ಮಂಗಳೂರು: ಫೆಂಗಲ್ ಚಂಡಮಾರುತದ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದ್ದು, ಮೀನುಗಾರಿಕೆಗೆ ತೆರಳದಂತೆ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಸೂಚನೆ ನೀಡಿದ್ದಾರೆ. ಅಲ್ಲದೆ, ನಾಳೆ (ಡಿ.3) ಜಿಲ್ಲೆಯ ಎಲ್ಲಾ ಅಂಗನವಾಡಿ, ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಪ್ರಾಥಮಿಕ, ಪ್ರೌಢಶಾಲೆ, ಪದವಿ ಪೂರ್ವ ಕಾಲೇಜುಗಳಿಗೆ (12ನೇ ತರಗತಿವರೆಗೆ) ರಜೆ ಘೋಷಿಸಲಾಗಿದೆ.
ಇಂದು, ನಾಳೆ ಆರೆಂಜ್ ಅಲರ್ಟ್: ಭಾರತೀಯ ಹವಾಮಾನ ಇಲಾಖೆಯ ಮುನ್ಸೂಚನೆಯಂತೆ, ಬಂಗಾಳ ಕೊಲ್ಲಿಯಲ್ಲಿ ಫೆಂಗಲ್ ಚಂಡಮಾರುತ ಉಂಟಾಗಿರುವ ಪರಿಣಾಮ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಸಾಧಾರಣದಿಂದ ಭಾರೀ ಮಳೆಯಾಗುವ ಸಾಧ್ಯತೆಗಳಿವೆ. ಇಂದು ಮತ್ತು ನಾಳೆ ಆರೆಂಜ್ ಅಲರ್ಟ್ ಘೋಷಣೆಯಾಗಿದ್ದು, ಜನರು ಮುಂಜಾಗೃತಾ ಕ್ರಮವಾಗಿ ಜಿಲ್ಲಾಡಳಿತದ ಸೂಚನೆ ಪಾಲಿಸಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಮೀನುಗಾರರು, ಸಾರ್ವಜನಿಕರಿಗೆ ಸೂಚನೆ: ಮೀನುಗಾರಿಕೆ ನಡೆಸಲು ಸಮುದ್ರಕ್ಕೆ ತೆರಳಬಾರದು ಹಾಗೂ ಮೀನುಗಾರಿಕೆಗೆ ತೆರಳಿರುವ ಎಲ್ಲರೂ ಕೂಡಲೇ ದಡ ಸೇರಬೇಕು. ನೀರು ಇರುವ ತಗ್ಗು ಪ್ರದೇಶ, ಕೆರೆ, ನದಿ ತೀರ ಸಮುದ್ರ ತೀರಕ್ಕೆ ಸಾರ್ವಜನಿಕರು, ಪ್ರವಾಸಿಗರು ತೆರಳದೆ ಜಾಗ್ರತೆ ವಹಿಸಬೇಕು. ಪ್ರಾಕೃತಿಕ ವಿಕೋಪದಿಂದ ಯಾವುದೇ ರೀತಿಯ ಘಟನೆಗಳು ಸಂಭವಿಸಿದಲ್ಲಿ ಅಥವಾ ಸಂಭವಿಸಬಹುದಾದ ಸೂಚನೆ ಇದ್ದರೆ ಸಾರ್ವಜನಿಕರು ಕೂಡಲೇ ಸಂಬಂಧಪಟ್ಟ ಪಂಚಾಯತ್/ನಗರ ಸ್ಥಳೀಯ ಸಂಸ್ಥೆಗಳಿಗೆ ಮಾಹಿತಿ ನೀಡಬೇಕು. ಪ್ರಾಕೃತಿಕ ವಿಕೋಪ ಸಂಬಂಧಿಸಿದ ಯಾವುದೇ ಸಮಸ್ಯೆಗಳಿಗೆ 1077 ಅಥವಾ 0824-2442590 ದೂರವಾಣಿಯನ್ನು ಸಂಪರ್ಕಿಸಿ ಎಂದು ಜಿಲ್ಲಾಧಿಕಾರಿ ಸೂಚಿಸಿದ್ದಾರೆ.
