ಕರ್ನಾಟಕ

karnataka

ಕುಕ್ಕೆಯಲ್ಲಿ ಸರ್ಪಸಂಸ್ಕಾರ ಸೇವೆ ಮಾಡಿಸಿದ ಕ್ರಿಕೆಟಿಗ ಮಯಾಂಕ್ ಅಗರ್ವಾಲ್​; ಪುಣ್ಯಕ್ಷೇತ್ರಕ್ಕೆ ಹರಿದು ಬಂದ ಭಕ್ತಸಾಗರ - Mayank Agarwal Visits Kukke

By ETV Bharat Karnataka Team

Published : Jun 12, 2024, 1:56 PM IST

ಖ್ಯಾತ ಕ್ರಿಕೆಟಿಗ ಮಯಾಂಕ್ ಅಗರ್ವಾಲ್ ಕುಟುಂಬ ಸಮೇತ ಕುಕ್ಕೆ ಸುಬ್ರಹ್ಮಣ್ಯಕ್ಕೆ ಆಗಮಿಸಿ ಸರ್ಪಸಂಸ್ಕಾರ ಸೇವೆ ನೆರವೇರಿಸಿದ್ದಾರೆ.

mayank agarwal
ಕುಕ್ಕೆ ಸುಬ್ರಹ್ಮಣ್ಯಕ್ಕೆ ಮಯಾಂಕ್ ಅಗರ್ವಾಲ್ ಭೇಟಿ (ETV Bharat)

ಸುಬ್ರಹ್ಮಣ್ಯ(ದಕ್ಷಿಣ ಕನ್ನಡ):ನಾಗಾರಾಧನೆಯ ಪುಣ್ಯ ತಾಣ ಕುಕ್ಕೆ ಸುಬ್ರಹ್ಮಣ್ಯ ದೇವಳಕ್ಕೆ ಕ್ರಿಕೆಟಿಗ ಮಯಾಂಕ್ ಅಗರ್ವಾಲ್ ಆಗಮಿಸಿ ಸರ್ಪಸಂಸ್ಕಾರ ಸೇವೆ ಅರ್ಪಿಸಿದರು. ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಆಗಮಿಸಿದ ಮಾಯಾಂಕ್ ಮತ್ತು ಆಶಿತಾ ಸೂದ್ ದಂಪತಿಗೆ ಖಾಸಗಿ ಹೋಟೆಲ್‌ನಲ್ಲಿ ಆರತಿ ಬೆಳಗಿ, ತಿಲಕವಿಟ್ಟು ಸ್ವಾಗತಿಸಲಾಯಿತು.

ಕುಕ್ಕೆ ಸುಬ್ರಹ್ಮಣ್ಯ (ETV Bharat)

ಸೋಮವಾರ ಕ್ಷೇತ್ರಕ್ಕೆ ಪತ್ನಿ ಆಶಿತಾ ಜೊತೆ ಆಗಮಿಸಿದ ಅಗರ್ವಾಲ್​ ಖಾಸಗಿ ಹೋಟೆಲ್‌ನಲ್ಲಿ ತಂಗಿದ್ದರು. ಮಂಗಳವಾರ ಬೆಳಗ್ಗೆ ಕುಟುಂಬ ಸಮೇತರಾಗಿ ದೇವಳದಲ್ಲಿ ಸರ್ಪಸಂಸ್ಕಾರ ಸೇವೆ ಆರಂಭಿಸಿದರು. ಅಲ್ಲದೇ, ಸೇವೆಯ ವೈದಿಕ ವಿಧಿ-ವಿಧಾನಗಳನ್ನು ನೆರವೇರಿಸಿದರು.

ಬುಧವಾರ (ಇಂದು) ಗೋಪೂಜೆ, ಬ್ರಹ್ಮಚಾರಿ ಆರಾಧನೆ ಮತ್ತು ನಾಗಪ್ರತಿಷ್ಠಾ ಸೇವೆ ನೆರವೇರಿಸಿ ಸರ್ಪಸಂಸ್ಕಾರ ಸೇವೆಯನ್ನು ಸಮಾಪ್ತಿಗೊಳಿಸುತ್ತಿದ್ದಾರೆ. ಬಳಿಕ ದೇವರ ದರುಶನ ಪಡೆದು, ಪ್ರಸಾದ, ಭೋಜನ ಸ್ವೀಕರಿಸಲಿದ್ದಾರೆ.

