ಬೆಂಗಳೂರು: ಮಹಾಲಕ್ಷ್ಮೀ ಲೇಔಟ್ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಗೋಪಾಲಯ್ಯ ಅವರಿಗೆ ಕೊಲೆ ಬೆದರಿಕೆ ವಿಚಾರ ವಿಧಾನ ಪರಿಷತ್ನಲ್ಲಿ ಪ್ರತಿಧ್ವನಿಸಿತು. ಕಲಾಪದಲ್ಲಿ ವಿಧಾನ ಪರಿಷತ್ನ ವಿಪಕ್ಷ ನಾಯಕ ಕೋಟಾ ಶ್ರೀನಿವಾಸ್ ಪೂಜಾರಿ, ವಿಷಯ ಪ್ತಸ್ತಾಪಿಸುತ್ತಿದ್ದಂತೆ ಸದನದಲ್ಲಿ ಕೆಲ ಕಾಲ ಆಡಳಿತ- ವಿಪಕ್ಷ ಸದಸ್ಯರ ನಡುವೆ ವಾಕ್ಸಮರ ನಡೆಯಿತು.
ಕೋಟಾ ಶ್ರೀನಿವಾಸ್ ಪೂಜಾರಿ ಮಾತನಾಡಿ, ಚುನಾಯಿತ ಪ್ರತಿನಿಧಿಯಾದ ಗೋಪಾಲಯ್ಯಗೆ ಕಾಂಗ್ರೆಸ್ ಮಾಜಿ ಕಾರ್ಪೊರೇಟರ್ ಪದ್ಮರಾಜ್ ಎಂಬಾತ ಅವಾಚ್ಯ ಶಬ್ಧಗಳಿಂದ ನಿಂದಿಸಿ, ಕೊಲೆ ಬೆದರಿಕೆ ಹಾಕಿದ್ದು ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಗೆ ಎಲ್ಲಿಗೆ ಬಂದಿದೆ ಎಂದು ಸೂಚಿಸುತ್ತದೆ. ಈ ಬಗ್ಗೆ ಗೃಹ ಮಂತ್ರಿಯವರನ್ನ ಕರೆಯಿಸಿ ಸದನಕ್ಕೆ ಉತ್ತರಿಸಬೇಕು ಎಂದು ಆಗ್ರಹಿಸಿದರು.
ಇದಕ್ಕೆ ವಿರೋಧ ವ್ಯಕ್ತಪಡಿಸಿದ ಆಡಳಿತ ಪಕ್ಷದ ಸಚೇತಕ ಸಲೀಂ ಅಹಮ್ಮದ್, ಸದನದ ಕೆಳಮನೆಯಲ್ಲಿ ಚರ್ಚೆಯಾಗಿದೆ. ಇಲ್ಲಿ ಚರ್ಚೆಯಾಗೋದು ಬೇಡ ಎಂದು ಹೇಳುತ್ತಿದ್ದಂತೆ ವಿರೋಧ ಪಕ್ಷದ ಸದಸ್ಯರ ವಿರೋಧಕ್ಕೆ ಕಾರಣವಾಯಿತು. ಮಾತಿನ ಚಕಮಕಿಯಾಗುತ್ತಿದ್ದಂತೆ ಮಧ್ಯಪ್ರವೇಶಿಸಿದ ಉಪಸಭಾಪತಿ ಎಂ.ಕೆ.ಪ್ರಾಣೇಶ್, ರಾಜಕೀಯವಾಗಿ ಚರ್ಚೆ ಮಾಡೋದು ಸರಿಯಿಲ್ಲ, ಪಕ್ಷಾತೀತವಾಗಿ ಚರ್ಚೆಯಾಗಬೇಕು. ಚುನಾಯಿತ ಪ್ರತಿನಿಧಿಗಳಿಗೆ ರಕ್ಷಣೆ ನೀಡುವ ಕೆಲಸವಾಗಬೇಕು ಎಂದರು.