ಕರ್ನಾಟಕ

karnataka

ETV Bharat / state

ಸಂಪೂರ್ಣ ಹಣ ಪಡೆದು ಸೆಕೆಂಡ್​ ಹ್ಯಾಂಡ್​ ಲ್ಯಾಪ್​ಟಾಪ್ ವಿತರಣೆ: ಇ-ಕಾಮರ್ಸ್​ ಸಂಸ್ಥೆಗೆ ಗ್ರಾಹಕರ ವೇದಿಕೆ ದಂಡ - Consumer Court Fine

ಉಪಯೋಗಿಸಲ್ಪಟ್ಟ ಲ್ಯಾಪ್​ಟಾಪ್ ಮಾರಾಟ ಮಾಡಿದ್ದ ಇ-ಕಾಮರ್ಸ್​ ಸಂಸ್ಥೆಗೆ ಗ್ರಾಹಕರ ವೇದಿಕೆ ದಂಡ ವಿಧಿಸಿದೆ.

CONSUMER COURT FINE
ಸಂಗ್ರಹ ಚಿತ್ರ (ETV Bharat)

By ETV Bharat Karnataka Team

Published : Aug 16, 2024, 9:41 PM IST

ಬೆಂಗಳೂರು: ಸೆಕೆಂಡ್​ ಹ್ಯಾಂಡ್​ ಲ್ಯಾಪ್‌ಟಾಪ್ ಮಾರಾಟ ಮಾಡಿದ ಆರೋಪದಲ್ಲಿ ಫ್ಲಿಪ್‌ಕಾರ್ಟ್ ಸಂಸ್ಥೆ ಹಾಗೂ ಮಾರಾಟಗಾರ ಕಂಪನಿಗೆ ಬೆಂಗಳೂರಿನ ಗ್ರಾಹಕ ವ್ಯಾಜ್ಯಗಳ ಪರಿಹಾರ ವೇದಿಕೆ ಇಂದು 10 ಸಾವಿರ ರೂ. ದಂಡ ವಿಧಿಸಿ ಆದೇಶಿಸಿದೆ.

ಬಳಸಿದ ಲ್ಯಾಪ್‌ಟಾಪ್ ಕಳುಹಿಸಿದ್ದ ಬೆಂಗಳೂರು ಮೂಲದ ಫ್ಲಿಪ್‌ಕಾರ್ಟ್ ಹಾಗೂ ಹರಿಯಾಣದ ಮಾರಾಟಗಾರ ಕಂಪನಿಯ ವಿರುದ್ಧ ರಾಜಸ್ಥಾನದ ವಿದ್ಯಾರ್ಥಿ ಪಂಕಜ್ ವರ್ಮ ಎಂಬವರು ಸಲ್ಲಿಸಿದ್ದ ದೂರಿನ ವಿಚಾರಣೆ ನಡೆಸಿದ ಬೆಂಗಳೂರು ಗ್ರಾಮಾಂತರ ಹಾಗೂ ನಗರದ 1ನೇ ಹೆಚ್ಚುವರಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆಯ ಅಧ್ಯಕ್ಷ ಬಿ.ನಾರಾಯಣಪ್ಪ ಅವರಿದ್ದ ತ್ರಿಸದಸ್ಯ ಪೀಠ, ಈ ಆದೇಶ ನೀಡಿದೆ. ಲ್ಯಾಪ್‌ಟಾಪ್​​ನ ಸಂಪೂರ್ಣ ಮೊತ್ತ 66,965 ರೂ.ಗಳನ್ನು ಶೇ.12 ಬಡ್ಡಿಯೊಂದಿಗೆ ಮರುಪಾವತಿಸುವಂತೆ ಆದೇಶಿಸಿದೆ.

