ಬಾಗಲಕೋಟೆ : ಇಲ್ಲಿಗೆ ಬಂದು ಅಂಬಲಿ ಕುಡಿದರೆ ಸಕಲ ರೋಗ ರುಜಿನಗಳು ದೂರಾಗುತ್ತದೆ. ದೇವಿಗೆ ಸಂಕಲ್ಪ ಮಾಡಿದರೆ ಸಕಲ ಸಂಕಷ್ಟ ದೂರಾಗುತ್ತದೆ ಎಂಬ ನಂಬಿಕೆಯಿಂದ ಸಾವಿರಾರು ಸಂಖ್ಯೆಯಲ್ಲಿ ಜನರು ಆಗಮಿಸಿ, ಭಕ್ತಿಯನ್ನು ಮೆರೆಯುತ್ತಾರೆ. ಏನು ಇದು ಅಂಬಲಿ ಮಹಿಮೆ, ಯಾವ ದೇವಿಯ ಅವತಾರ ಎಂಬುದನ್ನು ತಿಳಿಯಲು ಈ ವಿಶೇಷ ವರದಿ ನೋಡಿ.
ಜಿಲ್ಲೆಯ ಕುಂದರಗಿ ಗ್ರಾಮದ ಬಳಿಯಿರುವ ಶಿರಿಗಿರಿ ಬೆಟ್ಟದಲ್ಲಿ ತಾಯಿ ಭುವನೇಶ್ವರಿ ಬಂದು ನೆಲೆಸಿದ್ದಾರೆ. ಭಕ್ತರ ಸಂಕಷ್ಟ ದೂರ ಮಾಡಿ, ಇಷ್ಟಾರ್ಥ ಪೂರೈಸುತ್ತಾರೆ ಎಂಬ ನಂಬಿಕೆ ಇಂದಿಗೂ ಭಕ್ತರಲ್ಲಿದೆ.
'ಇಲ್ಲಿ ಅಂಬಲಿ ತೀರ್ಥ ವಿಶೇಷವಾಗಿದೆ. ಈ ಹಿಂದೆ ಇಲ್ಲಿನ ಜನರು ರೋಗ- ರುಜಿನದಿಂದ ಬಳಲುತ್ತಿದ್ದುದನ್ನು ಕಂಡು ಅಮ್ಮನವರು, ನನ್ನ ಸನ್ನಿಧಾನದಲ್ಲಿ ಅಂಬಲಿಯನ್ನ ಆಶೀರ್ವಾದ ಮಾಡಿಕೊಡುತ್ತೇನೆ, ಅದರಿಂದ ಅನಾರೋಗ್ಯದಲ್ಲಿರುವ ಜನರಿಗೆ ನೀಡಿದರೆ ಅದು ಔಷಧ ರೂಪದಲ್ಲಿ ಕೆಲಸ ಮಾಡುತ್ತದೆ, ಭಕ್ತಿಯಿಂದ ಅಂಬಲಿಯನ್ನ ವಿತರಿಸಿ ಎಂದು ಹೇಳುತ್ತಾರೆ. ಸನ್ನಿಧಾನದಲ್ಲಿ ಅಮ್ಮನವರ ಪ್ರತಿಷ್ಠಾಪನೆ ಆದಾಗಿನಿಂದಲೂ ಅಂಬಲಿ ಸೇವೆ ನಡೆಯುತ್ತ ಬಂದಿದೆ. ಭಕ್ತರಿಗೆ ಅಂಬಲಿ ಪ್ರಸಾದ ನೀಡಿದಾಗ ರೋಗ ರುಜಿನಗಳು ಮಾಯವಾಗಿವೆ. ಇದೇ ಮಾಹಿತಿ ಎಲ್ಲೆಡೆ ಹರಡಿ, ಎರಡು ವರ್ಷದಲ್ಲಿ ಅಂಬಲಿ ಕುಡಿಯಲು ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಬರುತ್ತಿದ್ದಾರೆ' ಎಂದು ಸ್ಥಳೀಯ ಸ್ವಾಮೀಜಿ ಲಕ್ಷ್ಮಣ ಶರಣರು ತಿಳಿಸಿದ್ದಾರೆ.
