ಕರ್ನಾಟಕ

karnataka

ETV Bharat / state

ಮುಡಾ ವಿಚಾರವಾಗಿ ಸಿಎಂಗೆ ಕಪ್ಪು ಚುಕ್ಕೆ ತರಲು ಯತ್ನ: ಪ್ರತಿಪಕ್ಷಗಳ ವಿರುದ್ಧ ಕಾಂಗ್ರೆಸ್ ಶಾಸಕರ ಟೀಕೆ - Muda Scam

ಮುಡಾ ಹಗರಣ ಖಂಡಿಸಿ ಚರ್ಚೆಗೆ ಅವಕಾಶ ನೀಡುವಂತೆ ಒತ್ತಾಯಿಸಿ ಪ್ರತಿಪಕ್ಷಗಳು ಸದನದಲ್ಲಿ ಪ್ರತಿಭಟನೆ ಮುಂದುವರಿಸಿವೆ. ಆದ್ರೆ ಕಾಂಗ್ರೆಸ್ ಶಾಸಕರು ಜಂಟಿ ಮಾಧ್ಯಮಗೋಷ್ಟಿ ನಡೆಸಿ ಬಿಜೆಪಿ ಮತ್ತು ಜೆಡಿಎಸ್ ವಿರುದ್ಧ ಟೀಕಾ ಪ್ರಹಾರ ನಡೆಸುವ ಮೂಲಕ ಸಿಎಂ ಸಿದ್ದರಾಮಯ್ಯ ಅವರನ್ನು ಸಮರ್ಥಿಸಿಕೊಂಡಿದ್ದಾರೆ.

ಶಾಸಕ ನರೇಂದ್ರ ಸ್ವಾಮಿ, ಶಾಸಕ ಶಿವಲಿಂಗೇಗೌಡ
ಶಾಸಕ ನರೇಂದ್ರ ಸ್ವಾಮಿ, ಶಾಸಕ ಶಿವಲಿಂಗೇಗೌಡ (ETV Bharat)

By ETV Bharat Karnataka Team

Published : Jul 25, 2024, 12:56 PM IST

ಬೆಂಗಳೂರು: ಕಪ್ಪು ಚುಕ್ಕೆಯಿಲ್ಲದ ರಾಜಕಾರಣಿ ಸಿದ್ದರಾಮಯ್ಯ ಅವರಿಗೆ ಕಪ್ಪು ಚುಕ್ಕೆ ತರಲು ಪ್ರತಿಪಕ್ಷ ಬಿಜೆಪಿ-ಜೆಡಿಎಸ್ ಹೊರಟಿದ್ದಾರೆ ಎಂದು ಕಾಂಗ್ರೆಸ್ ಶಾಸಕ ಶಿವಲಿಂಗೇಗೌಡ ವಾಗ್ದಾಳಿ ನಡೆಸಿದ್ದಾರೆ. ವಿಧಾನಸೌಧದಲ್ಲಿ ಬಿಜೆಪಿ ವಿರುದ್ಧ ಕಾಂಗ್ರೆಸ್ ಶಾಸಕರ ಜಂಟಿ ಮಾಧ್ಯಮಗೋಷ್ಟಿ ವೇಳೆ ಮಾತನಾಡಿದ ಅವರು, ಡ್ರಾಮಾ ಮಾಡುತ್ತಿರುವ ಬಿಜೆಪಿ, ಜೆಡಿಎಸ್​​ಗೆ ಬುದ್ಧಿ ಕಲಿಸಬೇಕು. ಮುಡಾ ಹಗರಣದ ಬಗ್ಗೆ ನ್ಯಾಯಾಂಗ ತನಿಖೆ ನಡೆದಿದೆ. ಇದು 20 ವರ್ಷಗಳ ಹಿಂದಿನ ಪ್ರಕರಣ. ಹಾಗಾಗಿ ಸಭಾಧ್ಯಕ್ಷರು ಚರ್ಚೆಗೆ ಅವಕಾಶ ಕೊಟ್ಟಿಲ್ಲ. ಅದಕ್ಕೆ ಪ್ರತಿಪಕ್ಷಗಳು ವಿರೋಧ ವ್ಯಕ್ತಪಡಿಸಿವೆ. ಏನೋ ಆಗಿದೆ ಅಂತ ರಾಜಕೀಯ ಬಣ್ಣ ಕಟ್ಟುತ್ತಿದ್ದಾರೆ. ರಾಜ್ಯದ ಜನರಿಗೆ ಸತ್ಯಾಸತ್ಯತೆ ಗೊತ್ತಾಗಬೇಕು ಎಂದು ತಿಳಿಸಿದರು.

