ಬೆಂಗಳೂರು: ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ತಮ್ಮ ವಿರುದ್ಧ ದಾಖಲಾಗಿದ್ದ ಪೋಕ್ಸೋ ಪ್ರಕರಣವನ್ನು ರದ್ದುಗೊಳಿಸುವಂತೆ ಕೋರಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್ ಶುಕ್ರವಾರಕ್ಕೆ ಮುಂದೂಡಿತು.
ಯಡಿಯೂರಪ್ಪ ವಿರುದ್ಧ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು. ಈ ಕೇಸ್ ರದ್ದು ಕೋರಿ ಅವರು ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ನಡೆಸಿದರು.
ವಿಚಾರಣೆ ವೇಳೆ ರಾಜ್ಯ ಸರ್ಕಾರದ ಪರ ವಾದ ಮಂಡಿಸಿದ ವಿಶೇಷ ಅಭಿಯೋಜಕ ಪ್ರೊ.ರವಿವರ್ಮ ಕುಮಾರ್, ''ಪ್ರಕರಣದಲ್ಲಿ ಅರ್ಜಿದಾರರನ್ನು ಖುದ್ದು ವಿಚಾರಣೆಗೆ ಹಾಜರಿಯಿಂದ ವಿನಾಯಿತಿ ನೀಡಿ ಆದೇಶಿಸಲಾಗಿದೆ. ಇದರಿಂದ ವಿಚಾರಣಾ ನ್ಯಾಯಾಲಯದ ಪ್ರಕ್ರಿಯೆಗೆ ಅಡ್ಡಿಯಾಗಿದೆ. ಖುದ್ದು ವಿಚಾರಣೆಗೆ ಹಾಜರಾಗುವುದಕ್ಕೆ ವಿಧಿಸಿರುವ ತಡೆಯಾಜ್ಞೆಯನ್ನು ತೆರವುಗೊಳಿಸಬೇಕು'' ಎಂದು ಕೋರಿದರು.
ಇದಕ್ಕೆ ನ್ಯಾಯಮೂರ್ತಿಗಳು, ''ಮಧ್ಯಂತರ ಆದೇಶವನ್ನು ನಾನು ನೀಡಿಲ್ಲ. ಇದೇ ಅರ್ಜಿಯ ವಿಚಾರಣೆ ನಡೆಸಿದ್ದ ಮತ್ತೊಂದು ಪೀಠ ವಿಚಾರಣೆ ನಡೆಸಿ ಆದೇಶಿಸಿದೆ'' ಎಂದು ತಿಳಿಸಿದರು.
300ಕ್ಕೂ ಹೆಚ್ಚು ಅರ್ಜಿಗಳು ವಿಚಾರಣೆಗೆ ಪಟ್ಟಿಯಾಗಿವೆ. ಹೀಗಾಗಿ, ಅರ್ಜಿ ವಿಚಾರಣೆ ಸಾಧ್ಯವಾಗುತ್ತಿಲ್ಲ. ಆದ್ದರಿಂದ ವಿಚಾರಣೆಯನ್ನು ಶುಕ್ರವಾರ ಮಧ್ಯಾಹ್ನ 2.30ಕ್ಕೆ ಮುಂದೂಡುವುದಾಗಿ ತಿಳಿಸಿದ ಪೀಠ, ವಿಚಾರಣೆ ಮುಂದೂಡಿತು.
ಪ್ರಕರಣದ ಹಿನ್ನೆಲೆ: ಅಪ್ರಾಪ್ತೆಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ 2024ರ ಮಾರ್ಚ್ 3ರಂದು ಬಿಎಸ್ವೈ ವಿರುದ್ಧ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲಾಗಿತ್ತು. ದೂರಿನ ಆಧಾರದ ಮೇಲೆ ಎಫ್‌ಐಆರ್ ದಾಖಲಿಸಲಾಗಿದೆ. ಪ್ರಕರಣವನ್ನು ರಾಜ್ಯ ಸರ್ಕಾರ ಸಿಐಡಿಗೆ ವರ್ಗಾಯಿಸಿತ್ತು.
ಸಿಐಡಿ ಅಧಿಕಾರಿಗಳು ಯಡಿಯೂರಪ್ಪಗೆ ನೋಟಿಸ್ ನೀಡಿ, ವಿಚಾರಣೆಗೆ ಹಾಜರಾಗಲು ಸೂಚಿಸಿದ್ದರು. ಅದರಂತೆ ಯಡಿಯೂರಪ್ಪ ವಿಚಾರಣೆಗೆ ಹಾಜರಾಗಿ ತಮ್ಮ ಹೇಳಿಕೆ ನೀಡಿದ್ದರು. ಈ ನಡುವೆ ತಮ್ಮ ವಿರುದ್ಧದ ಪ್ರಕರಣ ರದ್ದು ಮತ್ತು ನಿರೀಕ್ಷಣಾ ಜಾಮೀನು ಮಂಜೂರು ಮಾಡುವಂತೆ ಕೋರಿ ಹೈಕೋರ್ಟ್‌ಗೆ ಎರಡು ಪ್ರತ್ಯೇಕ ಅರ್ಜಿಗಳನ್ನು ಸಲ್ಲಿಸಿದ್ದರು.
ಈ ಮೊದಲು ಈ ಅರ್ಜಿಯ ವಿಚಾರಣೆ ನಡೆಸಿದ್ದ ನ್ಯಾಯಾಲಯ, ಯಡಿಯೂರಪ್ಪರನ್ನು ಬಂಧಿಸದಂತೆ ಮತ್ತು ಖುದ್ದು ವಿಚಾರಣೆಗೆ ವಿನಾಯಿತಿ ನೀಡಿ ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ಸಿಐಡಿ ಮಧ್ಯಂತರ ಅರ್ಜಿ ಸಲ್ಲಿಸಿದೆ.
ಇದನ್ನೂ ಓದಿ: ವಿದೇಶದಲ್ಲಿದ್ದ ವ್ಯಕ್ತಿಯ ಹೆಸರಿಗೆ ಅಕ್ರಮವಾಗಿ ಆಸ್ತಿ ವರ್ಗಾವಣೆಯಾದಲ್ಲಿ ಅವರ ಪಾತ್ರ ನಿರಾಕರಿಸಲಾಗದು: ಹೈಕೋರ್ಟ್