಣ್ಣುಗಳ ಹಿಂದೆ ನೋವು, ಹಸಿವಿನ ಕೊರತೆ, ಹೊಟ್ಟೆ ನೋವು, ವಾಂತಿ, ತುರಿಕೆ ಅಲ್ಲದ ದದ್ದುಗಳು ಮತ್ತು ಬಿಳಿ ರಕ್ತಕಣಗಳು ಕಡಿಮೆ ಆಗುವುದು ಡೆಂಗ್ಯೂ ಲಕ್ಷಣಗಳು. ಮಳೆಗಾಲದಲ್ಲಿ ಅಲ್ಲಲ್ಲಿ ನೀರು ನಿಂತು ಸೊಳ್ಳೆಗಳ ಉತ್ಪತ್ತಿ ಹೆಚ್ಚಾಗುತ್ತವೆ. ಇದರಿಂದ ಡೆಂಗ್ಯೂ, ಮಲೇರಿಯಾ, ಚಿಕುನ್ ಗುನ್ಯಾ ರೋಗಗಳ ಹರಡುವಿಕೆ ಹೆಚ್ಚಾಗುತ್ತದೆ. ಜಿಲ್ಲೆಯಲ್ಲಿ ಡೆಂಗ್ಯೂ ಸಾಕಷ್ಟು ಭೀತಿ ಹುಟ್ಟಿಸುತ್ತಿದ್ದು, ಮಲೇರಿಯಾ, ಚಿಕುನ್​ ಗುನ್ಯಾ ಪ್ರಕರಣಗಳು ಅಷ್ಟಾಗಿ ಕಂಡು ಬಂದಿಲ್ಲ.

ಜಿಲ್ಲಾ ಆರೋಗ್ಯಾಧಿಕಾರಿ ಡಾ. ಮಹೇಶ ಕೋಣಿ ಮಾತನಾಡಿದ್ದು, "ಸೊಳ್ಳೆಗಳ ನಿಯಂತ್ರಣ ಸಂಬಂಧ ನಮ್ಮ ಆಶಾ ಕಾರ್ಯಕರ್ತೆಯರು, ಪ್ರಾಥಮಿಕ ಆರೋಗ್ಯ ಕೇಂದ್ರಗಳ ಅಧಿಕಾರಿಗಳು ಮನೆ ಮನೆಗೆ ಭೇಟಿ ನೀಡಿ ಲಾರ್ವಾ ಸರ್ವೆ ಮಾಡುತ್ತಿದ್ದಾರೆ. ಲಾರ್ವಾ ಹೇಗೆ ಬೆಳೆಯುತ್ತದೆ..? ಲಾರ್ವಾದಿಂದ ಹೇಗೆ ರಕ್ಷಿಸಿಕೊಳ್ಳಬೇಕು..? ಮನೆಯಲ್ಲಿ ಹೇಗೆ ಸ್ವಚ್ಛತೆ ಇಟ್ಟುಕೊಳ್ಳಬೇಕು ಎಂದು ತಿಳಿಸುತ್ತಿದ್ದಾರೆ. ಪ್ರತಿ ಶುಕ್ರವಾರ ಡ್ರೈ ಡೇ ಮಾಡುತ್ತಿದ್ದೇವೆ. ಪ್ರತಿ ವಾರಕ್ಕೊಮ್ಮೆ ಶೇಖರಣೆ ಮಾಡಿದ ನೀರ‌ನ್ನು ಚೆಲ್ಲಿ, ಟ್ಯಾಂಕ್ ಸ್ವಚ್ಛಗೊಳಿಸಿ ಹೊಸದಾಗಿ ನೀರನ್ನು ಶೇಖರಿಸಿಕೊಳ್ಳಬೇಕು. ಇದರಿಂದ ಲಾರ್ವಾ ಉತ್ಪತ್ತಿ ಕಡಿಮೆಯಾಗಿ, ರೋಗದ ಹರಡುವಿಕೆ ಕೂಡ ಕಮ್ಮಿಯಾಗುತ್ತದೆ" ಎಂದು ಜಾಗೃತಿ ಮೂಡಿಸುತ್ತಿದ್ದೇವೆ ಎಂದರು.

