ಕರ್ನಾಟಕ

karnataka

ETV Bharat / state

ಬೆಂಗಳೂರು, ನೀರಾವರಿ ಅಭಿವೃದ್ಧಿಗೆ ಹೆಚ್ಚಿನ ಅನುದಾನಕ್ಕೆ ಪ್ರಧಾನಿ ಮೋದಿ ಅವರ ಬಳಿ ಬೇಡಿಕೆ : ಡಿಸಿಎಂ ಡಿ ಕೆ ಶಿವಕುಮಾರ್ - D K SHIVAKUMAR MEETS PM MODI

ಬೆಂಗಳೂರಿಗೆ ಮೂಲಸೌಕರ್ಯದ ಅಭಿವೃದ್ಧಿಗೆ ಹೆಚ್ಚಿನ ಅನುದಾನ ನೀಡುವಂತೆ ಪ್ರಧಾನಿ ಮೋದಿ ಅವರಿಗೆ ಮನವಿ ಸಲ್ಲಿಸಲಾಗಿದೆ ಎಂದು ಡಿಸಿಎಂ ಡಿ ಕೆ ಶಿವಕುಮಾರ್ ಅವರು ತಿಳಿಸಿದ್ದಾರೆ.

d-k-shivakumar
ಡಿಸಿಎಂ ಡಿ ಕೆ ಶಿವಕುಮಾರ್ (ETV Bharat)

By ETV Bharat Karnataka Team

Published : Jul 31, 2024, 3:50 PM IST

Updated : Jul 31, 2024, 4:12 PM IST

ಡಿಸಿಎಂ ಡಿ ಕೆ ಶಿವಕುಮಾರ್ (ETV Bharat)

ಬೆಂಗಳೂರು/ದೆಹಲಿ: ಗಿಫ್ಟ್ ಸಿಟಿ ಮಾದರಿಯಲ್ಲಿ ಬೆಂಗಳೂರನ್ನು ಪರಿಗಣಿಸಬೇಕು ಎಂದು ಮನವಿ ಮಾಡಲಾಗಿತ್ತು. ಇದು ಸಾಧ್ಯವಾಗದ ಕಾರಣಕ್ಕೆ ಸುರಂಗ ರಸ್ತೆ, ಸಿಗ್ನಲ್ ಮುಕ್ತ ರಸ್ತೆ, ಪ್ರಮುಖ ರಸ್ತೆಗಳು ಮತ್ತು ಮಳೆ ನೀರುಗಾಲುವೆಗಳ ಅಭಿವೃದ್ಧಿ ಹಾಗೂ ನೀರಾವರಿಗೆ ಹೆಚ್ಚಿನ ಅನುದಾನ ನೀಡುವಂತೆ ಪ್ರಧಾನಿ ಮೋದಿ ಅವರಿಗೆ ಮನವಿ ಸಲ್ಲಿಸಲಾಗಿದೆ ಎಂದು ಉಪಮುಖ್ಯಮಂತ್ರಿ ಡಿ. ಕೆ ಶಿವಕುಮಾರ್ ಅವರು ಹೇಳಿದರು.

ಪ್ರಧಾನಿ ನರೇಂದ್ರ ಮೋದಿ ಅವರ ಭೇಟಿಯ ಬಳಿಕ ಮಾಧ್ಯಮಗಳನ್ನು ಉದ್ದೇಶಿಸಿ ದೆಹಲಿಯ ಕರ್ನಾಟಕ ಭವನದಲ್ಲಿ ಇಂದು ಮಾತನಾಡಿದ ಅವರು, ಬೆಂಗಳೂರು ಅತಿ ಹೆಚ್ಚು ತೆರಿಗೆ ನೀಡುವ ನಗರವಾಗಿದೆ. ಈ ನಗರಕ್ಕೆ ಬಜೆಟ್ ಅಲ್ಲಿ ಏನೂ ದೊರೆತಿಲ್ಲ. ಮಹಾರಾಷ್ಟ್ರದಂತೆ ನಮ್ಮನ್ನು ಪರಿಗಣಿಸಬೇಕು. ಮನಮೋಹನ್ ಸಿಂಗ್ ಅವರ ಕಾಲದಲ್ಲಿ ಜೆಎನ್ ನರ್ಮ್ ಯೋಜನೆ ಅಡಿ ಎಲೆಕ್ಟ್ರಾನಿಕ್ಸ್ ಸಿಟಿ, ಹೆಬ್ಬಾಳ, ನೆಲಮಂಗಲ ಮೇಲ್ಸೇತುವೆ ನಿರ್ಮಾಣಕ್ಕೆ ಅನುದಾನ ನೀಡಲಾಗಿತ್ತು ಎಂದರು.

