ಚಾಮರಾಜನಗರ: ಚಾಮರಾಜನಗರ ಜಿಲ್ಲೆಯ 4 ವಿಧಾನಸಭಾ ಕ್ಷೇತ್ರಗಳಲ್ಲಿ ಮಕಾಡೆ ಮಲಗಿದ್ದ ಬಿಜೆಪಿ ಲೋಕಸಭಾ ಚುನಾವಣೆಯಲ್ಲಿ ಚೇತರಿಸಿಕೊಳ್ಳಲಿದೆ ಎಂಬ ಮಾತು ಹುಸಿಯಾಗಿದ್ದು, ಮತ್ತೆ ಮಕಾಡೆ ಮಲಗಿದೆ.
ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ಹಾಗೂ ಗುಂಡ್ಲುಪೇಟೆಯಲ್ಲಿ ಬಿಜೆಪಿ ಶಾಸಕರು ಕಳೆದ ಚುನಾವಣೆಯಲ್ಲಿ ಸೋತಿದ್ದರು. ಲೋಕ ಚುನಾವಣೆಯಲ್ಲಿ ಚೇತರಿಸಿಕೊಳ್ಳಬಹುದು ಎಂಬ ಮಾತು ಕೇಳಿ ಬಂದಿತ್ತು. ಆದರೆ ಕೊಳ್ಳೇಗಾಲದಲ್ಲಿ 33 ಸಾವಿರ ಮತಗಳು ಕಾಂಗ್ರೆಸ್ಗೆ ಲೀಡ್ ಕೊಟ್ಟಿದ್ದರೆ, ಬಿಜೆಪಿ ಜಿಲ್ಲಾಧ್ಯಕ್ಷ ಇರುವ ಗುಂಡ್ಲುಪೇಟೆ ಕ್ಷೇತ್ರದಲ್ಲಿ 17 ಸಾವಿರ ಮತಗಳು ಕಾಂಗ್ರೆಸ್ ಬುಟ್ಟಿ ಸೇರಿದೆ.
ವಿಧಾನಸಭಾ ಚುನಾವಣೆಯ ಸೋಲು ಲೋಕ ಅಖಾಡದಲ್ಲಿ ಮುಂದುವರೆದಿದ್ದು, ಕೈ ಗ್ಯಾರಂಟಿ, ಶಾಸಕರ ನಿರಂತರ ಓಡಾಟ, ಬಿಜೆಪಿಯ ಸಂಘಟನೆ ಕೊರತೆ ಫಲಿತಾಂಶದ ಮೂಲಕ ಜಾಹೀರಾಗಿದೆ.
ಸಿಎಂ ಟಾಸ್ಕ್ ಕಂಪ್ಲೀಟ್:ಲೋಕಸಭಾ ಚುನಾವಣೆ ಸಮಯದಲ್ಲಿ ಶಾಸಕರಿಗೆ ಸಂಸದರ ಸ್ಥಾನ ಗೆಲ್ಲಿಸಿಕೊಡುವ ಜವಾಬ್ದಾರಿ ಹೊರಿಸಲಾಗಿತ್ತು. ಜೊತೆಗೆ, ಕನಿಷ್ಠ 20 ಸಾವಿರ ಲೀಡ್ ತಂದುಕೊಡಬೇಕೆಂದು ಹೊಣೆ ಹೊರಿಸಲಾಗಿತ್ತು.
