ಕರ್ನಾಟಕ

karnataka

ETV Bharat / state

ದಾವಣಗೆರೆಯಲ್ಲಿ ಆಟೋಗಳಿಗೆ ಮೀಟರ್ ಕಡ್ಡಾಯ, ಒಂದು ತಿಂಗಳು ಗಡುವು: ಯಾರು, ಏನಂದ್ರು? - AUTO RICKSHAW METER

ದಾವಣಗೆರೆ ನಗರದಲ್ಲಿ ಆಟೋಗಳಿಗೆ ಮೀಟರ್ ಕಡ್ಡಾಯಗೊಳಿಸಲಾಗಿದೆ. ಆದರೆ ಈ ನಿಯಮಕ್ಕೆ ಆಟೋ ಚಾಲಕರು, ಮಾಲೀಕರು ವಿರೋಧ ವ್ಯಕ್ತಪಡಿಸಿದ್ದಾರೆ. ಈ ಕುರಿತು 'ಈಟಿವಿ ಭಾರತ್' ಪ್ರತಿನಿಧಿ ನೂರುಲ್ಲಾ ವಿಶೇಷ ವರದಿ.

AUTORICKSHAW METER COMPULSORY
ಆಟೋಗಳಿಗೆ ಮೀಟರ್ ಕಡ್ಡಾಯ (ETV Bharat)

By ETV Bharat Karnataka Team

Published : 5 hours ago

ದಾವಣಗೆರೆ: ನಗರದಲ್ಲಿ ಆಟೋಗಳಿಗೆ ಮೀಟರ್ ಅಳವಡಿಕೆ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ. ಹಲವು ವರ್ಷಗಳಿಂದ ಮೀಟರ್ ಅಳವಡಿಕೆ ಬಗ್ಗೆ ಜಿಲ್ಲಾಡಳಿತ ತಿಳಿಹೇಳುತ್ತಿದ್ದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಇದೀಗ ಜಿಲ್ಲಾಧಿಕಾರಿ, ಎಸ್ಪಿ, ಆರ್​ಟಿಒ ಇಲಾಖೆಯ ಸಮ್ಮುಖದಲ್ಲಿ ಸಭೆ ನಡೆಸಿ ಆಟೋಗಳಿಗೆ ಮೀಟರ್ ಅಳವಡಿಸುವಂತೆ ಆದೇಶಿಸಲಾಗಿದೆ.

ದಾವಣಗೆರೆ ನಗರದಲ್ಲಿ 10 ಸಾವಿರ ಆಟೋಗಳಿವೆ. ಎಲ್ಲ ಆಟೋಗಳಿಗೆ ಮೀಟರ್ ಅಳವಡಿಸಬೇಕೆಂದು ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ಆದೇಶಿಸಿದ್ದಾರೆ. ಇದಕ್ಕೆ ಎಸ್ಪಿ ಉಮಾಪ್ರಶಾಂತ್ ಅವರೂ ಕೂಡ ಧ್ವನಿಗೂಡಿಸಿ ಮೀಟರ್ ಅಳವಡಿಕೆಗೆ ಒಂದು ತಿಂಗಳ ಕಾಲ ಗಡುವು ಕೊಟ್ಟಿದ್ದಾರೆ.

ಆಟೋಗಳಿಗೆ ಮೀಟರ್ ಕಡ್ಡಾಯ ಕುರಿತು ಜಿಲ್ಲಾ ಸಶಸ್ತ್ರ ಮೀಸಲು ಪಡೆ ಮೈದಾನದಲ್ಲಿ ಆಟೋ ಮಾಲೀಕರ ಮತ್ತು ಚಾಲಕರ ಸಭೆ ಕರೆಯಲಾಗಿತ್ತು. ಜಿಲ್ಲಾಧಿಕಾರಿ, ಎಸ್ಪಿ, ಮಹಾನಗರ ಪಾಲಿಕೆ ಆಯುಕ್ತೆ ರೇಣುಕಾ ಹಾಗೂ ಸಾರಿಗೆ ಇಲಾಖೆ ಅಧಿಕಾರಿಗಳ ನೇತೃತ್ವದಲ್ಲಿ ನಡೆದ ಈ ಸಭೆಯಲ್ಲಿ ಆಟೋಗಳಿಗೆ ಮೀಟರ್ ಕಡ್ಡಾಯ ನಿಯಮ ಜಾರಿ ಮಾಡಲಾಯಿತು. ಇದಲ್ಲದೇ ಪಾಲಿಕೆ ವ್ಯಾಪ್ತಿಯಲ್ಲಿ ಆಟೋಗಳು ಮೀಟರ್ ಅಳವಡಿಸಿಕೊಂಡು ಪ್ರಯಾಣಿಕರಿಗೆ ಸೇವೆ ನೀಡಬೇಕು, ಮೀಟರ್ ಆಧಾರದ ಮೇಲೆ ಬಾಡಿಗೆ ನಿಗದಿ ಮಾಡಬೇಕು, ನಿಯಮ ಮೀರಿದರೆ ಆಟೋ ಮಾಲೀಕನಿಗೆ ಐದು ಸಾವಿರ ದಂಡ ವಿಧಿಸಲಾಗುವುದು ಎಂದು ಒಂದು ವಾರದೊಳಗೆ ನಗರದ ಎಲ್ಲ ಆಟೋಗಳಿಗೆ ಮೀಟರ್ ಅಳವಡಿಸಲು ಗಡುವು ನೀಡಿ ಎಚ್ಚರಿಕೆ ನೀಡಲಾಯಿತು.

