ಬೆಂಗಳೂರು: ದೀಪಾವಳಿ ಹಬ್ಬದ ವೇಳೆ ಕಳೆದ ಬಾರಿಗಿಂತ ಈ ವರ್ಷ ಪಟಾಕಿ ಅವಘಡಗಳ ಸಂಖ್ಯೆ ಹೆಚ್ಚಾಗಿರುವುದು ಅಂಕಿ ಅಂಶಗಳಲ್ಲಿ ಕಂಡುಬರುತ್ತಿದೆ. ಪಟಾಕಿ ಅವಘಡಗಳಿಂದ ಈವರೆಗೆ 145ಕ್ಕೂ ಹೆಚ್ಚು ಮಂದಿಯ ಕಣ್ಣಿಗೆ ಗಾಯವಾಗಿದ್ದು, ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯತ್ತಿದ್ದಾರೆ.
ಕಣ್ಣು ಕಳೆದುಕೊಳ್ಳುವ ಆತಂಕ: ಹಲವರಿಗೆ ದೃಷ್ಟಿ ಕಳೆದುಕೊಳ್ಳುವ ಆತಂಕವಿದ್ದು ಶಸ್ತ್ರ ಚಿಕಿತ್ಸೆ ಮಾಡಲಾಗಿದೆ. ಮಿಂಟೋ ಆಸ್ಪತ್ರೆಯಲ್ಲಿ ಇಲ್ಲಿಯವರೆಗೆ 54 ಜನರಿಗೆ ಚಿಕಿತ್ಸೆ ನೀಡಲಾಗಿದೆ. ಇದರಲ್ಲಿ 32 ಮಕ್ಕಳು ಕಣ್ಣಿನ ತೊಂದರೆಗೆ ಒಳಗಾಗಿದ್ದಾರೆ. 23 ಮಂದಿಗೆ ಗಂಭೀರ ಮತ್ತು 26 ಮಂದಿಗೆ ಸಣ್ಣ ಪ್ರಮಾಣದ ಗಾಯಗಳಾಗಿವೆ. 4 ಮಂದಿಗೆ ಸರ್ಜರಿ ಮಾಡಲಾಗಿದೆ. 27 ಮಂದಿ ಪಟಾಕಿ ಸಿಡಿಸುವಾಗ ಗಾಯ ಮಾಡಿಕೊಂಡಿದ್ದು, 22 ಜನ ಅಕ್ಕಪಕ್ಕ ಇದ್ದವರು ಪಟಾಕಿ ಸಿಡಿಸುವಾಗ ಕಿಡಿಗಳು ಬಿದ್ದು ಗಾಯ ಮಾಡಿಕೊಂಡಿದ್ದಾರೆ.
ಪಟಾಕಿ ಅವಘಡದಿಂದ 35 ಮಂದಿ ಚಿಕಿತ್ಸೆ ಪಡೆದು ಹೋಗಿದ್ದರೆ 14 ಮಂದಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಶನಿವಾರ ಒಂದೇ ದಿನ 20 ಪಟಾಕಿ ಅವಘಡ ಪ್ರಕರಣಗಳು ದಾಖಲಾಗಿವೆ. ಇನ್ನು, ಶಂಕರ ಕಣ್ಣಿನ ಆಸ್ಪತ್ರೆಯಲ್ಲಿ 18, ನಾರಾಯಣ ನೇತ್ರಾಲಯದಲ್ಲಿ 73 ಹಾಗೂ ಅಗರ್‌ವಾಲ್, ವಾಸನ್ ಸೇರಿ ವಿವಿಧ ಕಣ್ಣಿನ ಆಸ್ಪತ್ರೆಗಳಲ್ಲಿ ಹಲವರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದುಬಂದಿದೆ.