ಕರ್ನಾಟಕ

karnataka

ETV Bharat / state

ನಾಳೆ ದಕ್ಷಿಣ ಕನ್ನಡ ವಿಧಾನ ಪರಿಷತ್ ಉಪ ಚುನಾವಣೆ: 53 ಸೂಕ್ಷ್ಮ ಮತಗಟ್ಟೆಗಳು - VIDHANA PARISHAD BY ELECTION

ವಿಧಾನ ಪರಿಷತ್ ದಕ್ಷಿಣ ಕನ್ನಡ ಸ್ಥಳೀಯ ಸಂಸ್ಥೆಗಳ ಪ್ರಾಧಿಕಾರದ ಕ್ಷೇತ್ರದ ಉಪ ಚುನಾವಣೆಯಲ್ಲಿ 53 ಸೂಕ್ಷ್ಮ ಮತಗಟ್ಟೆಗಳಿವೆ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌ ಎಂ.ಪಿ. ತಿಳಿಸಿದ್ದಾರೆ.

ಮಂಗಳೂರು
ಮಂಗಳೂರು (ETV Bharat)

By ETV Bharat Karnataka Team

Published : Oct 20, 2024, 8:07 PM IST

ಮಂಗಳೂರು: ವಿಧಾನ ಪರಿಷತ್ ದಕ್ಷಿಣ ಕನ್ನಡ ಸ್ಥಳೀಯ ಸಂಸ್ಥೆಗಳ ಪ್ರಾಧಿಕಾರದ ಕ್ಷೇತ್ರದ ಉಪಚುನಾವಣೆ ನಾಳೆ (ಸೋಮವಾರ) ನಡೆಯಲಿದ್ದು, 53 ಸೂಕ್ಷ್ಮ ಮತಗಟ್ಟೆಗಳಿವೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ ತಿಳಿಸಿದ್ದಾರೆ.

ಸೂಕ್ಷ್ಮ ಮತಗಟ್ಟೆಗಳಲ್ಲಿ ಸಂಪೂರ್ಣ ವಿಡಿಯೋ ಚಿತ್ರೀಕರಣ ವ್ಯವಸ್ಥೆಯನ್ನು ಮಾಡಲಾಗಿದೆ ಹಾಗೂ ಹೆಚ್ಚುವರಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ. 20ಕ್ಕಿಂತ ಹೆಚ್ಚು ಮತದಾರರು ಇರುವ ಮತಗಟ್ಟೆಗಳಲ್ಲಿ ಮೈಕ್ರೋ ವೀಕ್ಷಕರುಗಳನ್ನು ನೇಮಕ ಮಾಡಲಾಗಿದೆ. ಈಗಾಗಲೇ ಆಯಾ ಗ್ರಾಮ ಪಂಚಾಯತ್‍ಗಳಲ್ಲಿ ಹಾಗೂ ನಗರ ಸ್ಥಳೀಯ ಸಂಸ್ಥೆಗಳಲ್ಲಿರುವ ಸಿಸಿಟಿವಿಗಳನ್ನು ಚುನಾವಣಾ ಪ್ರಕ್ರಿಯೆಗೆ ಬಳಸಲಾಗುತ್ತಿದೆ ಎಂದು ಮಾಹಿತಿ ಒದಗಿಸಿದ್ದಾರೆ.

