ಹುಬ್ಬಳ್ಳಿ:"ಮುಡಾ ಹಗರಣ ಹಾಗೂ ವಾಲ್ಮೀಕಿ ಹಗರಣವನ್ನು ಡೈವರ್ಟ್ ಮಾಡುವ ಹಾಗೂ ಮಾಧ್ಯಮ ಮುಂದೆ ಮುಡಾ ಹಗರಣದಿಂದ ತಪ್ಪಿಸಿಕೊಳ್ಳುವ ದುರಾಲೋಚನೆಯಿಂದ ದರ್ಶನ್ ಫೋಟೋ ವೈರಲ್ ಮಾಡುವ ನಾಟಕವನ್ನು ರಾಜ್ಯ ಕಾಂಗ್ರೆಸ್ ಸರ್ಕಾರ ಮಾಡುತ್ತಿದೆ" ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಕಿಡಿ ಕಾರಿದರು.
ನಗರದಲ್ಲಿಂದು ಮಾಧ್ಯಮದ ಜೊತೆಗೆ ಮಾತನಾಡಿದ ಅವರು, "ಪರಪ್ಪನ ಅಗ್ರಹಾರ ಜೈಲಿನೊಳಗಿದ್ದ ದರ್ಶನ್ ಫೋಟೋ ಹೊರಗಡೆ ಬಿಟ್ಟಿರುವುದು ಕೂಡ ರಾಜ್ಯ ಸರ್ಕಾರವೇ. ದರ್ಶನ ಪ್ರಕರಣ ಸಾಕಷ್ಟು ಚರ್ಚೆಗೆ ಬಂದಿದ್ದ ವಿಷಯವಾಗಿತ್ತು. ಮುಡಾ, ವಾಲ್ಮೀಕಿ ಪ್ರಕರಣಗಳು ಮುನ್ನೆಲೆ ಬಂದಾಗಲೂ ಎಲ್ಲಾ ಮಾಧ್ಯಮದಲ್ಲಿ ಸಾಕಷ್ಟು ಚರ್ಚೆಗೆಯಾಗಿತ್ತು. ಇದನ್ನು ಡೈವರ್ಟ್ ಮಾಡಲು ಇಂತಹದೊಂದು ಫೋಟೋ ವೈರಲ್ ಮಾಡುವ ಕಾರ್ಯವನ್ನು ಸರ್ಕಾರ ಮಾಡಿದೆ" ಎಂದರು.
"ದರ್ಶನ್ ಪ್ರಕರಣದಲ್ಲಿ ನ್ಯಾಯಾಲಯಕ್ಕೆ ಕೊಟ್ಟಿರುವ ದಾಖಲೆಯನ್ನು ಬಹಿರಂಗ ಪಡಿಸುವ ಕಾರ್ಯವನ್ನು ಸರ್ಕಾರ ಮಾಡಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ" ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾಂಗ್ರೆಸ್ ಕಳ್ಳತನ ಬಯಲಿಗೆ ಬಂದಾಗ ಕೋವಿಡ್ ನೆನಪಾಗಿದೆ:"ನಾವು ಕಾಂಗ್ರೆಸ್ಸಿನವರ ಕಳ್ಳತನ ಪ್ರಕರಣ ಬಯಲಿಗೆ ತಂದಿದ್ದೇವೆ. ಆದರೆ ಕಾಂಗ್ರೆಸ್ಸಿಗರು, ತಮ್ಮ ಕಳ್ಳತನ ಮುಚ್ಚಿ ಹಾಕಲು ಬೇರೆಯವರನ್ನು ಕಳ್ಳರು ಎಂದು ಬಿಂಬಿಸಲು ಕೋವಿಡ್ ಸ್ಕ್ಯಾಮ್ ಅಂತ ಬಿಂಬಿಸುತ್ತಿದ್ದಾರೆ. ಒಂದೂವರೆ ವರ್ಷ ಬಿಟ್ಟು ಈಗ ಯಾಕೆ ಕೋವಿಡ್ ಹಗರಣದ ತನಿಖೆ?" ಎಂದು ಪ್ರಶ್ನಿಸಿದರು.
"ಕಾಂಗ್ರೆಸ್ ಅಧಿಕಾರಕ್ಕೆ ಬಂದು ಒಂದೂವರೆ ವರ್ಷವಾಗಿದೆ. ಸಾರ್ವಜನಿಕ ಲೆಕ್ಕಪತ್ರ ಸಮಿತಿಯ ವರದಿಯನ್ನು ಹೊರಗೆ ಬಿಟ್ಟಿದ್ದಾರೆ. 2021-22 ರ ವರದಿ ಇದಾಗಿದೆ. ಇಲ್ಲಿಯವರೆಗೂ ಯಾಕೆ ಬಿಡುಗಡೆ ಮಾಡಿರಲಿಲ್ಲ? ನೀವು ಕಳ್ಳತನ ಮಾಡಿದಾಗ ನಿಮ್ಮನ್ನು ಹಿಡಿದಾಗ ಇನ್ನೊಬ್ಬರ ಮೇಲೆ ಗೂಬೆ ಕೂರಿಸುವ ಯತ್ನ. ಅವರೂ ಕಳ್ಳತನ ಮಾಡಿದ್ದಾರೆ ಅಂತ ಬಿಂಬಿಸಿ ಬಚಾವಾಗುವ ಯತ್ನ" ಎಂದು ಆಕ್ರೋಶ ವ್ಯಕ್ತಪಡಿಸಿದರು.