3.15 ಎಕರೆ ಜಮೀನು 1935ರಲ್ಲಿ ನಿಂಗಾ ಬಿನ್ ಜವರ ಎಂಬುವರಿಗೆ ಹರಾಜು ಮೂಲಕ ಬಂದಿತ್ತು. ಬ್ರಿಟಿಷರ ಅವಧಿಯಲ್ಲಿ ಬಿಡ್ ಮೂಲಕ ಬಂದ ದಾಖಲೆ‌ ಇಲ್ಲಿದೆ. ಹರಾಜು ಕೂಗುವವರಿಗೆ ಭೂಮಿ ಕೊಡುವುದಿತ್ತು. ಹಾಗಾಗಿ ನಿಂಗಾಗೆ ಈ ಭೂಮಿ ನೀಡಲಾಗಿತ್ತು. ನಿಂಗಾ ಎಂಬುವರಿಗೆ ಮೂವರು ಮಕ್ಕಳು. ಮೈಲಾರಯ್ಯ, ಮಲ್ಲಯ್ಯ, ದೇವರಾಜು. ಮೈಲಾರಯ್ಯ ಮೃತ ಪಟ್ಟಿದ್ದಾರೆ. ಅವರ ಪತ್ನಿ ಪುಟ್ಟಗೌರಮ್ಮ‌ ಇದ್ದಾರೆ‌. 1964ರಲ್ಲಿ ಮತ್ತೆ 4 ಎಕರೆ ಭೂಮಿ ಮಂಜೂರಾಗುತ್ತದೆ. 3.15 ಎಕರೆಯನ್ನು ದೇವರಾಜುಗೆ ಬಿಡ್ತಾರೆ. ನಾಲ್ಕು ಎಕರೆಯನ್ನು ಇಬ್ಬರು ಹಂಚಿಕೊಳ್ತಾರೆ ಎಂದು ವಿವರಿಸಿದರು.

2004 ರಲ್ಲಿ ದೇವರಾಜು‌ ಅವರು ಮಲ್ಲಿಕಾರ್ಜುನಸ್ವಾಮಿಗೆ ಆ ಭೂಮಿ ನೀಡ್ತಾರೆ.‌ ಮಲ್ಲಿಕಾರ್ಜುನ ಸ್ವಾಮಿ ಅವರು ಸಿಎಂ ಬಾಮೈದ. 2010 ರಲ್ಲಿ ಆ ಭೂಮಿಯನ್ನು ಮಲ್ಲಿಕಾರ್ಜುನ್ ಸ್ವಾಮಿ ಅವರು ಸಿಎಂ ಪತ್ನಿಗೆ ದಾನಪತ್ರ ರೂಪದಲ್ಲಿ ಕೊಡ್ತಾರೆ. ಬಳಿಕ 3.15 ಎಕರೆ ಜಮೀನನ್ನು ಮುಡಾ ಸ್ವಾಧೀನ ಪಡಿಸಿಕೊಂಡು ಸೈಟ್ ಮಾಡಿ ಹಂಚಿಕೆ ಮಾಡ್ತಾರೆ. ಇದನ್ನು ಪ್ರಶ್ನಿಸಿ ಸಿಎಂ ಪತ್ನಿ, ಭೂಮಿ ವಾಪಸ್‌ ಮಾಡಿ ಇಲ್ಲವೇ ಸಮಾನಾಂತರ ಭೂಮಿ ನೀಡಿ ಎಂದು ಮುಡಾಗೆ ಪತ್ರ ಬರೆಯುತ್ತಾರೆ. ಆಗ ಅವರಿಗೆ 50:50 ಅನುಪಾತದಲ್ಲಿ ಸೈಟ್ ನೀಡಲಾಗುತ್ತದೆ. ಸೈಟು ನೀಡುವಾಗ ಬಿಜೆಪಿಯವರು ಅಧಿಕಾರದಲ್ಲಿದ್ದರು ಎಂದು ಶಿವಲಿಂಗೇಗೌಡರು ತಿಳಿಸಿದರು.