ದಕ್ಷಿಣ ಕನ್ನಡ ಸ್ಥಳೀಯ ಪ್ರಾಧಿಕಾರ ಕ್ಷೇತ್ರದಲ್ಲಿ ಒಟ್ಟು 392 ಮತಗಟ್ಟೆಗಳಿದ್ದು 6,032 ಮತದಾರರಿದ್ದಾರೆ. ಈ ಪೈಕಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 3,552 ಹಾಗೂ ಉಡುಪಿ ಜಿಲ್ಲೆಯಲ್ಲಿ 2,480 ಮತದಾರರಿದ್ದಾರೆ. ಮತದಾರರು ಮತಗಟ್ಟೆಯಲ್ಲಿ ನೀಡುವ ನೇರಳೆ ಪೆನ್ನಿನಿಂದ ಮತಪತ್ರದಲ್ಲಿ ಪ್ರಾಶಸ್ತ್ಯ ಅನುಸಾರ ಮತ ಚಲಾಯಿಸಬೇಕು. ಮೊದಲನೇ ಪ್ರಾಶಸ್ತ್ಯದ ಮತವನ್ನು ಯಾವ ಅಭ್ಯರ್ಥಿಗೆ ಚಲಾಯಿಸುತ್ತಿದ್ದಾರೆ ಎಂಬುದನ್ನು ಕ್ರಮ ಸಂಖ್ಯೆ “1” ಎಂದು ನಮೂದಿಸುವ ಮೂಲಕ ಮತ ಚಲಾಯಿಸಬೇಕು. ಇಂಗ್ಲಿಷ್, ಕನ್ನಡ ಅಥವಾ ರೋಮನ್ ಅಂಕಿಯಲ್ಲಿ “1” ನಮೂದಿಸಬೇಕು ಎಂದು ತಿಳಿಸಿದರು.

ಪ್ರಾಶಸ್ತ್ರವನ್ನು ಅಂಕಿಗಳ ಮೂಲಕ ಮಾತ್ರ ಎಂದರೆ 1, 2, 3 ಇತ್ಯಾದಿ ಕ್ರಮದಲ್ಲಿ ಮಾತ್ರ ಗುರುತು ಹಾಕಬೇಕು. ಇದರ ಬದಲಾಗಿ ಒಂದು ಎರಡು, ಮೂರು, ಇತ್ಯಾದಿ ಅಕ್ಷರಗಳ ರೂಪದಲ್ಲಿ ಬರೆಯಬಾರದು ಎಂದು ಸೂಚನೆ ನೀಡಲಾಗಿದೆ. ಮತ ಚಲಾಯಿಸುವ ಉದ್ದೇಶಕ್ಕಾಗಿ ಮತಗಟ್ಟೆ ಅಧಿಕಾರಿಯವರು ಮತಪತ್ರದೊಡನೆ ನೀಡುವ ನೇರಳೆ ಬಣ್ಣದ ಪೆನ್ನನ್ನು ಮಾತ್ರ ಬಳಸಿ ಮತ ಚಲಾಯಿಸಲು ಅವಕಾಶವಿರುತ್ತದೆ. ಬೇರೆ ಇತರೆ ಯಾವುದೇ ಪೆನ್ನು ಅಥವಾ ಗುರುತು ಮಾಡುವ ಸಾಧನವನ್ನು ಬಳಸಿ ಮತ ಚಲಾಯಿಸಿದರೆ ಅಂತಹ ಮತಪತ್ರವನ್ನು ಅಸಿಂಧು ಎಂದು ಪರಿಗಣಿಸಲಾಗುವುದು. ಈಗಾಗಲೇ ಮತ ಚಲಾಯಿಸುವ ವಿಧಾನದ ಬಗ್ಗೆ ಎಲ್ಲಾ ಮತದಾರರಿಗೆ ಮಾಹಿತಿ ನೀಡಲಾಗಿದೆ. ಮೊಬೈಲ್ ತೆಗೆದುಕೊಂಡು ಹೋಗಲು ಅವಕಾಶ ಇಲ್ಲ ಎಂದು ಮಾಹಿತಿ ನೀಡಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 223 ಗ್ರಾಮ ಪಂಚಾಯತ್‍ಗಳ 3,263 ಸದಸ್ಯರು, ಮಂಗಳೂರು ಮಹಾನಗರ ಪಾಲಿಕೆಯಲ್ಲಿ 65, ಎರಡು ನಗರ ಸಭೆಗಳಲ್ಲಿ 64, 3 ಪುರಸಭೆಗಳಲ್ಲಿ 74 ಹಾಗೂ 5 ನಗರ ಪಂಚಾಯತ್ ನಲ್ಲಿ 86 ಮಂದಿ ಮತ ಚಲಾಯಿಸಲು ಅರ್ಹರಾಗಿರುತ್ತಾರೆ. ಉಡುಪಿ ಜಿಲ್ಲೆಯಲ್ಲಿ 153 ಗ್ರಾಮ ಪಂಚಾಯತ್​ಗಳಲ್ಲಿ 2,355 ಸದಸ್ಯರು, ಉಡುಪಿ ನಗರ ಸಭೆಯಲ್ಲಿ 36, 3 ಪುರಸಭೆಯಲ್ಲಿ 72 ಹಾಗೂ ಒಂದು ನಗರ ಪಂಚಾಯತ್​ನಲ್ಲಿ 17 ಮಂದಿ ಮತ ಚಲಾಯಿಸಲು ಅರ್ಹರಾಗಿರುತ್ತಾರೆ. ಚುನಾವಣೆ ನಡೆಸಲು 392 ಮತಗಟ್ಟೆಗಳಿಗೆ ತಲಾ 470 ಮತಗಟ್ಟೆ ಅಧಿಕಾರಿ, ಸಹಾಯಕ ಮತಗಟ್ಟೆ ಅಧಿಕಾರಿ, ಮೈಕ್ರೋ ವೀಕ್ಷಕರನ್ನು ನಿಯೋಜಿಸಲಾಗಿದೆ. ಮತ ಎಣಿಕೆ ಮಂಗಳೂರಿನ ಸಂತ ಅಲೋಶಿಯಸ್​​​ ಪದವಿಪೂರ್ವ ಕಾಲೇಜಿನಲ್ಲಿ ಅಕ್ಟೋಬರ್ 24 ರಂದು ನಡೆಯಲಿದೆ ಎಂದು ಅವರು ವಿವರಿಸಿದ್ದಾರೆ.

