ಮಂಗಳೂರು (ದಕ್ಷಿಣ ಕನ್ನಡ):ಕರಾವಳಿ ಕರ್ನಾಟಕದ ಸಾಂಪ್ರದಾಯಿಕ ಕ್ರೀಡೆಯಾಗಿ ಗುರುತಿಸಿಕೊಂಡಿರುವ ಕಂಬಳ ಇದೀಗ ಆಧುನಿಕ ತಂತ್ರಜ್ಞಾನದ ಟಚ್ ಪಡೆಯುತ್ತಿದೆ. ಕಂಬಳದಲ್ಲಿ ನಿಖರ ಫಲಿತಾಂಶ ಸಹಿತ ಕ್ರೀಡೆಯನ್ನು ನಿಗದಿತ ಸಮಯದೊಳಗೆ ಮುಗಿಸಲು ನೂತನವಾಗಿ ಸ್ವಯಂ ಚಾಲಿತ ಗೇಟ್ ಹಾಗೂ ಫೋಟೊ ಫಿನಿಶ್ ತಂತ್ರಜ್ಞಾನ ಅಳವಡಿಕೆಗೆ ದಕ ಜಿಲ್ಲಾ ಕಂಬಳ ಸಮಿತಿಯು ಮುಂದಾಗಿದೆ.
ಫೆ.3ರಂದು ನಡೆಯುವ ಐಕಳ ಕಂಬಳದಲ್ಲಿ ಪ್ರಥಮ ಬಾರಿಗೆ ಈ ನೂತನ ತಂತ್ರಜ್ಞಾನ ಪ್ರಾಯೋಗಿಕವಾಗಿ ಬಳಕೆಗೆ ಬರಲಿದೆ. ಆ ಬಳಿಕ ಈ ತಂತ್ರಜ್ಞಾನವನ್ನು ಎಲ್ಲ ಕಂಬಳಗಳಿಗೆ ವಿಸ್ತರಿಸಲು ನಿರ್ಧರಿಸಲಾಗಿದೆ. ಇದರಿಂದ ನಿಖರ ಫಲಿತಾಂಶದೊಂದಿಗೆ ನಿಗದಿತ ಸಮಯದೊಳಗೆ ಕಂಬಳ ಮುಕ್ತಾಯವಾಗಲಿದೆ. ಅದಾನಿ ಗ್ರೂಪ್ ಸಂಸ್ಥೆ ಈ ಆಧುನಿಕ ತಂತ್ರಜ್ಞಾನಕ್ಕೆ 10 ಲಕ್ಷ ರೂ. ನೆರವು ನೀಡಿದೆ.
ಕಂಬಳ ಸಮಿತಿ ಅಧ್ಯಕ್ಷರು ಏನಂತಾರೆ;ಆಧುನಿಕ ತಂತ್ರಜ್ಞಾನ ಬಳಕೆ ಕುರಿತು ಈಟಿವಿ ಭಾರತದೊಂದಿಗೆ ಮಾತನಾಡಿದ ಕಂಬಳ ಸಮಿತಿ ಅಧ್ಯಕ್ಷ ಐಕಳ ಬಾವ ದೇವಿ ಪ್ರಸಾದ್ ಶೆಟ್ಟಿ, ಅಂತಾರಾಷ್ಟ್ರೀಯ ಕ್ರೀಡೆಗಳಲ್ಲಿ ಪ್ರಾಣಿಗಳ ಓಟದಲ್ಲಿ ಇರುವ ತಂತ್ರಜ್ಞಾನದಂತೆ ಗೇಟ್ ವ್ಯವಸ್ಥೆ ಮತ್ತು ಫೋಟೋ ಫಿನಿಶ್ ಫಲಿತಾಂಶದ ವ್ಯವಸ್ಥೆ ಮಾಡಲಾಗಿದೆ. ಕಂಬಳವನ್ನು ನಿಗದಿತ ಸಮಯದಲ್ಲಿ ಮುಗಿಸುವ ಉದ್ದೇಶವಿಟ್ಟುಕೊಂಡು ಈ ಯೋಜನೆ ಆರಂಭಿಸಲಾಗಿದೆ. ನಿಗದಿತ ಸಮಯದಲ್ಲಿ ಕೋಣವನ್ನು ಓಡಿಸದಿದ್ದರೆ ಗೇಟ್ ಬೀಳುತ್ತದೆ. ಕೌಂಟ್ ಡೌನ್ ಸಮಯದಲ್ಲಿ ಕೋಣ ಓಡಿಸದಿದ್ದರೆ, ಬೇರೆ ಕೋಣಗಳನ್ನು ಕರೆಗೆ ಇಳಿಸಲು ಅವಕಾಶ ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ.
ಕಂಬಳದಲ್ಲಿ ಗೇಟ್ನ ತಾಂತ್ರಿಕ ವ್ಯವಸ್ಥೆ ಮಾಡಿದ ರತ್ನಾಕರ್ ಮಾತನಾಡಿ, ಕಳೆದ 10 ವರ್ಷದಿಂದ ನಾನೇ ಆವಿಷ್ಕರಿಸಿದ ಲೇಸರ್ ಸಿಸ್ಟಮ್ನಿಂದ ಫಲಿತಾಂಶ ನೀಡಲಾಗುತ್ತಿತ್ತು. ಇದೀಗ ಕಂಬಳದಲ್ಲಿ ಕೋಣ ಬಿಡುವ ಸಮಯದಲ್ಲಿ ವಿಳಂಬ ಆಗುವುದನ್ನು ತಪ್ಪಿಸಲು ಈ ವ್ಯವಸ್ಥೆ ಮಾಡಲಾಗಿದೆ. ಫೋಟೋ ಫಿನಿಶ್ ವ್ಯವಸ್ಥೆಯಲ್ಲಿ 1 ಸೆಕೆಂಡ್ ಅನ್ನು ಸಹ ವಿಭಾಗಿಸಿ ರಿಸಲ್ಟ್ ಕೊಡುತ್ತದೆ ಎಂದು ವಿವರಣೆ ನೀಡಿದರು.