ಶಾಲೆ, ಕಾಲೇಜಿಗೆ ರಜೆ: ಆರೆಂಜ್ ಅಲರ್ಟ್ ಹಿನ್ನೆಲೆಯಲ್ಲಿ ನಾಳೆ (ಡಿ.3) ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಅಂಗನವಾಡಿ, ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಪ್ರಾಥಮಿಕ, ಪ್ರೌಢಶಾಲೆ, ಪದವಿ ಪೂರ್ವ ಕಾಲೇಜುಗಳಿಗೆ (12ನೇ ತರಗತಿವರೆಗೆ) ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ. ದುರ್ಬಲ/ಶಿಥಿಲ ಕಟ್ಟಡಗಳು ಇದ್ದಲ್ಲಿ ಅಂತಹ ಕಟ್ಟಡಗಳನ್ನು ಪಾಠ, ಪ್ರವಚನಗಳಿಗೆ ಬಳಸುವಂತಿಲ್ಲ. ಈ ನಿಟ್ಟಿನಲ್ಲಿ ಶಾಲಾ ಕಾಲೇಜುಗಳ ಮುಖ್ಯಸ್ಥರು ಕಟ್ಟಡಗಳ ಸುಸ್ಥಿತಿಯ ಬಗ್ಗೆ ಗಮನಹರಿಸಬೇಕು. ಜಿಲ್ಲೆಯಲ್ಲಿ ವಿಪರೀತ ಮಳೆ ಸುರಿಯುತ್ತಿರುವುದರಿಂದ ಸಾರ್ವಜನಿಕರು ನದಿಗಳ/ತೋಡುಗಳ ಮತ್ತು ವಿದ್ಯುತ್ ಕಂಬ/ತಂತಿ ಸಮೀಪ ಹೋಗದಂತೆ ಎಚ್ಚರ ವಹಿಸಬೇಕು ಎಂದು ಸೂಚನೆ ನೀಡಿದ್ದಾರೆ.
ಇದನ್ನೂ ಓದಿ: ಮೈಸೂರು, ಮಂಡ್ಯ, ಚಾಮರಾಜನಗರ, ರಾಮನಗರ ಜಿಲ್ಲೆಗಳಲ್ಲಿ ಮಳೆ: ಶಾಲಾ - ಕಾಲೇಜುಗಳಿಗೆ ರಜೆ ಘೋಷಣೆ
ಶಿವಮೊಗ್ಗದಲ್ಲೂ ಮಳೆ: ಫೆಂಗಲ್ ಚಂಡಮಾರುತದ ಪರಿಣಾಮ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದಲ್ಲಿಯೂ ಕಳೆದ ಎರಡು ದಿನಗಳಿಂದ ಮೋಡ ಕವಿದ ವಾತಾವರಣ ಇದ್ದು, ಇಂದು ತುಂತುರು ಮಳೆಯಾಗುತ್ತಿದೆ. ಬೆಳಗ್ಗೆಯಿಂದ ಮಳೆ ಬರುವ ವಾತಾವರಣ ಇದ್ದು, ಮಧ್ಯಾಹ್ನ ಸುರಿಯಲಾರಂಭಿಸಿದೆ. ಇದರಿಂದ ಚಳಿಯ ವಾತಾವರಣ ಉಂಟಾಗಿದೆ. ಚಂಡಮಾರುತದಿಂದ ಇನ್ನೂ ನಾಲ್ಕೈದು ದಿನಗಳ ಇದೇ ರೀತಿಯ ವಾತಾವರಣ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಭತ್ತ ಕಟಾವಿಗೆ ಅಡ್ಡಿಯಾದ ಚಂಡಮಾರುತ: ಮಲೆನಾಡು ಭಾಗಗಳಾದ ಹೊಸನಗರ, ಸಾಗರ, ಸೊರಬ ತಾಲೂಕಿನ ಕೆಲ ಭಾಗಗಳಲ್ಲಿ ಮುಂಗಾರು ಹಂಗಾಮಿನಲ್ಲಿ ನಾಟಿ ಮಾಡಿದ್ದ ಭತ್ತ ಕಟಾವಿಗೆ ಬಂದಿದೆ. ಆದರೆ ಮಳೆಯಿಂದ ಭತ್ತ ಕಟಾವು ಮಾಡಬೇಕೋ, ಬೇಡವೋ ಎಂಬ ದ್ವಂದ್ವದಲ್ಲಿ ರೈತರಿದ್ದಾರೆ. ಮಳೆಯ ವಾತಾವರಣದಿಂದ ಭತ್ತ ಕಟಾವು ಮಾಡಿದರೆ, ಬಳಿಕ ಭತ್ತದ ಹುಲ್ಲು ಒಣಗದೆ, ಭತ್ತವೂ ಬೂಸ್ಟ್ ಬಂದು ಜಾನುವಾರುಗಳೂ ತಿನ್ನುವುದಿಲ್ಲ. ಇದರಿಂದ ರೈತರು ಭತ್ತದ ಕಟಾವಿಗೆ ಹಿಂದೇಟು ಹಾಕುವಂತಾಗಿದೆ. ಮಳೆಯಿಂದ ಅಡಕೆ ಬೆಳೆಗಾರರೂ ಸಹ ಭೀತಿಯಲ್ಲಿದ್ದಾರೆ.
ಇದನ್ನೂ ಓದಿ: ಬೆಂಗಳೂರಲ್ಲಿ ಜಿಟಿ ಜಿಟಿ ಮಳೆ: ಮನೆ ಕುಸಿತ, ವೃದ್ಧ ದಂಪತಿ ರಕ್ಷಣೆ