ಕನ್ನಡ ಚಿತ್ರರಂಗ ಕಂಡ ಅಪ್ರತಿಮ ನಿರ್ದೇಶಕ ಹಾಗೂ ಚಿತ್ರಬ್ರಹ್ಮ ಅಂತಾ ಕರೆಯಿಸಿಕೊಳ್ಳುವ ಏಕೈಕ ನಿರ್ದೇಶಕ ಪುಟ್ಟಣ್ಣ ಕಣಗಾಲ್. ಇದುವರೆಗೂ ಪುಟ್ಟಣ್ಣ ಕಣಗಾಲ್ ಬೆಳೆದ ಎತ್ತರಕ್ಕೆ ಕನ್ನಡದ ಯಾವ ನಿರ್ದೇಶಕರೂ ಏರಲು ಸಾಧ್ಯವಾಗಿಲ್ಲ. ಪ್ರತಿ ವರ್ಷ ರಾಜ್ಯ ಸರ್ಕಾರ ಕನ್ನಡ ಚಲನಚಿತ್ರ ನಿರ್ದೇಶಕರಿಗೆ ಎಸ್. ಆರ್. ಪುಟ್ಟಣ್ಣ ಕಣಗಾಲ್ ಹೆಸರಲ್ಲಿ ಕೊಡುತ್ತಿರುವ ಪ್ರಶಸ್ತಿಯೇ ಇದಕ್ಕೆ ಸಾಕ್ಷಿ.
ಪುಟ್ಟಣ್ಣ ಕಣಗಾಲ್ ಜೀವನ, ವೈವಿಧ್ಯಮಯ ಬದುಕು, ಅವರು ನಿರ್ದೇಶಿಸಿದ ಸಿನಿಮಾಗಳು ಇಂದಿಗೂ ಮಾದರಿ. ಇಂದಿನ ಹಾಗೂ ಮುಂದಿನ ಪೀಳಿಗೆಗೆ ಅವರು ಮಾಡಿರುವ ಚಿತ್ರಗಳು ಬುನಾದಿ ಎಂದೇ ಹೇಳಬಹುದು. ಇಂತಹ ಮಹಾನ್ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಅವರ ಜನ್ಮದಿನ ಇಂದು.
![ಕನ್ನಡದ 'ಚಿತ್ರಬ್ರಹ್ಮ' ನಿರ್ದೇಶಕ ಪುಟ್ಟಣ್ಣ ಕಣಗಾಲ್](https://etvbharatimages.akamaized.net/etvbharat/prod-images/01-12-2024/23016607_put3.jpg)
1933 ಡಿಸೆಂಬರ್ 1ರಂದು ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಕಣಗಾಲು ಗ್ರಾಮದಲ್ಲಿ ಪುಟ್ಟಣ್ಣ ಕಣಗಾಲ್ ಜನಿಸಿದರು. ಇವತ್ತು ಪುಟ್ಟಣ್ಣ ಕಣಗಾಲ್ ಬದುಕಿದ್ದರೆ 91ನೇ ವರ್ಷದ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದರು. ಈ ಹಿನ್ನೆಲೆಯಲ್ಲಿ ಕನ್ನಡ ನಿರ್ದೇಶಕ ಸಂಘದ ವತಿಯಿಂದ ಬೆಂಗಳೂರಿನ ಕೊಂಡಜ್ಜಿ ಸಭಾಭವನದಲ್ಲಿ ಪುಟ್ಟಣ್ಣ ಕಣಗಾಲ್ ಅವರ ಹುಟ್ಟಿದ ದಿನ ಸ್ಮರಣೆ ಮಾಡಲಾಗುತ್ತದೆ. ಕನ್ನಡ ಚಿತ್ರರಂಗದಲ್ಲಿ ನಿರ್ದೇಶಕರ ಸಂಘ ಕಟ್ಟಿದವರು ಇದೇ ಪುಟ್ಟಣ್ಣ ಕಣಗಾಲ್.
