ರಾಯಚೂರು: "ಮುಂದುವರಿದ ಹಾಗೂ ಬಲಾಢ್ಯ ಸಮುದಾಯದಯವರು ಮೀಸಲಾತಿಯನ್ನು ಕೇಳುತ್ತಿರುವುದು ಸಂವಿಧಾನಕ್ಕೆ ಬಗೆಯುತ್ತಿರುವ ಅಪಚಾರವೆಂದು" ಸಾಹಿತಿ ಕುಂ. ವೀರಭದ್ರಪ್ಪ ಮೀಸಲಾತಿ ಹೋರಾಟವನ್ನು ಖಂಡಿಸಿದ್ದಾರೆ.
ನಗರದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಆಗಮಿಸಿದ್ದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದರು. "ಸಂವಿಧಾನದ ಪ್ರಕಾರ ಶೇ 50ರಷ್ಟು ಮೀಸಲಾತಿ ದಾಟುವ ಹಾಗಿಲ್ಲ. ಶೇ.97 ಜನ ಹಿಂದುಳಿದ ಮತ್ತು ಉತ್ಪಾದಕ ಸಮುದಾಯದವರು. ಇವರ ಮೀಸಲಾತಿಯನ್ನು ಬಲಾಢ್ಯ ಸಮುದಾಯದವರು ಕೇಳುತ್ತಿರುವುದು ಸಂವಿಧಾನಕ್ಕೆ ಬಗೆಯುತ್ತಿರುವ ಅಪಚಾರವಾಗಿದೆ" ಎನ್ನುವ ಮೂಲಕ ಮೀಸಲಾತಿಗಾಗಿ ಹೋರಾಟ ನಡೆಸುತ್ತಿರುವ ಪಂಚಮಸಾಲಿ ಸಮುದಾಯದ ನಡೆಯನ್ನು ಅವರು ಖಂಡಿಸಿದರು.
ಸಾಹಿತಿ ಕುಂ. ವೀರಭದ್ರಪ್ಪ ಮಾಧ್ಯಮ ಹೇಳಿಕೆ. (ETV Bharat) "ಆ ಸಮುದಾಯದಲ್ಲಿ ದೊಡ್ಡ ಭೂ ಮಾಲೀಕರಿದ್ದಾರೆ. ಸಿಎಂ ಸಹ ಆಗಿದ್ದು ದೊಡ್ಡ ಪದವಿಯನ್ನು ಅಲಂಕಾರಿಸಿದ್ದಾರೆ. ಅದು ಮುಂದುವರಿದ ಸಮುದಾಯವಾಗಿದ್ದು, ಸ್ವಾಮೀಜಿ ಬಸವಣ್ಣಕಲ್ಯಾಣ, ಕೂಡಲಸಂಗಮ ಶ್ರೀ ಅಂತ ತಮ್ಮ ನಾಮವಾಚಕದಲ್ಲಿ ಬಳಸಬಾರದು. ಬಸವಣ್ಣನವರ ಹಿಂದುಳಿದ ಸಮುದಾಯಗಳಿಗಾಗಿ ಶ್ರಮಿಸಿದ್ದಾರೆ. ಅವರನ್ನು ದುರುಪಯೋಗ ಮಾಡಿಕೊಳ್ಳಬಾರದು. ಅಲ್ಲದೇ ಮೀಸಲಾತಿ ಬೇಡಿಕೆಗೆ ಹಿಂಸೆಯನ್ನು ಪ್ರಚೋದಿಸಬಾರದು" ಎಂದು ಜಯಮೃತ್ಯುಂಜಯ ಸ್ವಾಮೀಜಿ ವಿರುದ್ಧ ಅವರು ಹರಿಹಾಯ್ದರು.