ಸುಬ್ರಹ್ಮಣ್ಯಕ್ಕೆ ಹರಿದು ಬಂದ ಭಕ್ತಸಾಗರ:ಆಶ್ಲೇಷ ನಕ್ಷತ್ರದ ಪುಣ್ಯ ದಿನವಾದ ಮಂಗಳವಾರ ಕುಕ್ಕೆ ಸುಬ್ರಹ್ಮಣ್ಯಕ್ಕೆ ಭಕ್ತ ಸಾಗರವೇ ಹರಿದು ಬಂದಿತ್ತು. ಸುಬ್ರಹ್ಮಣ್ಯನಿಗೆ ಪ್ರಿಯವಾದ ಮಂಗಳವಾರ ಆಶ್ಲೇಷ ನಕ್ಷತ್ರ ಬಂದುದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ, ಆಶ್ಲೇಷ ಬಲಿ ಸೇವೆ ನೆರವೇರಿಸಿದರು.

ಮುಂಜಾನೆ 5.30 ಗಂಟೆಯಿಂದಲೇ ಭಕ್ತರು ದೇವಳದ ಸ್ಕಂಧ ವಸತಿಗೃಹದ ಸಮೀಪದಿಂದ ರಥಬೀದಿ ಮೂಲಕ ಸರತಿ ಸಾಲಿನಲ್ಲಿ ಮುನ್ನಡೆದು, ರಶೀದಿ ಸ್ವೀಕರಿಸಿ ಸೇವೆಗಳನ್ನು ಅರ್ಪಿಸಿದರು. ಸುಮಾರು 2,500 ಭಕ್ತರು ಆಶ್ಲೇಷ ಬಲಿ ಸೇವೆ ಕೈಗೊಂಡರು. ಅಲ್ಲದೇ, 425 ನಾಗಪ್ರತಿಷ್ಠೆ ಸೇವೆ ಹಾಗೂ ಪ್ರತಿದಿನದಂತೆ 191 ಸರ್ಪ ಸಂಸ್ಕಾರ ಸೇವೆ ನಡೆದವು.

ಜೊತೆಗೆ, ಪಂಚಾಮೃತ ಮಹಾಭಿಷೇಕ, ತುಲಾಭಾರ, ಮಹಾಪೂಜೆ, ಕಾರ್ತಿಕ ಪೂಜೆ, ಶೇಷ ಸೇವೆಗಳನ್ನೂ ಕೂಡ ಅಧಿಕ ಸಂಖ್ಯೆಯಲ್ಲಿ ಭಕ್ತರು ನೆರವೇರಿಸಿದರು. ದೇವಾಲಯದ ಹೊರಾಂಗಣ, ಒಳಾಂಗಣ, ಆದಿಸುಬ್ರಹ್ಮಣ್ಯ ಮೊದಲಾದೆಡೆ ಭಕ್ತ ಸಾಗರವೇ ಕಂಡು ಬಂತು. ಸಹಸ್ರಾರು ಭಕ್ತರು ಸರದಿಯ ಸಾಲಿನಲ್ಲಿ ನಿಂತು ದೇವರ ದರುಶನ ಪಡೆದರು. ಭಕ್ತರು ಅಧಿಕ ಸಂಖ್ಯೆಯಲ್ಲಿ ಆಗಮಿಸಿದ್ದ ಹಿನ್ನೆಲೆಯಲ್ಲಿ ಸವಾರಿ ಮಂಟಪ, ಅಕ್ಷರ ವಸತಿ ಗೃಹ, ಆಂಜನೇಯ ಗುಡಿ ಸಮೀಪ ಮೊದಲಾದ ಕಡೆಯ ಪಾರ್ಕಿಂಗ್ ಸ್ಥಳಗಳು ವಾಹನಗಳಿಂದ ತುಂಬಿದ್ದವು.

ನಿತ್ಯೋತ್ಸವಗಳಿಗೆ ತೆರೆ:ಕುಕ್ಕೆ ಸುಬ್ರಹ್ಮಣ್ಯದಲ್ಲಿ ದೇವರ ಹೊರಾಂಗಣ ಉತ್ಸವಾದಿಗಳು ಬುಧವಾರ ತೆರೆ ಕಾಣಲಿದೆ. ಶುದ್ಧ ಷಷ್ಠಿಯ ದಿನವಾದ ಇಂದು ದೇವರು ಹೊರಾಂಗಣದಲ್ಲಿ ಪಲ್ಲಕ್ಕಿ ಮತ್ತು ಬಂಡಿ ಉತ್ಸವ ಸ್ವೀಕರಿಸಿದ ಬಳಿಕ ಒಳಾಂಗಣ ಪ್ರವೇಶಿಸುವುದರೊಂದಿಗೆ ಕ್ಷೇತ್ರದಲ್ಲಿ ಉತ್ಸವಗಳು ಅಂತ್ಯಗೊಳ್ಳಲಿವೆ.

ಇದನ್ನೂ ಓದಿ:ಗೋಕರ್ಣದಲ್ಲಿ ಪೂಜೆ ಸಲ್ಲಿಸಿದ ನಟ, ನಿರ್ದೇಶಕ ರಿಷಬ್ ಶೆಟ್ಟಿ - Rishab Shetty Visits Gokarna

ABOUT THE AUTHOR

...view details