![ಕನ್ನಡದ 'ಚಿತ್ರಬ್ರಹ್ಮ' ಪುಟ್ಟಣ್ಣ ಕಣಗಾಲ್](https://etvbharatimages.akamaized.net/etvbharat/prod-images/01-12-2024/23016607_putt4.jpg)
ಚಿಕ್ಕಂದಿನಿಂದ ನಾಟಕ, ಸಿನಿಮಾಗಳ ಬಗ್ಗೆ ಆಸಕ್ತಿ ಇದ್ದ ಪುಟ್ಟಣ್ಣ ಕೊನೆಗೂ ಚಿತ್ರರಂಗವನ್ನು ಆಯ್ಕೆ ಮಾಡಿಕೊಂಡರು. ಪುಟ್ಟಣ್ಣ ಅವರು ಚಿತ್ರರಂಗಕ್ಕೆ ಬರುವ ಮುನ್ನ ನಾಟಕ ಕಂಪನಿಯಲ್ಲಿ ಡ್ರೈವರ್ ಆಗಿ ಕಾರ್ಯ ನಿರ್ವಹಿಸಿದ್ದರು. ತಮ್ಮ 31ನೇ ವಯಸ್ಸಿನಲ್ಲಿ ಗುರುಗಳಾದ ಬಿ. ಆರ್. ಪಂತುಲು ಅವರ ಬೆಂಬಲದಿಂದ ಮಲಯಾಳಂ ಭಾಷೆಯಲ್ಲಿ ಸ್ಕೂಲ್ ಮಾಸ್ಟರ್ ಚಿತ್ರವನ್ನು ನಿರ್ದೇಶಿಸಿದ್ದರು. ಇದೇ ಚಿತ್ರ ಮುಂದೆ ಕನ್ನಡದಲ್ಲಿ ಕೂಡಾ ತಯಾರಾಗಿ ಹೆಸರು ಗಳಿಸಿತು. ವಿಶೇಷ ಎಂದರೆ ಮಲಯಾಳಂ ಸ್ಕೂಲ್ ಮಾಸ್ಟರ್ ಚಿತ್ರವನ್ನು ಬಿ. ಆರ್. ಪಂತುಲು ನಿರ್ದೇಶಿಸಬೇಕಿತ್ತು. ಆದರೆ ಶಿಷ್ಯ ಪುಟ್ಟಣ್ಣ ಅವರಿಗೆ ಚಿತ್ರದ ಮೇಲಿದ್ದ ಪ್ರೀತಿ, ಚಾಕಚಕ್ಯತೆ, ಪರಿಶ್ರಮ ಕಂಡು ತಾವು ಮಾಡಬೇಕಿದ್ದ ಚಿತ್ರವನ್ನು ಅವರಿಗೆ ನೀಡಿದರು.
![ಕನ್ನಡದ 'ಚಿತ್ರಬ್ರಹ್ಮ' ಪುಟ್ಟಣ್ಣ ಕಣಗಾಲ್ ಡಾ. ರಾಜ್ಕುಮಾರ್ ಅವರ ಚಿತ್ರವೊಂದರ ನಿರ್ದೇಶನದಲ್ಲಿ......](https://etvbharatimages.akamaized.net/etvbharat/prod-images/01-12-2024/23016607_putt2.jpg)
3 ಮಲಯಾಳಂ ಚಿತ್ರಗಳು, 1 ತೆಲುಗು ಸಿನಿಮಾ ನಿರ್ದೇಶನ ಮಾಡಿದ ನಂತರ 1966ರಲ್ಲಿ ಬೆಳ್ಳಿ ಮೋಡ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಸ್ವತಂತ್ರ ನಿರ್ದೇಶಕರಾಗಿ ಪಾದಾರ್ಪಣೆ ಮಾಡಿದರು ಪುಟ್ಟಣ್ಣ. ಬೆಳ್ಳಿ ಪರದೆಯಲ್ಲಿ ಕೇವಲ ಸಿನಿಮಾ ನಾಯಕರು ಪಡೆಯುತ್ತಿದ್ದ ಶಿಳ್ಳೆ, ಚಪ್ಪಾಳೆ ನಂತರ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಅವರಿಗೂ ದೊರೆಯಿತು.
"ಮಲ್ಲಮ್ಮನ ಪವಾಡ, ಗೆಜ್ಜೆಪೂಜೆ, ಕಪ್ಪು ಬಿಳುಪು, ಕರುಳಿನ ಕರೆ, ಶರಪಂಜರ, ಸಾಕ್ಷಾತ್ಕಾರ, ನಾಗರಹಾವು, ಎಡಕಲು ಗುಡ್ಡದ ಮೇಲೆ, ಉಪಾಸನೆ, ಕಥಾ ಸಂಗಮ, ಬಿಳಿ ಹೆಂಡ್ತಿ, ಫಲಿತಾಂಶ, ಕಾಲೇಜು ರಂಗ, ರಂಗನಾಯಕಿ, ಮಾನಸ ಸರೋವರ, ಧರಣಿ ಮಂಡಲ ಮಧ್ಯದೊಳಗೆ, ಅಮೃತ ಘಳಿಗೆ, ಋಣ ಮುಕ್ತಳು" ಸೇರಿ ಸಾಕಷ್ಟು ಸಿನಿಮಾಗಳನ್ನು ನಿರ್ದೇಶಿಸಿದ ಪುಟ್ಟಣ್ಣ ಅವರ ಕಡೆಯ ಸಿನಿಮಾ 1984 ರಲ್ಲಿ ಬಂದ 'ಮಸಣದ ಹೂವು'.