ಸಿಎಂ ಅನ್ನೋ ಕಾರಣಕ್ಕೆ ದೊಡ್ಡದು ಮಾಡ್ತಿದ್ದಾರೆ. ಸುಮ್ಮನೆ ಸಿದ್ದರಾಮಯ್ಯ ಘನತೆ ಹಾಳು ಮಾಡಬೇಡಿ. ರಾಜ್ಯದ ಜನ ಇದನ್ನು ನಂಬಲ್ಲ. ಸಿದ್ದರಾಮಯ್ಯ‌ ವ್ಯಕ್ತಿತ್ವ ಜನರಿಗೆ‌ ಗೊತ್ತಿದೆ. ಅವರನ್ನು ಪ್ರಕರಣದಲ್ಲಿ ಸಿಗಿಸ್ತೇವೆ ಎಂಬ ಆಸೆ ಇದ್ರೆ ಬಿಟ್ಬಿಡಿ. ಅವರಿಗೆ ಸೈಟ್ ಕೊಟ್ಟವರು ನೀವೇ. ಈಗ ನಾಟಕ ಮಾಡುವುದನ್ನು ನಿಲ್ಲಿಸಿ. ಮುಡಾದವರು ಅಕ್ರಮ ಪ್ರವೇಶ ಮಾಡಿದ್ದೇಕೆ. 3.15 ಎಕರೆಯನ್ನ ವಾಪಸ್ ಮಾಡಿ. ಬಿಜೆಪಿಯವರೇ ಅವತ್ತು ಸೈಟ್ ಕೊಟ್ಟವರು. ಅದೇ ಜಾಗದಲ್ಲಿ ಕೊಡಿ ಅಂತ ಸಿದ್ದರಾಮಯ್ಯ ಕೇಳಿದ್ರಾ?. ಅವರದ್ದೇನಾದ್ರು ತಪ್ಪಾಗಿದ್ರೆ ನಾವೇ ಶರಣಾಗ್ತೇವೆ ಎಂದು ಕಾಂಗ್ರೆಸ್ ಶಾಸಕ ಸವಾಲೆಸೆದರು.