ಎಲ್ಲಾ ಮತಗಟ್ಟೆಗಳಿಗೆ ಭದ್ರತೆಗೆ ಸಂಬಂಧಿಸಿದಂತೆ ದಕ್ಷಿಣ ಕನ್ನಡ ಜಿಲ್ಲೆಯ ಪೊಲೀಸ್ ಅಧೀಕ್ಷಕರ ವ್ಯಾಪ್ತಿ ಮತ್ತು ಪೊಲೀಸ್ ಆಯುಕ್ತರ ವ್ಯಾಪ್ತಿಯಲ್ಲಿ ಸೇರಿಕೊಂಡು ಒಟ್ಟು 540 ಪೊಲೀಸ್ ಅಧಿಕಾರಿ, ಸಿಬ್ಬಂದಿಗಳನ್ನು ಹಾಗೂ ಉಡುಪಿ ಜಿಲ್ಲಾ ವ್ಯಾಪ್ತಿಯಲ್ಲಿ 328 ಪೊಲೀಸ್ ಅಧಿಕಾರಿ, ಸಿಬ್ಬಂದಿ ಕೂಡ ನಿಯೋಜಿಸಲಾಗಿರುತ್ತದೆ. ಮತಗಟ್ಟೆ ಕೇಂದ್ರದ 100 ಮೀಟರ್ ವ್ಯಾಪ್ತಿಯಲ್ಲಿ ಯಾವುದೇ ಕಾರಣಕ್ಕೆ ವ್ಯಾಪಾರ ವಹಿವಾಟು, ಜನಸಂದಣಿ ಗುಂಪು ಗುಂಪು ಆಗಿ ಜನ ಸೇರದಂತೆ ಸೂಚಿಸಲಾಗಿದೆ. ಈ ಬಗ್ಗೆ ಮತಗಟ್ಟೆಗಳು ಇರುವ ಪ್ರದೇಶ ವ್ಯಾಪ್ತಿಗೆ ಸಂಬಂಧಿಸಿದಂತೆ ಕಲಂ 163ರಂತೆ ನಿಷೇಧಾಜ್ಞೆಯನ್ನು ಕೂಡ ಹೊರಡಿಸಲಾಗಿರುತ್ತದೆ ಎಂದು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ:ಇಂದು ರಾತ್ರಿ ಅಥವಾ ನಾಳೆ ಶಿಗ್ಗಾಂವ್ ಕಾಂಗ್ರೆಸ್​ ಅಭ್ಯರ್ಥಿ ಘೋಷಣೆ: ಸಚಿವ ಹೆಚ್.ಕೆ.ಪಾಟೀಲ್

ABOUT THE AUTHOR

...view details