ಕರ್ನಾಟಕ

karnataka

ETV Bharat / state

13 ಕೆರೆಗಳ ಒತ್ತುವರಿ ತೆರವು ಕಾರ್ಯಾಚರಣೆ ನಡೆಸಿದ ಪಾಲಿಕೆ ; 242.5 ಕೋಟಿ ಮೌಲ್ಯದ ಆಸ್ತಿ ವಶ - LAKES ENCROACHMENT CLEARANCE

ಬಿಬಿಎಂಪಿಯು 4 ವಲಯಗಳ 13 ಕೆರೆಗಳಲ್ಲಿ ಒತ್ತುವರಿ ತೆರವು ಕಾರ್ಯಾಚರಣೆ ನಡೆಸಿದೆ.

Lake encroachment clearance operations
ಕೆರೆಗಳ ಒತ್ತುವರಿ ತೆರವು ಕಾರ್ಯಾಚರಣೆ (ETV Bharat)

By ETV Bharat Karnataka Team

Published : Nov 30, 2024, 10:30 PM IST

ಬೆಂಗಳೂರು: ಪಾಲಿಕೆಯ 4 ವಲಯಗಳ 13 ಕೆರೆಗಳಲ್ಲಿ ಒತ್ತುವರಿ ತೆರವು ಕಾರ್ಯಾಚರಣೆಯನ್ನು ನಡೆಸಲಾಗಿದ್ದು, ಒಟ್ಟಾರೆಯಾಗಿ 242.5 ಕೋಟಿ ರೂಪಾಯಿ ಮೌಲ್ಯದ 7 ಎಕರೆ 3 ಗುಂಟೆ ಒತ್ತುವರಿ ಪ್ರದೇಶವನ್ನು ತೆರವುಗೊಳಿಸಿ, ತಂತಿ ಬೇಲಿಯನ್ನು ಅಳವಡಿಸಲಾಗಿದೆ.

ಈ ಕುರಿತು ಅರಣ್ಯ, ಪರಿಸರ ಮತ್ತು ಹವಾಮಾನ ವೈಪರೀತ್ಯ ನಿರ್ವಹಣೆಯ ವಿಶೇಷ ಆಯುಕ್ತೆ ಪ್ರೀತಿ ಗೆಹ್ಲೋಟ್ ಮಾತನಾಡಿ, ಬಿಬಿಎಂಪಿ ವ್ಯಾಪ್ತಿಯಲ್ಲಿ ಬರುವ ಕೆರೆಗಳಲ್ಲಿ ಒತ್ತುವರಿಯಾಗಿರುವುದನ್ನು ಗುರುತಿಸಿ ತೆರವು ಕಾರ್ಯಾಚರಣೆ ನಡೆಸುವ ಕಾರ್ಯವನ್ನು ಸಕ್ರಿಯವಾಗಿ ನಡೆಸಲಾಗುತ್ತಿದೆ ಎಂದು ತಿಳಿಸಿದರು.

ಕೆರೆಗಳ ಒತ್ತುವರಿ ತೆರವು ಕಾರ್ಯಾಚರಣೆ (ETV Bharat)

ಉಚ್ಚನ್ಯಾಯಾಲಯದ ಆದೇಶದಂತೆ ಪಾಲಿಕೆ ವಶದಲ್ಲಿರುವ ಕೆರೆಗಳ ಒತ್ತುವರಿ ತೆರವಿಗೆ ಒತ್ತುವರಿ ಸರ್ವೆ ಹಾಗೂ ತೆರವುಗೊಳಿಸುವ ಕಾರ್ಯ ಜಾರಿಯಲ್ಲಿದೆ. ಇದುವರೆವಿಗೂ 202 ಕೆರೆಗಳ ಪೈಕಿ 162 ಕೆರೆಗಳ ಸರ್ವೆ ಕಾರ್ಯವು ಪೂರ್ಣಗೊಂಡಿದ್ದು, ಅದರಲ್ಲಿ 49 ಕೆರೆಗಳು ಒತ್ತುವರಿ ಮುಕ್ತವಾಗಿವೆ. ಇನ್ನು 23 ಕೆರೆಗಳಲ್ಲಿ ಸರ್ಕಾರಿ ಒತ್ತುವರಿ ಒಳಗೊಂಡಿದ್ದು, ವಲಯಗಳೊಂದಿಗೆ ಸಮನ್ವಯ ಸಾಧಿಸಿ ಒತ್ತುವರಿಗಳನ್ನು ತೆರವುಗೊಳಿಸಲು ಕ್ರಮವಹಿಸಲಾಗುತ್ತಿದೆ ಎಂದು ಹೇಳಿದರು.