ದೂರುದಾರರಿಂದ ಸಂಪೂರ್ಣ ಮೊತ್ತ ಪಡೆದ ಸೆಕೆಂಡ್​ ಹ್ಯಾಂಡ್​ ಲ್ಯಾಪ್‌ಟಾಪ್‌ ಪೂರೈಸಿರುವುದು ಸ್ಪಷ್ಟವಾಗಿ ಸೇವಾ ನ್ಯೂನತೆಯಾಗಿದೆ. ಇದರಿಂದ, ದೂರುದಾರರು ಮಾನಸಿಕ ಹಿಂಸೆ ಅನುಭವಿಸುವಿದ್ದು, ಅದಕ್ಕೆ ಪರಿಹಾರವಾಗಿ 5 ಸಾವಿರ ರೂ. ಹಾಗೂ ವ್ಯಾಜ್ಯದ ವೆಚ್ಚ 5 ಸಾವಿರ ರೂ.ಗಳನ್ನು ದೂರುದಾರರಿಗೆ ಪಾವತಿಸಬೇಕೆಂದು ಸೂಚಿಸಿದೆ.

ನಾವು ಕೇವಲ ಮಧ್ಯವರ್ತಿ ಸಂಸ್ಥೆ. ಇದರಲ್ಲಿ ನಮ್ಮ ಪಾತ್ರವಿಲ್ಲ ಎಂಬ ಫ್ಲಿಪ್‌ಕಾರ್ಟ್​ ವಾದ ತಳ್ಳಿಹಾಕಿದ್ದ ವೇದಿಕೆ, ದೂರುದಾರರು ಒದಗಿಸಿರುವ ವಾರಂಟಿ ಪ್ರಮಾಣಪತ್ರವು ಉಪಯೋಗಿಸಿದ ಲ್ಯಾಪ್‌ಟಾಪ್ ಮಾರಾಟ ಮಾಡಿರುವುದನ್ನು ಸ್ಪಷ್ಟಪಡಿಸುತ್ತದೆ. ಈ ವಿಚಾರವನ್ನು ಸಂಸ್ಥೆಯ ಗಮನಕ್ಕೆ ತಂದು, ಹಿಂಪಡೆಯುವಂತೆ ದೂರುದಾರರು ಹಲವು ಬಾರಿ ಮನವಿ ಮಾಡಿದ್ದರೂ ಮನವಿಯನ್ನು ತಿರಸ್ಕರಿಸಲಾಗಿದೆ. ಈ ಮೂಲಕ ದೂರುದಾರರಿಗೆ ವಂಚನೆ ಎಸಗಿರುವುದು ಸ್ಪಷ್ಟ. ಹೊಸ ಲ್ಯಾಪ್‌ಟಾಪ್‌ಗೆ ತಗಲುವ ಸಂಪೂರ್ಣ ಮೊತ್ತವನ್ನು ಪಡೆದು ಬಳಸಲ್ಪಟ್ಟ ಲ್ಯಾಪ್‌ಟಾಪ್ ಪೂರೈಸಲಾಗಿದೆ. ಗ್ರಾಹಕರ ಸಮಸ್ಯೆ ಬಗೆಹರಿಸಲು ಕಂಪನಿ ವಿಫಲವಾಗಿದೆ. ಇದನ್ನು ಸೇವಾನ್ಯೂನತೆ ಎಂದೇ ಪರಿಗಣಿಸಬೇಕಾಗುತ್ತದೆ ಎಂದು ಆದೇಶದಲ್ಲಿ ಅಭಿಪ್ರಾಯಪಟ್ಟಿದೆ.

