ಲಕ್ನೋ (ಉತ್ತರ ಪ್ರದೇಶ): ನೋಯ್ಡಾದ ಗಡಿ ಗೌತಮ್ ಬುದ್ಧನಗರದಲ್ಲಿ ರೈತರು ತಮ್ಮ ಬೇಡಿಕೆಗೆ ಆಗ್ರಹಿಸಿ ಪ್ರತಿಭಟನೆ ಮುಂದುವರೆಸಿದ್ದಾರೆ. ಪ್ರತಿಭಟನಾ ನಿರತ ರೈತರ ಸಮಸ್ಯೆ ಆಲಿಸಲು ಸಿಎಂ ಯೋಗಿ ಆದಿತ್ಯನಾಥ್ ಸಮಿತಿ ರಚಿಸಿದ್ದಾರೆ. ಈ ಸಮಿತಿ ರೈತರನ್ನು ಭೇಟಿಯಾಗಿ ಚರ್ಚಿಸಿ, ಸಮಸ್ಯೆ ಮತ್ತು ಪರಿಹಾರಗಳ ಕುರಿತು ವರದಿಯನ್ನು ಇನ್ನೊಂದು ತಿಂಗಳಲ್ಲಿ ಸರ್ಕಾರಕ್ಕೆ ಸಲ್ಲಿಸಲಿದೆ.
ಸಮಿತಿಯಲ್ಲಿ ಐವರು ಸದಸ್ಯರಿದ್ದು, ಮೂಲಸೌಕರ್ಯ ಕೈಗಾರಿಕಾ ಅಭಿವೃದ್ಧಿ ಪ್ರಧಾನ ಕಾರ್ಯದರ್ಶಿ ಅನಿಲ್ ಕುಮಾರ್ ಸಾಗರ್ ಸಮಿತಿ ಅಧ್ಯಕ್ಷರಾಗಿದ್ದಾರೆ. ಮೂಲಸೌಕರ್ಯ ಕೈಗಾರಿಕಾ ಅಭಿವೃದ್ಧಿಯ ವಿಶೇಷ ಕಾರ್ಯದರ್ಶಿ ಪಿಯೂಷ್ ವರ್ಮಾ, ಎಸಿಇಒ ನೋಯ್ಡಾ ಸಂಜಯ್ ಖತ್ರಿ, ಎಸಿಇಒ ಗ್ರೇಟರ್ ನೋಯ್ಡಾ ಸೌಮ್ಯ ಶ್ರೀವಾಸ್ತವ್, ಎಸಿಇಒ ಯೆಐಡಿಎ ಕಪಿಲ್ ಸಿಂಗ್ ಅವರು ಸಮಿತಿಯಲ್ಲಿದ್ದಾರೆ. ಇವರು ನೋಯ್ಡಾ ಮತ್ತು ಗ್ರೇಟರ್ ನೋಯ್ಡಾದಲ್ಲಿನ ಪ್ರತಿಭಟನಾನಿರತ ರೈತರ ಪ್ರಮುಖ ಸಮಸ್ಯೆಗಳನ್ನು ಆಲಿಸಲಿದ್ದಾರೆ.
ಕಳೆದ ನವೆಂಬರ್ನಿಂದ ರೈತರು ಸರ್ಕಾರ ವಶಪಡಿಸಿಕೊಂಡ ಜಮೀನಿಗೆ ಸೂಕ್ತ ಬೆಲೆ ಸೇರಿದಂತೆ ವಿವಿಧ ಬೇಡಿಕೆಗೆ ಆಗ್ರಹಿಸಿ ನೋಯ್ಡಾ ಮತ್ತು ಗೌತಮ್ ಬುದ್ಧನಗರ ಗ್ರೇಟರ್ ನೋಯ್ಡಾದಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಶೇ.10ರಷ್ಟು ಭೂ ಮಂಜೂರಾತಿ ಹಾಗೂ 2013ರ ಭೂಸ್ವಾಧೀನ ಕಾಯ್ದೆ ಅನುಷ್ಠಾನದ ಪ್ರಮುಖ ಬೇಡಿಕೆಗಳಿಗೆ ಆಗ್ರಹಿಸಿ ರೈತರು ದೆಹಲಿ ಚಲೋ ಮೆರವಣಿಗೆಗೆ ಮುಂದಾಗಿದ್ದರು. ಈ ವೇಳೆ ನೋಯ್ಡಾ ಗಡಿಯಲ್ಲಿ ಬೃಹತ್ ಬ್ಯಾರಿಕೇಡ್ಗಳನ್ನು ಹಾಕುವ ಮೂಲಕ ಮೆರವಣಿಗೆಗೆ ತಡೆಯೊಡ್ಡಲಾಯಿತು.
ರೈತರ ಸಮಸ್ಯೆ ಮತ್ತು ಪ್ರತಿಭಟನೆ ತೀವ್ರವಾಗುತ್ತಿರುವ ಹಿನ್ನೆಲೆ ಇದೀಗ ರಾಜ್ಯ ಸರ್ಕಾರ ಸಮಿತಿ ರಚನೆಗೆ ಮುಂದಾಗಿದೆ. ಈ ಸಂಬಂಧ ಕೈಗಾರಿಕಾ ವಲಯ ಕಾರ್ಯದರ್ಶಿಗಳಿಗೆ ಆದೇಶ ಜಾರಿ ಮಾಡಿದೆ.
ಇದನ್ನೂ ಓದಿ: ರಾಷ್ಟ್ರ ರಾಜಧಾನಿಯತ್ತ ರೈತರ ಪ್ರತಿಭಟನಾ ಮೆರವಣಿಗೆ; ದೆಹಲಿ-ನೋಯ್ಡಾ ಗಡಿಯಲ್ಲಿ ಟ್ರಾಫಿಕ್ ಜಾಮ್