ಸಿಎಂ ಸ್ವಕ್ಷೇತ್ರ ವರುಣ ಕೂಡ ಚಾಮರಾಜನಗರ ಲೋಕಸಭಾ ಕ್ಷೇತ್ರಕ್ಕೆ ಒಳಪಡುವುದರಿಂದ ಸಿದ್ದರಾಮಯ್ಯಗೆ ಕ್ಷೇತ್ರ ಪ್ರತಿಷ್ಠೆಯೂ ಆಗಿತ್ತು. ಈಗ ಸಿದ್ದರಾಮಯ್ಯ ಟಾಸ್ಕ್ನ್ನು ಶಾಸಕರು ಕಂಪ್ಲೀಟ್ ಮಾಡಿದ್ದು, ಎಚ್.ಸಿ.ಮಹಾದೇವಪ್ಪ ಅವರ ಟಿ.ನರಸೀಪುರ ಬಿಟ್ಟರೆ ಉಳಿದ 7 ಕ್ಷೇತ್ರಗಳಲ್ಲೂ ಕಾಂಗ್ರೆಸ್ಗೆ ಭರ್ಜರಿ ಮತಗಳು ಬಂದಿವೆ. ಶಾಸಕರು ತಮಗೆ ಕೊಟ್ಟಿದ್ದ ಟಾಸ್ಕ್ನ್ನು ಕಂಪ್ಲೀಟ್ ಮಾಡಿದ್ದಾರೆ. ಜೆಡಿಎಸ್ ಶಾಸಕ ಇರುವ ಹನೂರಲ್ಲಿ ಅತೀ ಹೆಚ್ಚು ಲೀಡ್ ಬಂದಿದೆ.
ಮಗನ ಕ್ಷೇತ್ರಕ್ಕೆ ಅಪ್ಪನ ಉಸ್ತುವಾರಿ:ಸದ್ಯ ಮೈಸೂರು ಜಿಲ್ಲೆ ಉಸ್ತುವಾರಿ ಆಗಿರುವ ಸಚಿವ ಎಚ್.ಸಿ.ಮಹಾದೇವಪ್ಪ ಈಗ ಚಾಮರಾಜನಗರ ಜಿಲ್ಲಾ ಉಸ್ತುವಾರಿ ವಹಿಸಿಕೊಳ್ಳುತ್ತಾರೆ ಎಂಬ ಮಾತು ದಟ್ಟವಾಗಿದೆ. ಪುತ್ರ ಸುನಿಲ್ ಬೋಸ್ ಮೊದಲ ಬಾರಿ ಸಂಸದನಾಗಿರುವ ಹಿನ್ನೆಲೆ ಮಾರ್ಗದರ್ಶನ ಹಾಗೂ ಕ್ಷೇತ್ರದಲ್ಲಿ ಓಡಾಟ ನಡೆಸಲು ಮೈಸೂರು ಬಿಟ್ಟು ಚಾಮರಾಜನಗರದ ಉಸ್ತುವಾರಿ ವಹಿಸಿಕೊಳ್ಳಲಿದ್ದಾರೆ ಎಂಬ ಮಾತು ಕೇಳಿ ಬಂದಿದೆ.
ಚಾಮರಾಜನಗರ ಲೋಕಸಭಾ ಕ್ಷೇತ್ರದಲ್ಲಿ ಈ ಹಿಂದೆ ಮಹಾದೇವಪ್ಪ ಸ್ಪರ್ಧಿಸಿ ಶ್ರೀನಿವಾಸ ಪ್ರಸಾದ್ ವಿರುದ್ಧ ಪರಾಭವಗೊಂಡಿದ್ದರು. ಈಗ ಅದೇ ಕ್ಷೇತ್ರದಲ್ಲಿ ಮಗ ಜಯಿಸಿದ್ದು, ತಮ್ಮ ಮೊದಲ ಚುನಾವಣೆಯಲ್ಲೇ ಸಂಸತ್ ಸದಸ್ಯರಾಗಿದ್ದಾರೆ.