ಜಿಲ್ಲೆಯಾದ್ಯಂತ 10 ಸಾವಿರ ಆಟೋಗಳಿದ್ದರೆ, ನಗರ ಪ್ರದೇಶದಲ್ಲಿ ಆಟೋಗಳ ಸಂಖ್ಯೆ ಹೆಚ್ಚಾಗಿದೆ. ಅಲ್ಲದೇ ನಗರದಲ್ಲಿ 50ಕ್ಕೂ ಅಧಿಕ ಆಟೋ ನಿಲ್ದಾಣಗಳಿವೆ. ಮೀಟರ್ ಜೊತೆಗೆ ಸುಸ್ಥಿತಿ ಪ್ರಮಾಣ ಪತ್ರ ಸೇರಿ ಆಟೋ ಮಾಲೀಕರು, ಚಾಲಕರು ಅಗತ್ಯ ನಿಯಮಗಳನ್ನು ಪಾಲನೆ ಮಾಡಬೇಕು. ಇಲ್ಲದಿದ್ದರೆ ದಂಡ ನಿಶ್ಚಿತ ಎಂದು ಎಚ್ಚರಿಸಲಾಗಿದೆ.

ಆಟೋಗಳಿಗೆ ಮೀಟರ್ ಕಡ್ಡಾಯ- ಪ್ರತಿಕ್ರಿಯೆಗಳು (ETV Bharat)

ಎಸ್ಪಿ ಉಮಾಪ್ರಶಾಂತ್ ಪ್ರತಿಕ್ರಿಯಿಸಿ, "ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಆಟೋ ಚಾಲಕರ, ಮಾಲೀಕರ ಸಭೆ ನಡೆಸಿದ್ದೇವೆ. ಯಾರು ಮೀಟರ್ ಉಪಯೋಗಿಸುವುದಿಲ್ಲ ಎಂಬ ಬಗ್ಗೆ ಆರ್​ಟಿಒನಿಂದ ಪರಿಶೀಲನೆ ನಡೆಸಿದ್ದೇವೆ. ಎಲ್ಲ ಆಟೋ ಚಾಲಕರಿಗೆ ಮೀಟರ್ ಅಳವಡಿಸಲು ಹೇಳಿದ್ದೇವೆ. ಅವರು ಕಾಲಾವಕಾಶ ಕೇಳಿದ್ದಾರೆ. ಒಂದು ತಿಂಗಳ ಕಾಲ ಗಡುವು ಸಹ ಕೊಡಲಾಗಿದೆ. ಇನ್ಮುಂದೆ ಮೀಟರ್ ಅಳವಡಿಕೆ ಬಗ್ಗೆ ಪರಿಶೀಲನೆ ನಡೆಸಲಾಗುವುದು" ಎಂದರು.

ಆಟೋ ಚಾಲಕರು, ಮಾಲೀಕರು ಹೇಳುವುದೇನು?:ಆಟೋಗಳಿಗೆ ಮೀಟರ್ ಅಳವಡಿಕೆಗೆ ಚಾಲಕರು ಮತ್ತು ಮಾಲೀಕರು ವಿರೋಧ ವ್ಯಕ್ತಪಡಿಸಿದ್ದಾರೆ. ''ಮೀಟರ್ ಹಾಕಲು ತೊಂದರೆ ಇಲ್ಲ. ಅದರೆ, ನಿಗದಿ ಮಾಡುವ ದರದಿಂದ ನಮಗೆ ನಷ್ಟ ಅಗುತ್ತದೆ. ಗ್ಯಾಸ್, ಸಿಎನ್​​ಜಿ ದರ ಗಗನಕ್ಕೇರಿದೆ. ರಸ್ತೆ ಹಾಳಾಗಿದ್ದು, ಸರಿಪಡಿಸಬೇಕು. ಸಿಟಿಯಲ್ಲಿ 10 ಸಾವಿರ ಆಟೋಗಳಿವೆ. ಇದೀಗ ಡಿವಿಜಿ ನಂಬರ್ ನಿಲ್ಲಿಸಿದ್ದು, ಈ ಸಂಖ್ಯೆ ಹೆಚ್ಚಾಗಿರಬಹುದು. ಆಟೋ ಚಾಲಕ ಮತ್ತು ಮಾಲೀಕರು ಮಧ್ಯಮ ವರ್ಗದವರೇ ಹೆಚ್ಚಿದ್ದಾರೆ. ಸಾಲ ಮಾಡಿ ಆಟೋ ಮಾಡಿರುತ್ತಾರೆ. ಅವರಿಗೆಲ್ಲ ಸಮಸ್ಯೆ ಆಗಲಿದೆ. ನಿಗದಿ ಮಾಡುವ ದರದ ನಮಗೆ ಗೀಟಲ್ಲ'' ಎನ್ನುತ್ತಾರೆ ಆಟೋ ಮಾಲೀಕ ಅಜಯ್ ಸಾರಥಿ.

ಇದನ್ನೂ ಓದಿ:ಪ್ರಯಾಣಿಕರಿಗೆ ಆಟೋ ಚಾಲಕರ ಕಿರುಕುಳ; ನಿಯಂತ್ರಣಕ್ಕೆ ಪೊಲೀಸರಿಂದ ಬಿಗಿ ಕ್ರಮ

ABOUT THE AUTHOR

...view details