ಅಲ್ಲದೇ, "ಪರೀಕ್ಷೆ ಪ್ರಮಾಣ ಹೆಚ್ಚಿಸಿದ್ದು, ಇನ್ನು ಡೆಂಗ್ಯೂ ಕಂಡು ಬಂದ ರೋಗಿಗಳಿಗೆ ಉತ್ತಮ ಚಿಕಿತ್ಸೆ ಕೂಡ ನೀಡುತ್ತಿದ್ದೇವೆ. ಯಾರಿಗಾದರೂ ಜ್ವರ ಬಂದರೆ ಖಾಸಗಿ ಆಸ್ಪತ್ರೆಗಳಿಗೆ ಹೋಗದೇ ನಮ್ಮ ಸರ್ಕಾರಿ‌ ಆಸ್ಪತ್ರೆಗೆ ಬಂದು ತಕ್ಷಣ ಪರೀಕ್ಷೆ ಮಾಡಿಸಿಕೊಂಡರೆ, ಪ್ರಾಥಮಿಕ‌ ಹಂತದಲ್ಲೆ ಡೆಂಗ್ಯೂದಿಂದ ಬಹುಬೇಗನೇ ಗುಣಮುಖರಾಗಬಹುದು. ತಡವಾಗಿ ಬಂದರೆ ಕಷ್ಟವಾಗುತ್ತದೆ. ರೋಗಿಗಳಿಗೆ ನಾವು ಮೂರು ಹಂತದಲ್ಲಿ ಪರೀಕ್ಷೆ ಮಾಡುತ್ತೇವೆ. ಲಾರ್ವಾ ಸರ್ವೇ(ಮನೆ ಮನೆಗೆ ಹೋಗಿ ಲಾರ್ವಾ ಇರುವಿಕೆ ಬಗ್ಗೆ ಪರಿಶೀಲನೆ), ಜ್ವರ ಇದ್ದವರಿಗೆ ರಕ್ತ ಪರೀಕ್ಷೆ ಹಾಗೂ ಡೆಂಗ್ಯೂ ದೃಢವಾದರೆ ಮೆಡಿಸಿನ್, ಇಂಜೆಕ್ಷನ್ ಮೂಲಕ ಚಿಕಿತ್ಸೆ ನೀಡಲಾಗುತ್ತದೆ. ಎನ್​ಹೆಚ್-1, ಐಜಿಎಂ, ಐಜಿಜಿ ಹೀಗೆ ಮೂರು ಪ್ರಕಾರ ಪರೀಕ್ಷೆ ಮಾಡಿದಾಗ, ಎನ್​ಹೆಚ್-1, ಐಜಿಎಂ ಕಂಡು ಬಂದರೆ ಅಂಥ ರೋಗಿಗಳ ಮೇಲೆ 48 ಗಂಟೆ ನಿಗಾ ವಹಿಸುತ್ತೇವೆ. ಅಲ್ಲದೇ ಮೆಡ್ ಕಿಟ್ ನೋಡುತ್ತೇವೆ. ಹೀಗೆ ಈ ಮೂರು ಹಂತವನ್ನು ಸರಿಯಾಗಿ ರೋಗಿಗಳನ್ನು ನೋಡಿಕೊಂಡರೆ ಶೀಘ್ರವೇ ರೋಗಿಗಳು ಗುಣಮುಖರಾಗುತ್ತಾರೆ" ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ಮಹೇಶ ಕೋಣಿ ವಿವರಿಸಿದರು.

2023 ಜನವರಿ-ಜೂನ್​ವರೆಗೆ ಡೆಂಗ್ಯೂ ಪ್ರಕರಣಗಳು(ತಾಲೂಕುವಾರು):

ತಾಲೂಕು

ಡೆಂಗ್ಯೂ

ಪ್ರಕರಣಗಳು

ಅಥಣಿ 02 ಬೈಲಹೊಂಗಲ 20 ಬೆಳಗಾವಿ ಗ್ರಾಮೀಣ 08 ಬೆಳಗಾವಿ ನಗರ 12 ಚಿಕ್ಕೋಡಿ 14 ಗೋಕಾಕ್ 6 ಹುಕ್ಕೇರಿ 08 ಖಾನಾಪುರ 19 ರಾಯಬಾಗ 04 ರಾಮದುರ್ಗ 03 ಸವದತ್ತಿ 05

ಒಟ್ಟು 101 ಡೆಂಗ್ಯೂ ಪ್ರಕಣರಗಳು ದಾಖಲಾಗಿದ್ದವು.

2024 ಜನವರಿ-ಜೂನ್​ವರೆಗೆ ಡೆಂಗ್ಯೂ ಪ್ರಕರಣಗಳು(ತಾಲೂಕುವಾರು):

ತಾಲೂಕು

ಡೆಂಗ್ಯೂ

ಪ್ರಕರಣಗಳು

ಅಥಣಿ 05
ಬೈಲಹೊಂಗಲ 22
ಬೆಳಗಾವಿ ಗ್ರಾಮೀಣ 20
ಬೆಳಗಾವಿ ನಗರ 26
ಚಿಕ್ಕೋಡಿ 14
ಗೋಕಾಕ್ 07
ಹುಕ್ಕೇರಿ 17
ಖಾನಾಪುರ 32
ರಾಯಬಾಗ 06
ರಾಮದುರ್ಗ 25
ಸವದತ್ತಿ 06

ಒಟ್ಟು 177 ಡೆಂಗ್ಯೂ ಪ್ರಕರಣಗಳು ದಾಖಲಾಗಿವೆ.

"ಜಿಲ್ಲಾಸ್ಪತ್ರೆ, ತಾಲೂಕಾಸ್ಪತ್ರೆ ಹಾಗೂ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಡೆಂಗ್ಯೂ ಪರೀಕ್ಷೆ ಸೌಲಭ್ಯವಿದೆ‌. ಹಾಗಾಗಿ, ಯಾರೂ ಭಯ ಪಡುವ ಅವಶ್ಯಕತೆ ಇಲ್ಲ. ಮಹಾನಗರ ಪಾಲಿಕೆ, ಸ್ಥಳೀಯ ಸಂಸ್ಥೆಗಳು ಗ್ರಾಮ ಪಂಚಾಯಿತಿಗಳು ಹಾಗೂ ಸಾರ್ವಜನಿಕರು ಸೇರಿಕೊಂಡು ನಾವೆಲ್ಲಾ ಒಗ್ಗಟ್ಟಾಗಿ ಕೆಲಸ ಮಾಡಿದರೆ ಡೆಂಗ್ಯೂ ನಿಯಂತ್ರಿಸಬಹುದು" ಎಂದು ಜಿಲ್ಲಾ ಆರೋಗ್ಯಾಧಿಕಾರಿ ಮಹೇಶ ಕೋಣಿ ತಿಳಿಸಿದ್ದಾರೆ.

ಇದನ್ನೂ ಓದಿ:ಮೈಸೂರಲ್ಲಿ ಡೆಂಗ್ಯೂಗೆ ಮೊದಲ ಬಲಿ: 35 ವರ್ಷದ ಆರೋಗ್ಯಾಧಿಕಾರಿ ಸಾವು - HEALTH OFFICER DIES BY DENGUE

Last Updated : Jul 4, 2024, 3:32 PM IST

ABOUT THE AUTHOR

...view details