ಪ್ರಕರಣದ ಹಿನ್ನೆಲೆ: ದೂರುದಾರ ವರ್ಮಾ 2021ರ ಸೆ.23ರಂದು ಫ್ಲಿಪ್‌ಕಾರ್ಟ್ ಮೂಲಕ ಹೆಚ್​ಪಿ ಪೆವಿಲಿಯನ್ ಲ್ಯಾಪ್‌ಟಾಪ್ ಆರ್ಡರ್ ಮಾಡಿ ಸುಮಾರು 66,965 ರೂ.ಗಳನ್ನು ಪಾವತಿಸಿದ್ದರು. ಹರಿಯಾಣದ ಮಾರಾಟಗಾರರೊಬ್ಬರು ಕಳುಹಿಸಿದ್ದ ಲ್ಯಾಪ್‌ಟಾಪ್ ಸೆ.26ರಂದು ದೂರುದಾರರ ಕೈಸೇರಿತ್ತು. ಡೆಲಿವರಿ ಸಮಯದಲ್ಲಿ ಬಾಕ್ಸ್ ತೆಗೆದು ನೋಡಿದಾಗ ಉಪಯೋಗಿಸಿದ ಸ್ಥಿತಿಯಲ್ಲಿರುವುದು ಕಂಡುಬಂದಿತ್ತು. ವಾರಂಟಿ ಪ್ರಮಾಣಪತ್ರ ಪರಿಶೀಲಿಸಿದಾಗ ಅದಾಗಲೇ 36 ದಿನಗಳ‌ ಕಾಲ ಉಪಯೋಗಿಸಲ್ಪಟ್ಟಿರುವುದು ತಿಳಿದು ಬಂದಿತ್ತು. ಲ್ಯಾಪ್‌ಟಾಪ್ ಹಿಂಪಡೆಯುವಂತೆ ದೂರುದಾರರು ಮಾಡಿದ ಮನವಿಯನ್ನು ಫ್ಲಿಪ್‌ಕಾರ್ಟ್ ಸಂಸ್ಥೆ ತಿರಸ್ಕರಿಸಿತ್ತು. ಇದರಿಂದ, ಪಂಕಜ್ ವರ್ಮ ಗ್ರಾಹಕ ಆಯೋಗದ ಮೆಟ್ಟಿಲೇರಿದ್ದರು.

ವಿಚಾರಣೆ ವೇಳೆ ಫ್ಲಿಪ್​ಕಾರ್ಟ್ ಪರ ವಾದ ಮಂಡಿಸಿದ್ದ ವಕೀಲರು, ಪೂರೈಕೆದಾರರು ಹಾಗೂ ಗ್ರಾಹಕರ ನಡುವಿನ ಮಧ್ಯವರ್ತಿಯಷ್ಟೇ ಆಗಿದ್ದು, ಅದರಲ್ಲಿ ನಮ್ಮ ಹಸ್ತಕ್ಷೇಪವಿರುವುದಿಲ್ಲ. ಪೂರೈಕೆದಾರರು ಗ್ರಾಹಕರಿಗೆ ಒದಗಿಸುವ ಸೇವೆಗಳಿಗೆ ಸಂಬಂಧಿಸಿದ ಕೊರತೆಗಳಿಗೆ ನಾವು ಹೊಣೆಗಾರರಾಗುವುದಿಲ್ಲ. ದೂರುದಾರರು ಖರೀದಿಸಿದ ವಸ್ತುವನ್ನು ಪೂರೈಕೆದಾರರು ಒದಗಿಸಿದ್ದಾರೆಯೇ ಹೊರತು, ಫ್ಲಿಪ್‌ಕಾರ್ಟ್ ಮಾರಾಟ ಮಾಡಿಲ್ಲ. ದೂರುದಾರರು ಆರೋಪಿಸಿರುವಂತೆ ಫ್ಲಿಪ್‌ಕಾರ್ಟ್ ಸಂಸ್ಥೆಯ ವತಿಯಿಂದ ಯಾವುದೇ ಸೇವಾನ್ಯೂನತೆ ಘಟಿಸಿಲ್ಲ. ಆದ್ದರಿಂದ, ದೂರು ವಜಾಗೊಳಿಸಬೇಕು ಎಂದು ವಾದಿಸಿತ್ತು.

ಇದನ್ನೂ ಓದಿ:ಬ್ಯಾಗ್ ಗೆ ಹೆಚ್ಚುವರಿ ಹಣ ಪಡೆದ ಶಾಪಿಂಗ್ ಮಳಿಗೆಗೆ 7 ಸಾವಿರ ರೂ. ದಂಡ ವಿಧಿಸಿದ ಕೋರ್ಟ್ - Consumer Court

ABOUT THE AUTHOR

...view details