"ಸ್ವಾಮೀಜಿಯೂ ಪೂರ್ಣ ಪ್ರಮಾಣದ ಸ್ವಾಮೀಜಿ ಅಲ್ಲ, ಅವರು ಸಹ ರಾಜಕಾರಣಿಯ ಒಂದು ಮುಖ. ಆ ಸಮುದಾಯದ ಚುಕ್ಕಾಣಿ ಹಿಡಿಯಲಿಕ್ಕೆ, ಪ್ರಸಿದ್ದಿಯಾಗಲಿಕ್ಕೆ ದುರುಪಯೋಗ ಮಾಡಿಕೊಳ್ಳಬಾರದು. ಪಂಚಮಸಾಲಿ ಸಮುದಾಯ ಅತ್ಯಂತ ನಿರುಪದ್ರವಿ ಸಮುದಾಯವಾಗಿದ್ದು, ಸಮುದಾಯದ ದಿಕ್ಕು ತಪ್ಪಿಸುವ ಕೆಲಸ ಸ್ವಾಮೀಜಿ ಮಾಡಬಾರದು" ಎಂದು ತಿಳಿಸಿದರು.
"ಜಯಮೃತ್ಯಂಜಯ ಸ್ವಾಮಿ ಕೂಡಲಸಂಗಮ ಹೆಸರು ಬಳಸಬಾರದು, ಬಸವಣ್ಣನ ಹೆಸರು ಹೇಳುವ ಹಕ್ಕಿಲ್ಲ. ತಮ್ಮ ಖುರ್ಚಿಗಾಗಿ ಸ್ವಾಮೀಜಿ ಅವಾಂತರಗಳನ್ನು ಸೃಷ್ಟಿಸಬಾರದು. ವಚನಾನಂದ ಸ್ವಾಮಿ ಸೇರಿ ಸಮುದಾಯದ ಎರಡು ಸ್ವಾಮೀಜಿಗಳ ನಡುವೆ ತಿಕ್ಕಾಟ ನಡೆಯುತ್ತಿದೆ. ಇದು ಸಾಮಾಜಿಕ ಅಶಾಂತಿಗೆ ಕಾರಣವಾಗುತ್ತಿರುವುದು ಸರಿಯಲ್ಲ" ಎಂದರು.
"ಅವರು ಯಾರೇ ಆಗಿರಲಿ ಬಸವಣ್ಣನವರ ಬಗ್ಗೆ ಅವಹೇಳನಕಾರಕ, ಅಪಮಾನ ಮಾಡುವ ರೀತಿಯಲ್ಲಿ ಮಾತನಾಡಬಾರದು. ಅವರನ್ನು ಕ್ಷಮಿಸುವುದು ಸಮಾಜದ ದೊಡ್ಡ ದೌರ್ಬಲ್ಯ ಹಾಗೂ ತಪ್ಪು. ಲಿಂಗಾಯತ ಸಮುದಾಯ ಒಂದು ಜಾತಿಗೆ ಸೀಮಿತವಾದುದ್ದಲ್ಲ. ಹಿಂದುಳಿದ ಸಮುದಾಯಗಳ ಒಕ್ಕೂಟ ಲಿಂಗಾಯತ ಆಗಿದೆ. ಹಿಂದುಳಿದ ಸಮುದಾಯಗಳ ಒಕ್ಕೂಟದ ಸ್ವಾಯತ್ತತೆಯನ್ನು ಕಾಪಾಡುವ ಕೆಲಸವನ್ನು ಸ್ವಾಮೀಜಿಗಳು ರಾಜಕಾರಣಿಗಳು ಮಾಡಬೇಕು" ಎಂದು ಹೇಳಿದರು.
ಇದನ್ನೂ ಓದಿ:ಸಿಎಂ ಸಿದ್ದರಾಮಯ್ಯ ಹೃದಯಹೀನರಾಗಿ ನಡೆದುಕೊಂಡರು: ಬಸವಜಯ ಮೃತ್ಯುಂಜಯ ಸ್ವಾಮೀಜಿ