ಪ್ರಧಾನಿ ಮೋದಿ ಭೇಟಿಯಾದ ಡಿ ಕೆ ಶಿವಕುಮಾರ್​ (ETV Bharat)

ದೇಶಕ್ಕೆ ಒಂದೇ ಗಿಫ್ಟ್ ಸಿಟಿ ಮಾಡಲು ಸಾಧ್ಯ. ಎರಡು ಪ್ರದೇಶಗಳನ್ನು ಮಾಡಲು ಸಾಧ್ಯವಿಲ್ಲ ಎಂದು ಪ್ರಧಾನಿ ತಿಳಿಸಿದರು. ರಾಜ್ಯ ರಾಜಧಾನಿಯಲ್ಲಿ ನೂತನವಾಗಿ ಒಂದಷ್ಟು ಹೊಸ ಯೋಜನೆಗಳನ್ನು ಕೈಗೆತ್ತಿಕೊಳ್ಳಲು ಸರ್ಕಾರ ಯೋಜನೆ ರೂಪಿಸುತ್ತಿದೆ. ಆದ ಕಾರಣ ಈ ಯೋಜನೆಗಳಿಗೂ ಕೇಂದ್ರ ಸರ್ಕಾರ ನೆರವಾಗಬೇಕು ಎಂದು ಕೇಳಲಾಗಿದೆ. ಬೆಂಗಳೂರಿಗೆ ಹೊರಗಿನಿಂದ ಹೆಚ್ಚಿನ ಜನ ಬರುತ್ತಿದ್ದಾರೆ. ಜೊತೆಗೆ ನಗರದ ಮೂಲಸೌರ್ಕಯಗಳ ಅಭಿವೃದ್ಧಿಗೆ ಹೆಚ್ಚಿನ ಗಮನ ಕೊಡಬೇಕಿದೆ. ಇದಕ್ಕೆ ಅನುದಾನದ ಅವಶ್ಯಕತೆಯಿದೆ ಎಂದು ಪ್ರಧಾನಿಯವರಿಗೆ ತಿಳಿಸಲಾಗಿದೆ ಎಂದು ಹೇಳಿದರು.

ಭದ್ರಾ ಮೇಲ್ದಂಡೆ ಯೋಜನೆ ಸಚಿವ ಸಂಪುಟ ಸಭೆಯಲ್ಲಿ ಪ್ರಸ್ತಾಪ : ಕಳೆದ ಬಜೆಟ್ ವೇಳೆ ಭದ್ರಾ ಮೇಲ್ದಂಡೆ ಯೋಜನೆಗೆ ರೂ. 5,300 ಕೋಟಿ ಅನುದಾನ ಘೋಷಣೆ ಮಾಡಲಾಗಿತ್ತು. ಈ ಬಾರಿಯ ಸಚಿವ ಸಂಪುಟ ಸಭೆಯಲ್ಲಿ ಈ ವಿಚಾರ ಪ್ರಸ್ತಾಪಿಸಲಾಗುವುದು ಎಂದು ಭರವಸೆ ನೀಡಿದ್ದಾರೆ.

ಮಳೆ ವಿಚಾರ, ತಮಿಳುನಾಡಿಗೆ 40 ಟಿಎಂಸಿ ನೀರು ಬಿಡಬೇಕಿತ್ತು. 84 ಟಿಎಂಸಿಗಿಂತ ಹೆಚ್ಚು ನೀರು ಬಿಡಲಾಗಿದೆ ಎಂದು ತಿಳಿಸಿದೆವು. ಒಂದು ಸಭೆ ನಡೆಸಿ ಮಹದಾಯಿ ಯೋಜನೆ ಸಮಸ್ಯೆ ಬಗೆಹರಿಸಬಹುದು ಎಂದು ಅವರ ಗಮನಕ್ಕೆ ತಂದೆವು. ಮೇಕೆದಾಟು ವಿಚಾರವಾಗಿ ನೀವುಗಳೇ ಸಮಸ್ಯೆಗಳನ್ನು ಬಗೆಹರಿಸಿಕೊಂಡರೆ ಉತ್ತಮ ಎಂದು ಸಲಹೆ ನೀಡಿದರು. ಈ ವಿಚಾರದಲ್ಲಿ ಕೇಂದ್ರ ಮಧ್ಯಸ್ಥಿಕೆ ವಹಿಸಬೇಕು ಎಂದು ಮನವಿ ಸಲ್ಲಿಸಲಾಗಿದೆ ಎಂದು ಡಿ ಕೆ ಶಿವಕುಮಾರ್ ಹೇಳಿದರು.

ಈ ಬಾರಿಯ ಬಜೆಟ್ ಅಲ್ಲಿ ಕರ್ನಾಟಕದ ಪಾಲಿಗೆ ಅನುದಾನವೇ ಬಂದಿಲ್ಲ. ಅದರಲ್ಲೂ ನೀರಾವರಿಗೆ ಕೊಂಚವೂ ಅನುದಾನ ಬರದ ಕಾರಣ ಇವುಗಳನ್ನು ಪ್ರಧಾನಿಗಳ ಗಮನಕ್ಕೆ ತರುವ ಸಲುವಾಗಿ ಭೇಟಿ ಮಾಡಲಾಯಿತು ಎಂದು ತಿಳಿಸಿದರು.

