ದಾವಣಗೆರೆ: ಬೆಣ್ಣೆ ನಗರಿ ದಾವಣಗೆರೆ ಅಲ್ಲದೆ ಇತರ ಜಿಲ್ಲೆಗಳಿಗೆ ತೆರಳಿ ಬರೋಬ್ಬರಿ 159 ಬಾರಿ ರಕ್ತದಾನ ಮಾಡಿದ ಕೀರ್ತಿ ಆದಿ ಕೇಶವ್ ಪ್ರಕಾಶ್ ಶಾಸ್ತ್ರೀಯವರಿಗೆ ಸಲ್ಲುತ್ತದೆ. ಇದಲ್ಲದೇ ಆದಿ ಕೇಶವ್ ಅವರು ಇಲ್ಲಿತನಕ ರಕ್ತದಾನ ಮಾಡಿ 80 ನವಜಾತು ಶಿಶುಗಳ ಪ್ರಾಣ ಉಳಿಸಿರುವ ರಕ್ತದಾನಿ ಕೂಡ ಹೌದು.. ಇವರ ಇಡೀ ಕುಟುಂಬದ ಸದಸ್ಯರು ಕೂಡ ರಕ್ತದಾನ ಮಾಡುವಲ್ಲಿ ನಿರತರಾಗಿರುತ್ತಾರೆ.
ಹೌದು, ಪ್ರಸ್ತುತ ದಿನಗಳಲ್ಲಿ ರಕ್ತದ ಅವಶ್ಯಕತೆ ಹೆಚ್ಚಾಗುತ್ತಿದೆ. ರಕ್ತಬೇಕು ಎಂದು ಬರುವವರಿಗೆ ರಕ್ತ ಕೊಡಿಸಲು ದಾವಣಗೆರೆಯ ವಿದ್ಯಾನಗರ ನಿವಾಸಿ ರಕ್ತದಾನಿ ಆದಿ ಕೇಶವ್ ಪ್ರಕಾಶ್ ಶಾಸ್ತ್ರೀಯವರು ಟೊಂಕ ಕಟ್ಟಿ ನಿಂತಿದ್ದಾರೆ. ಮಧ್ಯ ರಾತ್ರಿ ಬಂದು ರಕ್ತಬೇಕು ಸ್ವಾಮಿ ಎಂದು ಕೇಳುವ ಬಡ ವರ್ಗದ ಜನರಿಗೆ ಶಾಸ್ತ್ರೀಯವರು ರಕ್ತ ಹೊಂದಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ.
ಆದಿ ಕೇಶವ್ 1987 ನವೆಂಬರ್ 10 ರಲ್ಲಿ ಮೊದಲಬಾರಿ ರಕ್ತದಾನ ಮಾಡಿದರು. ರಕ್ತದಾನ ಮಾಡುವ ಮೂಲಕ ತಮ್ಮ ಹೊಸ ಜೀವನವನ್ನು ಆರಂಭಿಸಿದ್ರು. ಇಲ್ಲಿ ತನಕ ಅವರು ಒಟ್ಟು 159 ಬಾರಿ ರಕ್ತದಾನ ಮಾಡಿದ್ದಾರೆ. ಓ ನೆಗೆಟಿವ್ ರಕ್ತದ ಗುಂಪಾಗಿದ್ದರಿಂದ ರಕ್ತದಾನಿ ಆದಿಯವರ ರಕ್ತಕ್ಕೆ ವಿಶೇಷ ಬೇಡಿಕೆ ಇದೆ. ರಕ್ತದಾನಿ ಶಾಸ್ತ್ರೀಯವರು ರಕ್ತದಾನ ಮಾಡಿ ಈಗ ತಾನೇ ಜನಿಸಿದ (ನ್ಯೂನಾಟಲ್ ಬೇಬಿಸ್) ಪುಟ್ಟ ಪುಟ್ಟ 80 ಕ್ಕೂ ಹೆಚ್ಚು ನಜಾತಶಿಶುಗಳ ಪ್ರಾಣ ಉಳಿಸಿರುವ ಖ್ಯಾತಿ ಕೂಡ ಗಳಿಸಿದ್ದಾರೆ. ತಡ ರಾತ್ರಿ ಆಗಿದ್ದರೂ ಕೂಡ ಆಸ್ಪತ್ರೆಗೆ ತೆರಳಿ ಆದಿ ಕೇಶವ್ ಅವರು ರಕ್ತದಾನ ಮಾಡಿರುವ ಉದಾಹರಣೆಗಳಿವೆ. ಜಾತಿ, ಮತ, ಧರ್ಮ ನೋಡದೆ ರಕ್ತದಾನ ಮಾಡುವ ಆದಿಯವರು ಜಾತ್ಯತೀತ ವ್ಯಕ್ತಿ ಎಂದೇ ಖ್ಯಾತಿ ಗಳಿಸಿದ್ದಾರೆ.