ದಾವಣಗೆರೆ:ಅಡವಿಟ್ಟ ಚಿನ್ನಾಭರಣಗಳನ್ನು ಬಿಡಿಸಿಕೊಡಿ ಎಂದು ಕೇಳಿದ ಪತ್ನಿಯನ್ನು ಸೀಮೆ ಎಣ್ಣೆ ಸುರಿದು ಬೆಂಕಿ ಹಾಕಿ ಕೊಲೆ ಮಾಡಿದ ಪ್ರಕರಣದಲ್ಲಿ ಪತಿ, ಅತ್ತೆ ಹಾಗೂ ಮಾವನಿಗೆ ನ್ಯಾಯಾಲಯವು ಜೀವಾವಧಿ ಶಿಕ್ಷೆ ಹಾಗೂ ತಲಾ 38 ಸಾವಿರ ರೂ. ದಂಡ ವಿಧಿಸಿದೆ.
ಸುಮಾ ಡಿ. ಕೊಲೆಗೀಡಾದ ಪತ್ನಿ, ಗಂಡ ಗಿರಿಧರ್, ಅತ್ತೆ ಲೀಲಾಬಾಯಿ ಹಾಗೂ ಮಾವ ಹಾಲಪ್ಪ ನಾಯ್ಕ ಶಿಕ್ಷೆಗೆ ಒಳಗಾದ ಅಪರಾಧಿಗಳು. 2018ರ ಜನವರಿ 17ರಂದು ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕು ಚಿಕ್ಕಬಸೂರು ತಾಂಡಾದಲ್ಲಿ ಘಟನೆ ನಡೆದಿತ್ತು. ಸುಮಾಳನ್ನು ಐದು ವರ್ಷಗಳ ಹಿಂದೆ ಚಿಕ್ಕಬಸೂರು ಗ್ರಾಮದ ನಿವಾಸಿ ಗಿರಿಧರ್ ಜೊತೆ ಮದುವೆ ಮಾಡಿಕೊಡಲಾಗಿತ್ತು. ಪೋಷಕರು 06 ತೊಲ ಬಂಗಾರ, ವರದಕ್ಷಿಣೆಯಾಗಿ 40 ಸಾವಿರ ಹಣ ಹಾಗೂ ಒಂದು ಬೈಕ್ ಕೊಟ್ಟಿದ್ದರು ಎಂದು ಪೊಲೀಸ್ ದೂರಿನಲ್ಲಿ ತಿಳಿಸಲಾಗಿದೆ.
ಘಟನೆಯ ಹಿನ್ನೆಲೆ:ಮದುವೆ ಬಳಿಕಪತ್ನಿ ಸುಮಾಳಿಗೆ ಸೇರಿದ 06 ತೊಲ ಬಂಗಾರವನ್ನು ಗಂಡ ಗಿರಿಧರ್ ಬ್ಯಾಂಕಿನಲ್ಲಿ ಅಡವಿಟ್ಟಿದ್ದ. ಆ ಚಿನ್ನಾಭರಣವನ್ನು ಬಿಡಿಸಿಕೊಡುವಂತೆ ಪತಿ ಬಳಿ ಸುಮಾ ಕೇಳಿದ್ದಾಳೆ. ಈ ಸಂಬಂಧ ಜಗಳ ನಡೆದು ಗಿರಿಧರ್, ಲೀಲಾಬಾಯಿ ಹಾಗೂ ಹಾಲಪ್ಪ ಸೇರಿಕೊಂಡು ಆಕೆಗೆ ಹೊಡೆದಿದ್ದಾರೆ. ಈ ವೇಳೆ ಗಿರಿಧರ್ ಮನೆಯಲ್ಲಿದ್ದ ಸೀಮೆಎಣ್ಣೆ ತಂದು ಪತ್ನಿಯ ಮೈಮೇಲೆ ಸುರಿದು ಬೆಂಕಿ ಹಚ್ಚಿದ್ದ. ಸುಮಾ ತನ್ನನ್ನು ರಕ್ಷಿಸಿಕೊಳ್ಳಲು ನೀರಿನ ಡ್ರಮ್‌ನಲ್ಲಿ ಮುಳುಗಿ ಬೆಂಕಿ ಆರಿಸಿಕೊಂಡಿದ್ದರು. ಆದರೆ, ದೇಹವು ಸುಟ್ಟು ಹೋಗಿತ್ತು ಎಂದು ಪೊಲೀಸ್ ಪ್ರಕಟಣೆಯಲ್ಲಿ ತಿಳಿಸಲಾಗಿದೆ.