ಹೆಚ್​ಡಿಕೆಗೆ ಹೇಗೆ ನಿವೇಶನ ಕೊಟ್ಟರು?:ಇದೇ ವೇಳೆ ಮಾತನಾಡಿದ ಶಾಸಕ ನಾರಾಯಣ ಸ್ವಾಮಿ, ಹೆಚ್.ಡಿ. ಕುಮಾರಸ್ವಾಮಿ ಮುಡಾದಲ್ಲಿ ಅರ್ಜಿ‌ ಹಾಕಿ 21 ಸಾವಿರ ಚದರಡಿ ನಿವೇಶನ ಪಡೆದಿದ್ದಾರೆ. ಅವರಿಗೆ ಹೇಗೆ ನಿವೇಶನ ಕೊಟ್ರು. ಸಾ.ರಾ. ಮಹೇಶ್, ಜಿ.ಟಿ.ದೇವೇಗೌಡ ಕೂಡ ನಿವೇಶನ ತೆಗೆದುಕೊಂಡಿದ್ದಾರೆ. ಅವರ ಬಗ್ಗೆ ಯಾಕೆ ನೀವು ಮಾತನಾಡ್ತಿಲ್ಲ. ಸಿದ್ದರಾಮಯ್ಯ ಪಡೆದ್ರೆ ಮಾತ್ರ ಅಕ್ರಮವೇ?. ಕುಮಾರಣ್ಣ ನಾನು‌ ಮೈಸೂರಿನಲ್ಲಿ ವಾಸವಿದ್ದೇನೆ. ನನಗೆ ಸೈಟು ಕೊಡಿ ಅಂತ ಸ್ವಂತ ಪತ್ರ ಬರೆದಿದ್ದರು. ಕುಮಾರಣ್ಣ ಏನಾದ್ರೂ ಇಂಡಸ್ಟ್ರಿ ಮಾಡಿದ್ದಾರಾ?. ಎಷ್ಟು ಜನರಿಗೆ ಉದ್ಯೋಗ ಕೊಟ್ಟಿದ್ದಾರೆ. ಹೆಚ್.ಡಿ. ಬಾಲಕೃಷ್ಣ ಕೂಡ ಜಮೀನು ಪಡೆದಿದ್ದಾರೆ. ಅವರ ಅತ್ತೆ, ಹೆಂಡತಿ ಕೂಡ ಜಮೀನು ಪಡೆದಿದ್ದಾರೆ. ಇದು ಅಕ್ರಮ ಅಲ್ವೇ ಕುಮಾರಣ್ಣ?. ಇದರ ಬಗ್ಗೆ ಯಾಕೆ ಬಿಜೆಪಿ ನಾಯಕರು‌ ಮಾತನಾಡುತ್ತಿಲ್ಲ. ಸಿದ್ದರಾಮಯ್ಯರನ್ನು ಕಟ್ಟಿಹಾಕೋಕೆ ಇದನ್ನ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಹಳೆಯ ಹಗರಣವನ್ನು ಉದ್ದೇಶಪೂರ್ವಕವಾಗಿ ಎತ್ತಿದ್ದಾರೆ. ಚರ್ಚೆಗೆ ಅವಕಾಶ ಕೇಳಿ ರಾಜಕೀಯ ದುರುದ್ದೇಶದಿಂದ ಪ್ರತಿಭಟನೆ ಮಾಡುತ್ತಿದ್ದಾರೆ. ಸಿಎಂ ಈ ಹಗರಣದಲ್ಲಿ ಭಾಗಿಯಾಗಿಲ್ಲ. ಹಂಚಿಕೆ ಮಾಡಿದರಲ್ಲಿ ಸಿಎಂ ಸಹಿ ಇಲ್ಲ. ಬಿಜೆಪಿ ಅವಧಿಯಲ್ಲಿ ಈ ಹಗರಣ ಆಗಿದೆ. ಯಾವ ಉದ್ದೇಶದಿಂದ ಮೈಸೂರು ಪಾದಯಾತ್ರೆ ಮಾಡ್ತಾರೆ?. ಈಗಾಗಲೇ ಹಗರಣದ ತನಿಖೆ ನಡೆಯುತ್ತಿದೆ. ಯಾವ ಪುರುಷಾರ್ಥಕ್ಕೆ ಬಿಜೆಪಿ ಪಾದಯಾತ್ರೆ ಮಾಡುತ್ತೆ ಎಂದು ಕಿಡಿಕಾರಿದರು.

ಸರ್ಕಾರ ಬುಡಮೇಲು ಮಾಡಲು ಹೊರಟಿದ್ದಾರೆ:ಇದೇ ವೇಳೆ ಮಾತನಾಡಿದ ಶಾಸಕ ನರೇಂದ್ರ ಸ್ವಾಮಿ, ದಲಿತರ ಭೂಮಿ ಪಡೆದಿದ್ದಾರೆ ಅಂತಾರೆ. ಆದರೆ ಕ್ರಯಕ್ಕೆ ಪಡೆದಿರುವ ಭೂಮಿ ಇದು. 1993 ರಿಂದ ಇಲ್ಲಿಯವರೆಗೆ 31 ವರ್ಷ ಆಗಿದೆ. ಇದರ ಬಗ್ಗೆ ಎಲ್ಲಿಯೂ ಒಂದೇ ಒಂದು ದೂರು ಬಂದಿಲ್ಲ. ಅಣ್ಣ ತಮ್ಮಂದಿರ ನಡುವೆ ವಿವಾದ ಬಂದಿಲ್ಲ. ಆದರೆ ಬಿಜೆಪಿ ಎಂಟ್ರಿಯಿಂದ ಗೊಂದಲ ಉಂಟಾಗಿದೆ. ಮಂಜುನಾಥ ಸ್ವಾಮಿ ಎಂಬುವರನ್ನ ಹೊಸದಾಗಿ ಹುಟ್ಟು ಹಾಕಿದ್ದಾರೆ ಎಂದು ದೂರಿದರು.