ಅಂಬಲಿ ಸೇವನೆಯಿಂದ ರೋಗ-ರುಜಿನ ವಾಸಿ : 'ಎಂತಹ ಕಠಿಣ, ವಾಸಿಯಾಗದ ರೋಗಗಳಿದ್ದರೂ ಕೂಡಾ ಇಲ್ಲಿಗೆ ಬಂದು ಅಂಬಲಿ ಸ್ವೀಕರಿಸಿದ ಬಳಿಕ ಮಾಯವಾಗುತ್ತದೆ. ಪ್ರತಿ ಶುಕ್ರವಾರದ ದಿನದಂದು ಮಾತ್ರ ಅಂಬಲಿ ತೀರ್ಥ ನೀಡಲಾಗುತ್ತದೆ. ತೀರ್ಥ ನೀಡುವ ಮುಂಚೆ, ಅಂಬಲಿ ಇರುವ ಬಿಂದಿಗೆಗೆ ಅಲಂಕಾರ ಮಾಡಿ, ಪೂಜೆ ಪುನಸ್ಕಾರ ಸಲ್ಲಿಸಿ, ಸ್ಥಳೀಯ ಶರಣರು ಸಂಕಲ್ಪ ಮಾಡುತ್ತಾರೆ. ನಂತರ ಸಾಮೂಹಿಕವಾಗಿ ಅಂಬಲಿ ತೀರ್ಥ ನೀಡಲಾಗುತ್ತದೆ. ಪ್ರತಿ ವಾರ ಬಂದು ಅಂಬಲಿ ಸೇವನೆ ಮಾಡಿರುವುದಕ್ಕೆ ರೋಗ ಮಾಯವಾಗಿದೆ' ಎಂದು ಭಕ್ತರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಈ ಎರಡು ವರ್ಷದಲ್ಲಿ ಶಿರಿಗಿರಿ ಬೆಟ್ಟದ ಮಹಿಮೆ ಹೆಚ್ಚಾಗಿದೆ. ಕಳೆದ ವರ್ಷ ಜಾತ್ರಾ ಮಹೋತ್ಸವದ ಅಂಗವಾಗಿ ಭುವನೇಶ್ವರಿ ದೇವಿಗೆ ಅಂಬಾರಿ ಮೆರವಣಿಗೆ ಸೇರಿದಂತೆ ಇತರ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗಿತ್ತು. ಅಂದಿನಿಂದ ದೇವಿಯ ಮಹಿಮೆ ಬೆಳೆಯುತ್ತಾ ಸಾಗಿದೆ. ಮಧ್ಯದಲ್ಲಿ ಬೃಹತ್ ನಾಗರಹಾವಿನ ಹುತ್ತ ಬೆಳೆದಿದ್ದು, ನಾಲ್ಕು ದಿಕ್ಕಿನಲ್ಲಿ ಸಮಾನವಾಗಿ ಚಿಕ್ಕ ಹುತ್ತಗಳು ಬೆಳೆದಿವೆ. ಹೀಗಾಗಿ ದೇವಿಯು ಬಂದು ಈ ಬೆಟ್ಟದಲ್ಲಿ ನೆಲೆಸಿದ್ದು, ಸಂಕಲ್ಪ ಮಾಡಿದರೆ ಯಶಸ್ಸು ಸಿಗುತ್ತದೆ ಎಂಬುದು ಭಕ್ತರ ನಂಬಿಕೆಯಾಗಿದೆ.
ಇದನ್ನೂ ಓದಿ : ಚಾಮರಾಜನಗರದಲ್ಲಿ ಬಂಡಿ ಜಾತ್ರೆ: ಇಷ್ಟಾರ್ಥ ಸಿದ್ಧಿಗೆ ಚಕ್ರಕ್ಕೆ ತೆಂಗಿನಕಾಯಿ ಒಡೆದ ಭಕ್ತರು