ಮುಂಬೈ: ಮಹಾರಾಷ್ಟ್ರ ಮುಖ್ಯಮಂತ್ರಿ ಹುದ್ದೆಗೆ ನಡೆಯುತ್ತಿರುವ ಗೊಂದಲದ ನಡುವೆ ಬಿಜೆಪಿ ಹೈಕಮಾಂಡ್ ಇಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ಗುಜರಾತ್ ಮಾಜಿ ಮುಖ್ಯಮಂತ್ರಿ ವಿಜಯ್ ರೂಪಾನಿ ಅವರನ್ನು ಶಾಸಕಾಂಗ ಪಕ್ಷದ ನಾಯಕನ ಆಯ್ಕೆಗೆ ವೀಕ್ಷಕರನ್ನಾಗಿ ನೇಮಿಸಿದೆ. ಡಿ.4ರಂದು ಶಾಸಕಾಂಗ ಪಕ್ಷದ ಸಭೆ ನಡೆಯಲಿದ್ದು, ರಾಜ್ಯದ ಮುಂದಿನ ಮುಖ್ಯಮಂತ್ರಿ ಯಾರು ಎಂಬುದು ತಿಳಿಯಲಿದೆ.
ರಾಜ್ಯ ವಿಧಾನಸಭಾ ಚುನಾವಣೆಯ ಫಲಿತಾಂಶ ಹೊರಬಿದ್ದು 10 ದಿನ ಕಳೆದರೂ ಸಿಎಂ ಯಾರೆಂಬ 'ಚಿದಂಬರ ರಹಸ್ಯ' ಇನ್ನೂ ಬಯಲಾಗಿಲ್ಲ. ಇದಕ್ಕೆ ಇತಿಶ್ರೀ ಹೇಳಲೆಂದೇ ಹೈಕಮಾಂಡ್, ನಿರ್ಮಲಾ ಸೀತಾರಾಮನ್ ಮತ್ತು ವಿಜಯ್ ರೂಪಾನಿ ಅವರನ್ನು ಶಾಸಕಾಂಗ ಪಕ್ಷದ ಸಭೆಗೆ ವೀಕ್ಷಕರನ್ನಾಗಿ ನೇಮಿಸಿದೆ.
ನಿಯೋಜಿತ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರು ಮುಖ್ಯಮಂತ್ರಿ ಸ್ಥಾನದ ರೇಸ್‌ನಿಂದ ಹಿಂದೆ ಸರಿದಿದ್ದರೂ ಅವರ ಕೆಲವು ಬೇಡಿಕೆಗಳಿಂದಾಗಿ ಪಕ್ಷದ ಶಾಸಕಾಂಗ ಸಭೆ ಈಗಾಗಲೇ ಎರಡು ಬಾರಿ ಮುಂದೂಡಲ್ಪಟ್ಟಿದೆ.
ಗುರುವಾರ ನೂತನ ಸಿಎಂ ಪ್ರಮಾಣವಚನ: ಡಿಸೆಂಬರ್ 5ರಂದು ಸಂಜೆ 5 ಗಂಟೆಗೆ ನೂತನ ಸರ್ಕಾರದ ಪ್ರಮಾಣವಚನ ಸ್ವೀಕಾರ ಸಮಾರಂಭ ನಡೆಯಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಚಂದ್ರಶೇಖರ ಬಾವನಕುಳೆ ತಿಳಿಸಿದ್ದಾರೆ.
288 ಸದಸ್ಯ ಬಲದ ಮಹಾರಾಷ್ಟ್ರ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಬಿಜೆಪಿ 132 ಸೀಟುಗಳನ್ನು ಗೆದ್ದರೆ, ಶಿವಸೇನೆ (ಏಕನಾಥ್ ಶಿಂಧೆ ಬಣ) 57, ಎನ್‌ಸಿಪಿ (ಅಜಿತ್ ಪವಾರ್ ಬಣ) 41 ಸೀಟುಗಳನ್ನು ಜಯಿಸಿತ್ತು. ಸರ್ಕಾರ ರಚಿಸಲು ಬೇಕಿರುವ ಮ್ಯಾಜಿಕ್ ನಂಬರ್ 145.
ಇದನ್ನೂ ಓದಿ: ಮಹಾ ಸಿಎಂ ಆಯ್ಕೆ ವಿಚಾರ: ಪ್ರಮಾಣ ವಚನ ಸಮಾರಂಭಕ್ಕೂ ಮುನ್ನ ಬಿಜೆಪಿ ಶಾಸಕಾಂಗ ಸಭೆ: ಸುಧೀರ್ ಮುಂಗಂತಿವಾರ್