ಬೆಂಗಳೂರು: "ವಾಲ್ಮೀಕಿ ನಿಗಮದ ಹಣ ವರ್ಗಾವಣೆ ಹಗರಣ ಆರೋಪ ಪ್ರಕರಣ ಸಂಬಂಧ ಸಚಿವ ನಾಗೇಂದ್ರ ಅವರ ರಾಜೀನಾಮೆ ಪಡೆಯಬೇಕು. ಹಣ ವರ್ಗಾವಣೆ ಕುರಿತು ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಸಿಬಿಐಗೆ ಪತ್ರ ಬರೆದಿರುವ ಹಿನ್ನೆಲೆಯಲ್ಲಿ ಕೂಡಲೇ ಪ್ರಕರಣವನ್ನು ಸಿಬಿಐಗೆ ವಹಿಸಬೇಕು" ಎಂದು ಮಾಜಿ ಸಚಿವ ಸಿಟಿ ರವಿ ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.
ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, "ವಾಲ್ಮೀಕಿ ನಿಗಮದ ಹಣ ವರ್ಗಾವಣೆ ವಿಚಾರವಾಗಿ ಯೂನಿಯನ್ ಬ್ಯಾಂಕ್ ಸಿಬಿಐಗೆ ಪತ್ರ ಬರೆದಿದೆ. ಸಿಬಿಐಗೆ ಸುಮೋಟೋ ತನಿಖೆ ಕೈಗೆತ್ತಿಕೊಳ್ಳುವ ಅವಕಾಶ ಇದೆ. ಸರ್ಕಾರಕ್ಕೆ ಸಿಐಡಿ ಮೇಲೆ ನಂಬಿಕೆ ಇರಬಹುದು. ಆದರೆ, ಸಿಬಿಐಗೆ ಕೊಡುವುದು ಸೂಕ್ತ, ಇಲ್ಲದಿದ್ದರೆ ಸಾಕ್ಷ್ಯ ನಾಶಕ್ಕೆ ಸರ್ಕಾರ ಪ್ರಯತ್ನಿಸುತ್ತಿದೆಯೇನೋ ಎಂಬ ಅನುಮಾನ ಮೂಡುತ್ತದೆ. ಸಚಿವ ನಾಗೇಂದ್ರ ಅವರ ರಾಜೀನಾಮೆಯನ್ನು ತೆಗೆದುಕೊಳ್ಳದೇ ಇರುವುದನ್ನು ನೋಡಿದರೆ ದೊಡ್ಡ ದೊಡ್ಡ ವ್ಯಕ್ತಿಗಳು ಇದರ ಹಿಂದೆ ಇರಬಹುದು ಎಂಬುದು ನಮ್ಮ ಅನುಮಾನ. ಹಾಗಾಗಿ ಕೂಡಲೇ ಸಿಎಂ ಸಿದ್ದರಾಮಯ್ಯ ಅವರು ಸಚಿವ ನಾಗೇಂದ್ರ ಅವರ ರಾಜೀನಾಮೆ ಪಡೆಯಬೇಕು. ಪ್ರಕರಣವನ್ನು ಸಿಬಿಐಗೆ ಕೊಡಬೇಕು" ಎಂದು ಆಗ್ರಹಿಸಿದರು.
"ಮಂಗಳೂರಿನಲ್ಲಿ ನಮಾಜ್ ವಿಚಾರಕ್ಕೆ ದಾಖಲಿಸಿದ್ದ ಸುಮೋಟೋ ಕೇಸ್ ರದ್ದು ಮಾಡಲಾಗಿದೆ. ಮತಾಂಧ ಶಕ್ತಿಗಳ ಜೊತೆಗೆ ರಾಜಕೀಯ ರಾಜಿ ಬಹಳ ಅಪಾಯಕಾರಿ. ಬಕ್ರೀದ್ನಂತಹ ಸಾಮೂಹಿಕ ನಮಾಜ್ ಸಂದರ್ಭದಲ್ಲಿ ರಸ್ತೆ ತುಂಬಿ ತುಳುಕಿದಾಗ ಯಾರೂ ಪ್ರಶ್ನೆ ಮಾಡಿಲ್ಲ. ಮಸೀದಿ ಖಾಲಿ ಹೊಡೆಯುತ್ತಿದ್ದಾಗಲೂ ಟ್ರಾಫಿಕ್ ತೊಂದರೆ ಮಾಡಿ ರಸ್ತೆಯಲ್ಲಿ ನಮಾಜ್ ಮಾಡಿದ್ದಕ್ಕೆ ಕ್ರಮ ತೆಗೆದುಕೊಂಡ ಪೊಲೀಸ್ ಅಧಿಕಾರಿಯನ್ನು ಕಡ್ಡಾಯ ರಜೆಯ ಮೇಲೆ ಕಳುಹಿಸುತ್ತಾರೆ. ಅಂದರೆ ಮಂತಾಂಧತೆಯ ಜೊತೆಗೆ ಕಾಂಗ್ರೆಸ್ ಇದೆ ಎಂಬ ಸಂದೇಶ ಕೊಡಲು ಹೊರಟಿದ್ದಾರಾ?" ಎಂದು ಪ್ರಶ್ನಿಸಿದರು.
"ಈ ಮತಾಂಧತೆಯ ಕಾರಣದಿಂದಲೇ ಕೋಮುಗಲಭೆಗಳು ದೇಶದ ಉದ್ದಗಲಕ್ಕೆ ಆಗಿದ್ದು, ಮೋದಿ ಇರುವುದರಿಂದ ಕೋಮುಗಲಭೆ ನಿಯಂತ್ರಣದಲ್ಲಿದೆ. ತುಷ್ಟೀಕರಣ ನೀತಿ ದೇಶ ವಿಭಜನೆಗೆ, ಅನಗತ್ಯ ಗಲಭೆ ಹುಟ್ಟು ಹಾಕಲು ಕಾರಣವಾಗುತ್ತಿದೆ. ಬೀದರ್ನಲ್ಲಿ ರಾಮನ ಭಕ್ತಿಗೀತೆ ಹಾಕಿದ್ದಕ್ಕೆ ಗಲಭೆ ಎಬ್ಬಿಸಿದ್ದಾರೆ. ಕಾಂಗ್ರೆಸ್ನ ಇದೇ ಮಾನಸಿಕತೆಯ ಕಾರಣಕ್ಕೆ ಚನ್ನಗಿರಿ ಪೊಲೀಸ್ ಠಾಣೆಯ ಮೇಲೆ ದಾಳಿ ಮಾಡುತ್ತಾರೆ."