ಕೆರೆಗಳ ಒತ್ತುವರಿ ತೆರವು ಕಾರ್ಯಾಚರಣೆ (ETV Bharat)
ಕೆರೆ ಒತ್ತುವರಿ ತೆರವಿನ ವಿವರ:1. ಮಹದೇವಪುರ ವಲಯ- (2 ಕೆರೆ): ದೊಡ್ಡನೆಕ್ಕುಂದಿ ಕೆರೆಯ 2 ಎಕರೆ 6 ಗುಂಟೆ ಖಾಲಿ ಪ್ರದೇಶವನ್ನು ಒತ್ತುವರಿ ಮುಕ್ತಗೊಳಿಸಿ, ತಂತಿ ಬೇಲಿಯನ್ನು ಅಳವಡಿಸಲು ಕ್ರಮಕೈಗೊಳ್ಳಲಾಗಿದೆ. ಜಾಗದ ಪ್ರಸ್ತುತ ಮಾರುಕಟ್ಟೆ ದರ 75 ಕೋಟಿಯಾಗಿದೆ. ಇನ್ನು ವಿಭೂತಿಪುರ ಕೆರೆಯಲ್ಲಿ ಒತ್ತುವರಿಯಾಗಿದ್ದ 8 ಗುಂಟೆ ಪ್ರದೇಶವನ್ನು ತೆರವುಗೊಳಿಸಲಾಗಿದ್ದು, ತಂತಿ - ಬೇಲಿಯನ್ನು ಅಳವಡಿಸಲು ಕ್ರಮಕೈಗೊಳ್ಳಲಾಗಿದೆ. ಈ ಜಾಗದ ಪ್ರಸ್ತುತ ಮಾರುಕಟ್ಟೆ ದರ 8 ಕೋಟಿ. 2. ಪೂರ್ವ ವಲಯ- (1 ಕೆರೆ):ಕಗ್ಗದಾಸಪುರ ಕೆರೆಯ 2.5 ಗುಂಟೆ ಜಮೀನಿನಲ್ಲಿದ್ದ ಶೆಡ್ ಅನ್ನು ತೆರವುಗೊಳಿಸಿ ಹಾಗೂ 22.5 ಗುಂಟೆ ಖಾಲಿ ಜಾಗಕ್ಕೆ ತಂತಿ ಬೇಲಿಯನ್ನು ಅಳವಡಿಸಲಾಗಿದೆ. ಈ ಜಾಗದ ಪ್ರಸ್ತುತ ಮಾರುಕಟ್ಟೆ ದರವು 22.50 ಕೋಟಿ. 3. ಬೊಮ್ಮನಹಳ್ಳಿ ವಲಯ- (3 ಕೆರೆ): ಕೋಣನಕುಂಟೆ ಕೆರೆಯ ಖಾಲಿ ಜಾಗದ 30 ಗುಂಟೆ ಜಾಗವನ್ನು ವಶಕ್ಕೆ ಪಡೆಯಲಾಗಿದ್ದು, ತಂತಿ ಬೇಲಿಯನ್ನು ಅಳವಡಿಸಲಾಗಿದೆ. ಜಾಗದ ಪ್ರಸ್ತುತ ಮಾರುಕಟ್ಟೆ ದರ 30 ಕೋಟಿ ರೂಪಾಯಿಯಾಗಿದೆ. ಇನ್ನು ಅರೆಕೆರೆ ಕೆರೆಯಲ್ಲಿ ಒತ್ತುವರಿಯಾಗಿದ್ದ 12 ಗುಂಟೆ ಜಾಗವನ್ನು ವಶಕ್ಕೆ ಪಡೆಯಲಾಗಿದ್ದು, ತಂತಿ ಬೇಲಿಯನ್ನು ಅಳವಡಿಸಲಾಗಿದೆ.

ಈ ಜಾಗದ ಪ್ರಸ್ತುತ ಮಾರುಕಟ್ಟೆ ದರ 12 ಕೋಟಿ ರೂಪಾಯಿಯಾಗಿದೆ. ಉಳಿದಂತೆ ಸುಬ್ಬರಾಯನ ಕೆರೆಯ 24 ಗುಂಟೆ ಮತ್ತು 4 ಗುಂಟೆ ಶೀಟ್ ಜಾಗ ಸೇರಿದಂತೆ ಒಟ್ಟು 28 ಗುಂಟೆ ಜಾಗವನ್ನು ವಶಕ್ಕೆ ಪಡೆಯಲಾಗಿದ್ದು, ತಂತಿ ಬೇಲಿಯನ್ನು ಅಳವಡಿಸಲಾಗಿದೆ. ಈ ಜಾಗದ ಪ್ರಸ್ತುತ ಮಾರುಕಟ್ಟೆ ದರ 15 ಕೋಟಿ ರೂ.

4. ಯಲಹಂಕ ವಲಯ- (7 ಕೆರೆ) :ಯಲಹಂಕ ವಲಯದಲ್ಲಿ ಆವಲಹಳ್ಳಿ ಕೆರೆಯಲ್ಲಿ 2 ಗುಂಟೆ, ಯಲಹಂಕ ಕೆರೆಯಲ್ಲಿ 24 ಗುಂಟೆ, ಮೇಡಿ ಅಗ್ರಹಾರ ಕೆರೆಯಲ್ಲಿ 8 ಗುಂಟೆ, ಅಗ್ರಹಾರ ಕೆರೆಯಲ್ಲಿ 4 ಗುಂಟೆ, ಕಟ್ಟಿಗೇನಹಳ್ಳಿ ಕೆರೆಯಲ್ಲಿ 1.50 ಗುಂಟೆ, ನರಸೀಪುರ ಕೆರೆಯಲ್ಲಿ 25 ಗುಂಟೆ, ಸಿಂಗಾಪುರ ಕೆರೆಯಲ್ಲಿ 29.50 ಗುಂಟೆ ಸೇರಿ 7 ಕೆರೆಗಳಲ್ಲಿ 2 ಎಕರೆ 14 ಗುಂಟೆ ಒತ್ತುವರಿ ಪ್ರದೇಶವನ್ನು ತೆರವುಗೊಳಿಸಲಾಗಿದೆ. ಈ ಜಾಗದ ಪ್ರಸ್ತುತ ಮಾರುಕಟ್ಟೆ ದರವು 80 ಕೋಟಿ ರೂ.

ಇದನ್ನೂ ಓದಿ :ನಗರದ ಪ್ರಮುಖ ನಾಲ್ಕು ಕೆರೆ ಒತ್ತುವರಿ: ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಎನ್.ಆರ್.ರಮೇಶ್ ಒತ್ತಾಯ

ABOUT THE AUTHOR

...view details