ಬೆಂಗಳೂರು:ಸಂಸದ ಪ್ರಜ್ವಲ್ ರೇವಣ್ಣ ಹಾಗೂ ಮಾಜಿ ಸಚಿವ ಹೆಚ್.ಡಿ.ರೇವಣ್ಣ ಅವರ ವಿರುದ್ಧ ಕೇಳಿಬಂದಿರುವ ಪೆನ್ ಡ್ರೈವ್ ಪ್ರಕರಣ ಹಾಗೂ ಅಪಹರಣ ಪ್ರಕರಣದ ತನಿಖೆಯನ್ನು ಸರ್ಕಾರ ಸರಿಯಾಗಿ ಮಾಡುತ್ತಿಲ್ಲವೆಂದು ಆರೋಪಿಸಿ ರಾಜ್ಯಪಾಲರಿಗೆ ದೂರು ನೀಡಲು ಜೆಡಿಎಸ್ ನಿರ್ಧರಿಸಿದೆ.
ಪಕ್ಷದ ಕಚೇರಿ ಜೆಪಿ ಭವನದಲ್ಲಿ ಇಂದು ನಡೆದ ಕೋರ್ ಕಮಿಟಿ ಸಭೆಗೂ ಮುನ್ನ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ, ''ಕಾಂಗ್ರೆಸ್ ಸರ್ಕಾರದ ವಿರುದ್ಧ ದೂರು ನೀಡಲು ರಾಜಭವನಕ್ಕೆ ಮಧ್ಯಾಹ್ನ ಹೋಗುತ್ತೇವೆ. ರಾಜ್ಯಪಾಲರಿಗೆ ಮನವಿ ಕೊಡುತ್ತೇವೆ. ತನಿಖೆ ಹಾದಿ ಯಾವ ರೀತಿ ತಪ್ಪುತ್ತಿದೆ. ನಿಜಕ್ಕೂ ಈ ತನಿಖೆಯಿಂದ ಯಾರಿಗೆ ಶಿಕ್ಷೆ ಆಗಬೇಕು? ನಾನು ಮೊದಲ ದಿನದಿಂದಲೂ ಹೇಳುತ್ತಿದ್ದೇನೆ. ಯಾರು ತಪ್ಪು ಮಾಡಿದ್ದಾರೆ, ಅವರಿಗೆ ಶಿಕ್ಷೆ ಆಗಬೇಕು. ಅದರೆ, ಇಲ್ಲಿ ನಡೆಯುತ್ತಿರುವ ವಾತಾವರಣ ನೋಡಿದರೆ, ಇವರಿಗೆ ಶಿಕ್ಷೆ ಕೊಡಿಸುವ ಬದಲು ಪ್ರಚಾರ ಬೇಕು. ಅದಕ್ಕೋಸ್ಕರ ಇದು ನಡೆಯುತ್ತಿದೆ'' ಎಂದು ವಾಗ್ದಾಳಿ ನಡೆಸಿದರು.
''ಹದಿನೈದು ದಿನ ಆಯಿತು. ತನಿಖೆಯಲ್ಲಿ ಏನು ಇವರ ಸಾಧನೆ? ನಿನ್ನೆ ಬೇರೆ ಕೃಷ್ಣ ಬೈರೇಗೌಡರು, ನಮ್ಮ ಮಂಡ್ಯ ಸಚಿವರು, ರಾಮಲಿಂಗರೆಡ್ಡಿ ಸೇರಿ ಎಲ್ಲ ಒಕ್ಕಲಿಗ ಮಂತ್ರಿಗಳು ಮಾತನಾಡಿದ್ದಾರೆ. ಹಿಂದೆ ಇದೇ ರೀತಿ ನಾನು ಭ್ರಷ್ಟಾಚಾರದ ವಿರುದ್ಧ ಹೋರಾಟ ಮಾಡಿದಾಗ ಬಿಜೆಪಿಯ ಸ್ನೇಹಿತರು ಒಕ್ಕಲಿಗರನ್ನು ಬಿಟ್ಟಿದ್ದರು. ಈಗ ಅದೇ ತಂತ್ರಗಾರಿಕೆಯನ್ನು ಕಾಂಗ್ರೆಸ್ ಮಾಡುತ್ತಿದೆ'' ಎಂದು ಟೀಕಿಸಿದರು.
''ಕೆಕೆ ಗೆಸ್ಟ್ ಹೌಸ್ನಲ್ಲಿ ಸಂತ್ರಸ್ತರನ್ನು ಇಟ್ಟಿರುವ ಆರೋಪ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಕಿಡ್ನಾಪ್ ಆಗಿದ್ದಾರೆ ಎನ್ನಲಾದ ಮಹಿಳೆಯ ಕುಟುಂಬ ಸದಸ್ಯರನ್ನು ಕೆಕೆ ಗೆಸ್ಟ್ನಲ್ಲಿ ಇಟ್ಟುಕೊಂಡಿದ್ದಾರೆ ಎಂಬ ಮಾಹಿತಿ ಇದೆ. ಆ ಮಾಹಿತಿ ಹೇಳಿದ್ದೇನೆ. ಕಿಡ್ನಾಪ್ ಆದ ಮಹಿಳೆಯನ್ನು ಕರೆದುಕೊಂಡು ಬಂದು ಎಷ್ಟು ದಿನ ಆಯ್ತು. 164ರ ಅಡಿ ಹೇಳಿಕೆ ತೆಗೆದುಕೊಂಡಿದ್ದಾರಾ?. ನ್ಯಾಯಾಧೀಶರ ಮುಂದೆ ಅವರನ್ನು ಹಾಜರುಪಡಿಸಿದ್ದಾರಾ?'' ಎಂದು ಪ್ರಶ್ನಿಸಿದರು.