ಮಂಗಳೂರು(ದಕ್ಷಿಣ ಕನ್ನಡ):ಪ್ರಕೃತಿ ವಿಕೋಪದಿಂದ ಯಾವ ಸಮಸ್ಯೆಗಳು ಉಂಟಾಗಬಹುದು ಎಂಬುದನ್ನು ನಿಗಾವಹಿಸಿ ಮುಂಜಾಗ್ರತೆ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಮೆಸ್ಕಾಂ ಇಲಾಖೆ:ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಕುಡಿವ ನೀರು ಹಾಗೂ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಯಲ್ಲಿ ಮಾತನಾಡಿದ ಅವರು, ನಗರ ಹಾಗೂ ಗ್ರಾಮೀಣ ಭಾಗದಲ್ಲಿ ಮಳೆಯ ಕಾರಣದಿಂದಾಗಿ ಯಾವುದೇ ಸಮಸ್ಯೆಗಳು ಉಂಟಾಗಿದ್ದಲ್ಲಿ ಮೆಸ್ಕಾಂ ಇಲಾಖೆಯು ತ್ವರಿತವಾಗಿ ಕಾರ್ಯ ಪ್ರವೃತ್ತರಾಗಬೇಕು. ವಿದ್ಯುತ್ ಸಮಸ್ಯೆ ಉಂಟಾಗದಂತೆ ಮುಂಜಾಗ್ರತೆ ಕ್ರಮ ವಹಿಸಬೇಕು. ವಿದ್ಯುತ್ ಸಮಸ್ಯೆ ಉಂಟಾದ 6 ಗಂಟೆಯ ಒಳಗೆ ಪರಿಹಾರ ಒದಗಿಸಬೇಕು ಎಂದು ತಿಳಿಸಿದರು.
ಕುಡಿವ ನೀರು ಪೂರೈಕೆ:ಕುಡಿಯುವ ನೀರಿನ ಬಗ್ಗೆ ಮಾತನಾಡಿದ ಅವರು, ಈಗಾಗಲೇ ಕೆಲವು ಕಡೆಗಳಲ್ಲಿ ಟ್ಯಾಂಕರ್ಗಳ ಮೂಲಕ ನೀರನ್ನು ಸರಬರಾಜು ಮಾಡಲಾಗುತ್ತಿದ್ದು, ಅನಾವಶ್ಯಕ ಉದ್ದೇಶಗಳಿಗೆ ನೀರು ಪೋಲಾಗುವುದನ್ನು ತಪ್ಪಿಸಲು ಕ್ರಮ ವಹಿಸಬೇಕು. ಅಂತವರ ವಿರುದ್ಧ ದಂಡ ವಿಧಿಸಬೇಕು. ಟ್ಯಾಂಕರ್ಗಳಿಂದ ಪೂರೈಸುತ್ತಿರುವ ನೀರು ಹಾಗೂ ನೀರಿನ ಮೂಲಗಳು ಶುದ್ಧವಾಗಿದೆ ಎಂಬುದನ್ನು ಕಡ್ಡಾಯವಾಗಿ ಪರೀಕ್ಷೆ ಮಾಡಿಸಲು ಕ್ರಮ ತೆಗೆದುಕೊಳ್ಳುವಂತೆ ಹೇಳಿದರು.
ಮುಂಗಾರು ಪೂರ್ವದಲ್ಲಿಯೇ ಡಂಪಿಂಗ್ ಯಾರ್ಡ್, ಕಸ ವಿಲೇವಾರಿ ಪ್ರದೇಶಗಳನ್ನು ಸ್ವಚ್ಛಗೊಳಿಸಬೇಕು, ಇಂತಹ ಪ್ರದೇಶಗಳಲ್ಲಿ ಕೃತಕ ನೆರೆ ಉಂಟಾಗದಂತೆ ಮುಂಜಾಗ್ರತ ಕ್ರಮ ವಹಿಸಬೇಕು. ಅಧಿಕಾರಿಗಳು ಕೂಡಲೇ ಅಂತಹ ಪ್ರದೇಶಗಳನ್ನು ಗುರುತಿಸಿ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
ಆರೋಗ್ಯ ಇಲಾಖೆ:ಆರೋಗ್ಯ ಇಲಾಖೆಯು ಮಳೆಯ ಸಂದರ್ಭದಲ್ಲಿ ಬರುವ ಡೆಂಘೀ ಮಲೇರಿಯಾ ಮುಂತಾದ ಸಾಂಕ್ರಾಮಿಕ ಕಾಯಿಲೆಗಳು ಹರಡದಂತೆ ಮುಂಜಾಗ್ರತೆ ಕ್ರಮ ವಹಿಸುವುದರ ಜೊತೆಗೆ ಮಳೆಯಿಂದ ಹಾನಿ ಪ್ರದೇಶದಲ್ಲಿ ತಮ್ಮ ಚಿಕಿತ್ಸೆ ಒದಗಿಸಲು ನಿಗಾವಹಿಸುವಂತೆ ಹೇಳಿದರು. ಅರಣ್ಯ ಇಲಾಖೆ ಮತ್ತು ಅಗ್ನಿಶಾಮಕ ದಳದವರು ಜಂಟಿಯಾಗಿ ಮಾತುಕತೆ ನಡೆಸಿ ಮರದ ರೆಂಬೆ ಕೊಂಬೆಗಳು ವಿದ್ಯುತ್ ತಂತಿಗಳಿಗೆ ತಗುಲಿ ಉಂಟಾಗುವ ಅಪಾಯವನ್ನು ತಡೆಯಲು ಕೂಡಲೇ ರೆಂಬೆಕೊಂಬೆಗಳನ್ನು ಕತ್ತರಿಸಬೇಕು ಎಂದರು.