ಉತ್ತಮವಾಗಿ ಮಳೆ ಬಂದು ತಮಿಳುನಾಡಿಗೆ ಹೆಚ್ಚುವರಿ ನೀರು ಹರಿಯುತ್ತಿರುವ ವಿಚಾರ ಕೇಂದ್ರ ಜಲಶಕ್ತಿ ಸಚಿವರ ಗಮನಕ್ಕೆ ಬಂದಿದೆ. ನಾವು ಸಹ ವಾಸ್ತವಾಂಶವನ್ನು ಸಚಿವರಿಗೆ ಅರ್ಥ ಮಾಡಿಸುತ್ತೇವೆ ಎಂದರು.

ತಮಿಳುನಾಡಿಗೆ ಇತಿಹಾಸದಲ್ಲೇ ಹೆಚ್ಚಿನ ನೀರು ಬಿಡುಗಡೆ :2 ಲಕ್ಷದ 25 ಸಾವಿರ ಕ್ಯೂಸೆಕ್ ನೀರನ್ನು ತಮಿಳುನಾಡಿಗೆ ಮಂಗಳವಾರದ ತನಕ ಹರಿಸಲಾಗಿದೆ. ಮೊದಲ ಬಾರಿಗೆ ಇಷ್ಟು ಪ್ರಮಾಣದ ನೀರನ್ನು ಹರಿಸಲಾಗಿದೆ. ಮಳೆ ಸ್ವಲ್ಪ ತಗ್ಗಿದ ಕಾರಣಕ್ಕೆ ಒಂದು ಮುಕ್ಕಾಲು ಲಕ್ಷ ಕ್ಯೂಸೆಕ್​ ನೀರನ್ನು ಹರಿಸುತ್ತಿದ್ದೇವೆ. ಕಾವೇರಿ ಜಲಾನಯನ ಪ್ರದೇಶದಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ.

ಕೇರಳದಲ್ಲೂ ಉತ್ತಮ ಮಳೆಯಾಗುತ್ತಿರುವ ಕಾರಣಕ್ಕೆ ಕಬಿನಿ ಹಾಗೂ ಕೆಆರ್​ಎಸ್ ಅಣೆಕಟ್ಟಿನಲ್ಲಿ ನೀರನ್ನು ಸಂಗ್ರಹ ಮಾಡದೆ ಬಿಡಲಾಗುತ್ತಿದೆ. ನದಿ ಪಾತ್ರದ ಜನರು ಎಚ್ಚರಿಕೆಯಿಂದ ಇರಬೇಕು. ನದಿ ಹತ್ತಿರ ಹೋಗಬಾರದು ಎಂದು ಜನರಲ್ಲಿ ಮನವಿ ಮಾಡಲಾಗಿದೆ ಎಂದು ಹೇಳಿದರು.

ಮುಡಾ ಪಾದಯಾತ್ರೆ : ನಾವು ತಯಾರಿ ಮಾಡಿಕೊಂಡಿದ್ದೇವೆ. ಮುಡಾ ಅಕ್ರಮ ವಿಚಾರವಾಗಿ ಬಿಜೆಪಿ ಪಾದಯಾತ್ರೆಗೆ ಜೆಡಿಎಸ್ ಬೆಂಬಲ ನೀಡುವುದಿಲ್ಲ ಎನ್ನುವ ಹೆಚ್​ ಡಿ ಕುಮಾರಸ್ವಾಮಿ ಅವರ ಹೇಳಿಕೆ ಬಗ್ಗೆ ಕೇಳಿದಾಗ, ಈ ವಿಚಾರ ನನಗೆ ತಿಳಿದಿಲ್ಲ. ಇದಕ್ಕೆ ನಾವು ಏನು ಸಿದ್ಧತೆ ಮಾಡಿಕೊಳ್ಳಬೇಕೊ ಅದನ್ನು ಮಾಡಿಕೊಂಡಿದ್ದೇವೆ. ಈ ವಿಷಯದ ಬಗ್ಗೆ ಬೆಂಗಳೂರಿನಲ್ಲಿ ಮಾಧ್ಯಮಗೋಷ್ಟಿ ನಡೆಸಿ ಮಾತನಾಡುತ್ತೇನೆ ಎಂದರು.

ಇದನ್ನೂ ಓದಿ :ದೆಹಲಿಯಲ್ಲಿ ಖರ್ಗೆ, ರಾಹುಲ್ ಭೇಟಿಯಾದ ಸಿದ್ದರಾಮಯ್ಯ, ಡಿಕೆಶಿ; ವಾಲ್ಮೀಕಿ ನಿಗಮ ಅಕ್ರಮ, ಮುಡಾ ವಿಚಾರಗಳ ಮನವರಿಕೆ - Congress Leaders Meeting

Last Updated : Jul 31, 2024, 4:12 PM IST

ABOUT THE AUTHOR

...view details