ಸಿದ್ದರಾಮಣ್ಣನಿಗೆ ಮಸಿ ಬಳಿಯುವ ಪ್ರಯತ್ನ ಮಾಡ್ತಿದ್ದಾರೆ. ನಮ್ಮ ಸರ್ಕಾರ ಬಂದು ವರ್ಷ ಮುಗಿದೋಯ್ತು. ಒಂದು ವರ್ಷದಿಂದ ಯಾಕೆ ಈ ವಿಚಾರ ಪ್ರಸ್ತಾಪಿಸಿಲ್ಲ. 2021ರ ಪ್ರಕರಣ ಇದು ಆಗ ಯಾಕೆ ಬಾಯ್ಬಿಡಲಿಲ್ಲ. ಆಗ ಸದನ ಕೂಡ ನಡೆದಿತ್ತು. ಅವತ್ತಿನ ಅಧ್ಯಕ್ಷ ಯಾವ ಪಕ್ಷದವರು?. ಅವತ್ತಿನ ನಗರಾಭಿವೃದ್ಧಿ ಸಚಿವರು ಯಾರು?. ಅವತ್ತು ಮುಖ್ಯಮಂತ್ರಿಯಾಗಿದ್ದವರು ಯಾರು?. ಅವರಿಗೆ ಶಿಕ್ಷೆಯಾಗಬೇಕು ಅಂತ ಯಾಕೆ ಕೇಳಲಿಲ್ಲ ಎಂದು ಪ್ರಶ್ನಿಸಿದರು.

ಕುಮಾರಸ್ವಾಮಿ ಒಂದು ಅಸೈನ್​​ಮೆಂಟ್ ಪಡೆದುಕೊಂಡಿದ್ದಾರೆ. ಸರ್ಕಾರ ಬುಡಮೇಲು‌ ಮಾಡೋಕೆ ಹೊರಟ್ಟಿದ್ದಾರೆ. ವಾಲ್ಮೀಕಿ ಅಭಿವೃದ್ಧಿ ನಿಗಮ ಹಗರಣ ಯಾವತ್ತು ಆರಂಭವಾಗಿತ್ತು?. ತನಿಖೆ ನಡೆದರೆ ಎಲ್ಲವೂ ಹೊರಬರುತ್ತೆ. ಎಲ್ಲಾ ನಿಗಮಗಳಲ್ಲಿ ಎಂದಿನಿಂದ ಅಕ್ರಮ ಆಗಿವೆ. ಯಾರ ಅವಧಿಯಲ್ಲಿ‌ ಆಗಿವೆ ಹೊರಬರಲಿ. ನೂರು ಬಾರಿ ಸುಳ್ಳು ಹೇಳಿ ಸತ್ಯ ಮಾಡೋಕೆ ಹೊರಟಿದ್ದಾರೆ ಎಂದು ಟೀಕಿಸಿದರು.

ಇದನ್ನೂ ಓದಿ:ಮುಡಾ 'ಹಗರಣ': ಸದನದಲ್ಲೇ ಮಲಗಿ ಪ್ರತಿಪಕ್ಷಗಳ ಅಹೋರಾತ್ರಿ ಧರಣಿ; ಭಜನೆ, ಅಂತ್ಯಾಕ್ಷರಿ ಹಾಡಿದ ಶಾಸಕರು - BJP JDS Night Long Protest

ABOUT THE AUTHOR

...view details