ಮಂಗಳೂರು: ಕಿನ್ನಿಗೋಳಿಯಲ್ಲಿ ರಸ್ತೆ ದಾಟುತ್ತಿದ್ದ ಸಂದರ್ಭದಲ್ಲಿ ರಿಕ್ಷಾ ಡಿಕ್ಕಿಯಾಗಿ ಅದರಡಿಗೆ ಬಿದ್ದ ತಾಯಿಯನ್ನು ತಕ್ಷಣವೇ ಧಾವಿಸಿ ಬಂದು ರಕ್ಷಿಸಿದ ಬಾಲಕಿ ವೈಭವಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಶ್ಲಾಘಿಸಿದ ಬೆನ್ನಲ್ಲೇ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸನ್ಮಾನಿಸಿದರು.
ತಾಯಿಯನ್ನು ರಕ್ಷಿಸಿದ ಬಾಲಕಿಯನ್ನು ದ.ಕ. ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಸನ್ಮಾನಿಸಿದರು. (ETV Bharat) ದ.ಕ. ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅವರು ಮಂಗಳವಾರ ತಮ್ಮ ಕಚೇರಿಗೆ ಬಾಲಕಿಯನ್ನು ಕರೆಯಿಸಿ ಸನ್ಮಾನಿಸಿದರು. 7ನೇ ತರಗತಿಯ ವಿದ್ಯಾರ್ಥಿನಿಯಾಗಿರುವ ವೈಭವಿ ಅವರಿಗೆ ಪೇಟ, ಹೂವಿನ ಹಾರ ಹಾಕಿದ ಡಿಸಿಯವರು ಬಾಲಕಿಯ ಸಮಯಪ್ರಜ್ಞೆ ಮತ್ತು ಧೈರ್ಯವನ್ನು ಶ್ಲಾಘಿಸಿದರು. "ವೈಭವಿಯ ಈ ಸಮಯ ಪ್ರಜ್ಞೆ ಎಲ್ಲರಿಗೂ ಮಾದರಿಯಾಗಿದೆ. ಶಾಲಾ ಹಂತದಲ್ಲಿ ಮಕ್ಕಳಿಗೆ ಇಂತಹ ಸಾಹಸ ಕಾರ್ಯ ಮತ್ತು ಧೈರ್ಯ ಮೂಡಿ ಬರಬೇಕಿದೆ" ಎಂದು ಹೇಳಿದರು.
ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಡಾ. ಜಿ. ಸಂತೋಷ್ ಕುಮಾರ್, ಸಮಾಜ ಕಲ್ಯಾಣ ಉಪನಿರ್ದೇಶಕಿ ಹೇಮಲತಾ, ಸಹಾಯಕ ನಿರ್ದೇಶಕ ಸುರೇಶ್ ಅಡಿಗ ಮತ್ತು ವೈಭವಿ ಪಾಲಕರು ಉಪಸ್ಥಿತರಿದ್ದರು.
ಆಟೋ ಮೇಲಕ್ಕೆತ್ತಿದ ಬಾಲಕಿ (ETV Bharat) ಘಟನೆ ಹಿನ್ನೆಲೆ: ಕಿನ್ನಿಗೋಳಿ ಉಲ್ಲಂಜೆಯ ರಾಮನಗರ 2ನೇ ಅಡ್ಡರಸ್ತೆ ಬಳಿ ಸೆ.6ರಂದು ರಸ್ತೆ ದಾಟುತ್ತಿದ್ದ ರಾಜರತ್ನಾಪುರ ನಿವಾಸಿ ಚೇತನಾ(35) ಎಂಬವರಿಗೆ ಡಿಕ್ಕಿಯಾಗುವುದನ್ನು ತಪ್ಪಿಸಲು ಹೋಗಿ ಆಟೋ ರಿಕ್ಷಾ ನಿಯಂತ್ರಣ ತಪ್ಪಿ ಅವರ ಮೇಲೆಯೇ ಉರುಳಿಬಿದ್ದಿತ್ತು. ಇದೇ ವೇಳೆ ಆ ದಾರಿಯಾಗಿ ನಡೆದುಕೊಂಡು ಬರುತ್ತಿದ್ದ ಅವರ ಪುತ್ರಿ ತಕ್ಷಣ ತಾಯಿಯ ನೆರವಿಗೆ ಧಾವಿಸಿದ್ದರು. ಆಟೋದಲ್ಲಿದ್ದವರು ಎದ್ದೇಳುತ್ತಿದ್ದಾಗ ರಿಕ್ಷಾವನ್ನು ಮೇಲೆತ್ತಲು ಬಾಲಕಿ ನೆರವಾಗಿದ್ದಲ್ಲದೆ, ಗಾಯಾಳುವಿಗೂ ನೆರವಾಗಿದ್ದರು. ಈ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿತ್ತು. ಚೇತನಾ ಅವರು ಸುರತ್ಕಲ್‌ನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇದನ್ನೂ ಓದಿ:ರಸ್ತೆ ದಾಟುತ್ತಿದ್ದ ತಾಯಿಗೆ ರಿಕ್ಷಾ ಡಿಕ್ಕಿ: ಧಾವಿಸಿ ಬಂದು ರಕ್ಷಿಸಿದ ಮಗಳ ಶೌರ್ಯಕ್ಕೆ ಮೆಚ್ಚುಗೆ!- ವಿಡಿಯೋ - Mangaluru Accident