ಕೈ ಅಭ್ಯರ್ಥಿಗೆ ದಾಖಲೆ ಜಯ: ಚಾಮರಾಜನಗರ ಲೋಕಸಭಾ ಕ್ಷೇತ್ರದ ನೂತನ ಸಂಸದರಾಗಿ ಆಯ್ಕೆಯಾಗಿರುವ ಸುನಿಲ್ ಬೋಸ್ ಕ್ಷೇತ್ರದಲ್ಲೇ ದಾಖಲೆ ಮಟ್ಟದಲ್ಲಿ ಗೆಲುವಿನ ನಗೆ ಬೀರಿದ್ದಾರೆ. ಕಾಂಗ್ರೆಸ್ನ ಆರ್.ಧ್ರುವನಾರಾಯಣ ತಮ್ಮ ಪ್ರತಿಸ್ಪರ್ಧಿ ಎ.ಆರ್.ಕೃಷ್ಣಮೂರ್ತಿ ವಿರುದ್ಧ 1.41 ಲಕ್ಷ ಮತಗಳಿಂದ ಜಯಿಸಿದ್ದರು. ಆದರೆ, ಸುನಿಲ್ ಬೋಸ್ 1,88,943 ಮತಗಳ ಅಂತರದಲ್ಲಿ ಗೆದ್ದು ಚಾಮರಾಜನಗರ ಲೋಕ ಅಖಾಡದಲ್ಲಿ ಹೊಸ ದಾಖಲೆ ಬರೆದಿದ್ದಾರೆ.
ಸುನಿಲ್ ಬೋಸ್ ಗೆಲುವಿಗೆ ಕಾರಣ:
- ಏಳು ಶಾಸಕರಿಗೂ ಟಾಸ್ಕ್ ಕೊಟ್ಟಿದ್ದು ವರದಾನ
- ಮನೆ ಮನೆಗೆ ಭೇಟಿ ಕೊಡುವ ಮೂಲಕ ವ್ಯಾಪಕ ಪ್ರಚಾರ
- ಗ್ಯಾರಂಟಿ ಯೋಜನೆ ಜಾರಿಯ ಉಪಯೋಗ
- ಕ್ಷೇತ್ರದಲ್ಲಿ ಸಿಎಂ ಸಿದ್ದರಾಮಯ್ಯ ಅವರ ಹೆಚ್ಚಿನ ಓಡಾಟ
- ಎಂಟು ಕ್ಷೇತ್ರಗಳಲ್ಲಿ ಏಳು ಕ್ಷೇತ್ರಗಳು ಕಾಂಗ್ರೆಸ್ ತೆಕ್ಕೆಯಲ್ಲಿರುವುದು
- ಮೈಸೂರು ಚಾಮರಾಜನಗರ ಭಾಗದಲ್ಲಿ ಸಿದ್ದರಾಮಯ್ಯ ಹಾಗೂ ಸಚಿವ ಹೆಚ್.ಸಿ.ಮಹದೇವಪ್ಪನವರ ಕಸರತ್ತು
ಬಿಜೆಪಿಯ ಹೀನಾಯ ಸೋಲಿಗೆ ಕಾರಣ:
- ಜಿಲ್ಲೆಯಲ್ಲಿ ಪ್ರಬಲ ನಾಯಕರ ಹಾಗೂ ಸ್ಟಾರ್ ಪ್ರಚಾರಕರ ಕೊರತೆ
- ಕಾಂಗ್ರೆಸ್ ಗ್ಯಾರಂಟಿ ಮುಂದೆ ಮುಗ್ಗರಿಸಬೇಕಾದದ್ದು
- ಮೋದಿ ಅಲೆಗೆ ಸಿಮೀತವಾಗಿ, ಸರಿಯಾದ ಪ್ರಚಾರ ಮಾಡದಿರುವುದು
- ಹಿಂದಿನ ಸಂಸದರಿಂಷ ಅಭಿವೃದ್ಧಿ ಕುಂಠಿತ ಆರೋಪ
- ಸ್ಥಳೀಯ ಮುಖಂಡರು ಕೊನೆಯ ಕ್ಷಣದಲ್ಲಿ ಪಕ್ಷ ತೊರೆದದ್ದು ಹಾಗೂ ಸಂಸದರು ತಟಸ್ಥವಾದದ್ದು
- ಎಂಟರಲ್ಲಿ ಏಳು ಶಾಸಕರು ಕಾಂಗ್ರೆಸ್ ನವರೇ ಇದ್ದದ್ದು
ಇದನ್ನೂ ಓದಿ:ಶಾಸಕ ಸವದಿ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಹಿನ್ನಡೆ : ಸಚಿವ ಸತೀಶ್ ಜಾರಕಿಹೊಳಿ - satish jarakiholi statement