![ಕನ್ನಡದ 'ಚಿತ್ರಬ್ರಹ್ಮ' ಪುಟ್ಟಣ್ಣ ಕಣಗಾಲ್](https://etvbharatimages.akamaized.net/etvbharat/prod-images/01-12-2024/23016607_puttanna.jpg)
ಪುಟ್ಟಣ್ಣ ಅವರು ಬಹಳ ವರ್ಷಗಳ ಹಿಂದೆ ನಿರ್ದೇಶನ ಮಾಡಿ ಅರ್ಧದಲ್ಲೇ ನಿಂತಿದ್ದ 'ಸಾವಿರ ಮೆಟ್ಟಿಲು' ಚಿತ್ರವನ್ನು ಅವರ ನಿಧನದ ನಂತರ ಕೆ.ಎಸ್.ಎಲ್. ಸ್ವಾಮಿ 2006 ರಲ್ಲಿ ಪೂರ್ತಿಗೊಳಿಸಿ ಬಿಡುಗಡೆ ಮಾಡಿದ್ದರು.
ಪುಟ್ಟಣ್ಣ ಕಣಗಾಲ್ ಅದೆಷ್ಟೋ ಪ್ರತಿಭೆಗಳನ್ನು ಹುಟ್ಟು ಹಾಕಿದ್ದಾರೆ. ಅವರಲ್ಲಿ ನಾಗರಹಾವು ಚಿತ್ರದಿಂದ ಡಾ. ವಿಷ್ಣುವರ್ಧನ್, ಡಾ. ಅಂಬರೀಶ್, ಶರಪಂಜರ ಕಲ್ಪನಾ, ಮಾನಸ ಸರೋವರ ಪದ್ಮಾವಾಸಂತಿ, ರಜನಿಕಾಂತ್, ಶ್ರೀನಾಥ್, ಜೈ ಜಗದೀಶ್, ರಾಮಕೃಷ್ಣ, ಅಪರ್ಣಾರಂತಹ ಪ್ರತಿಭಾವಂತಹ ಪ್ರತಿಭೆಗಳನ್ನು ಕನ್ನಡ ಚಿತ್ರರಂಗಕ್ಕೆ ಪರಿಚಯಿಸಿದ ಕೀರ್ತಿ ಪುಟ್ಟಣ್ಣ ಅವರಿಗೆ ಸಲ್ಲುತ್ತೆ.
ಕನ್ನಡದಲ್ಲಿ ಸುಮಾರು 24 ಚಿತ್ರಗಳನ್ನು ನಿರ್ದೇಶಿಸಿರುವ ಇವರ ಚಿತ್ರಗಳನ್ನು ಕೇವಲ ಮಹಿಳಾ ಕೇಂದ್ರಿತ ಚಿತ್ರಗಳು ಎಂದು ಕೆಲವರು ಟೀಕಿಸಿದಾಗ ಸ್ವತಃ ಪುಟ್ಟಣ್ಣನವರೇ ಇದನ್ನು ಅಲ್ಲಗೆಳೆದಿದ್ದರು. ಇವರ ಚಿತ್ರಗಳು ಕಲಾತ್ಮಕ ಚಿತ್ರಗಳು ಮತ್ತು ಕಮರ್ಷಿಯಲ್ ಚಿತ್ರಗಳಿಗೆ ಸೇತುವೆಯಂತಿದ್ದವು. ಸಾಮಾಜಿಕ ಸಂದೇಶವನ್ನು ಪಾತ್ರಗಳ ಗಟ್ಟಿಯಾದ ಅಭಿನಯ, ಪರಿಣಾಮಕಾರಿ ದೃಶ್ಯಗಳ ಮೂಲಕ ತೋರಿಸುತ್ತಿದ್ದರು. ಪುಟ್ಟಣ್ಣರಿಗಿಂತ ಹಿರಿಯರಾದ ತಮಿಳಿನ ಪ್ರಸಿದ್ಧ ನಿರ್ದೇಶಕ ಕೆ. ಬಾಲಚಂದರ್ ಇವರನ್ನು ಗುರುಗಳೆಂದು ಅಂತಾ ಕರೆದಿದ್ದು, ಪುಟ್ಟಣ್ಣ ಕಣಗಾಲ್ ಅವರ ಸಿನಿಮಾ ಶೈಲಿ ಹಾಗೂ ಸಾಮಾಜಿಕ ಬದ್ಧತೆಯನ್ನು ಎತ್ತಿ ಹಿಡಿಯುತ್ತೆ.
ಇದನ್ನೂ ಓದಿ: ಪೌರಾಣಿಕ ಚಿತ್ರಗಳೆಡೆ ಚಿತ್ರರಂಗದ ಗಮನ: ರಿಷಬ್ ಶೆಟ್ಟಿ 'ಜೈ ಹನುಮಾನ್' ಮೇಲಿದೆ ಬೆಟ್ಟದಷ್ಟು ನಿರೀಕ್ಷೆಗಳು