ಕರ್ನಾಟಕ

karnataka

ETV Bharat / state

ಸಿ.ಟಿ.ರವಿ ಪದ ಪ್ರಯೋಗ ಖಂಡಿಸಿ ಮಹಿಳಾ ಕಾಂಗ್ರೆಸ್‌ ಕಾರ್ಯಕರ್ತರಿಂದ ಮಲ್ಲೇಶ್ವರ ಬಿಜೆಪಿ ಕಚೇರಿಗೆ ಮುತ್ತಿಗೆ ಯತ್ನ - CONGRESS FEMALE WORKERS PROTEST

ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್​ ಬಗ್ಗೆ ಆಕ್ಷೇಪಾರ್ಹ ಪದಬಳಕೆ ಮಾಡಿರುವ ಸಿ.ಟಿ.ರವಿ ಅವರನ್ನು ಪಕ್ಷದಿಂದ ವಜಾಗೊಳಿಸುವಂತೆ ಕಾಂಗ್ರೆಸ್​ ಮಹಿಳಾ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

Congress Female workers protest
ಕಾಂಗ್ರೆಸ್​ ಮಹಿಳಾ ಕಾರ್ಯಕರ್ತರಿಂದ ಪ್ರತಿಭಟನೆ (ETV Bharat)

By ETV Bharat Karnataka Team

Published : Dec 20, 2024, 4:03 PM IST

Updated : Dec 20, 2024, 7:24 PM IST

ಬೆಂಗಳೂರು: ಸಿ.ಟಿ.ರವಿ ಪದ ಪ್ರಯೋಗ ಖಂಡಿಸಿ ಕರ್ನಾಟಕ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸೌಮ್ಯಾ ರೆಡ್ಡಿ ನೇತೃತ್ವದಲ್ಲಿ ಪಕ್ಷದ ಮಹಿಳಾ ಕಾರ್ಯಕರ್ತರು ಇಂದು ಮಲ್ಲೇಶ್ವರಂ ಬಿಜೆಪಿ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದರು.

ಸಿ‌.ಟಿ.ರವಿ ವಿರುದ್ಧ ಧಿಕ್ಕಾರ ಕೂಗಿದ ಕಾರ್ಯಕರ್ತರು, ಪಕ್ಷದಿಂದ ಅವರನ್ನು ವಜಾ ಮಾಡುವಂತೆ ಘೋಷಣೆ ಕೂಗಿದರು. ಸಿ.ಟಿ.ರವಿ ವಿರುದ್ಧ ಪೋಸ್ಟರ್ ಪ್ರದರ್ಶಿಸಿ ಬಿಜೆಪಿ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದರು. ಕಚೇರಿ ಬಳಿ ಬ್ಯಾರಿಕೇಡ್ ಹಾಕಿದ್ದ ಪೊಲೀಸರು ಪ್ರತಿಭಟನಾಕಾರರನ್ನು ತಡೆದರು.

ಕಾಂಗ್ರೆಸ್​ ಮಹಿಳಾ ಕಾರ್ಯಕರ್ತರಿಂದ ಪ್ರತಿಭಟನೆ (ETV Bharat)

ಬಳಿಕ ಸೌಮ್ಯಾ ರೆಡ್ಡಿ ಸೇರಿ ಮಹಿಳಾ ಕಾರ್ಯಕರ್ತೆಯರನ್ನು ವಶಕ್ಕೆ ಪಡೆದುಕೊಂಡರು. ಇದೇ ವೇಳೆ ಎನ್ಎಸ್​ಯುಐ ಕಾರ್ಯಕರ್ತರೂ ಬಿಜೆಪಿ ಕಚೇರಿ ಮುತ್ತಿಗೆಗೆ ಯತ್ನಿಸಿದರು. ಪೊಲೀಸರು ತಡೆದು, ಕಾರ್ಯಕರ್ತರನ್ನು ವಶಕ್ಕೆ ಪಡೆದರು. ಈ ವೇಳೆ ಪ್ರತಿಭಟನಾಕಾರರು ರಸ್ತೆಯಲ್ಲಿ ಬಿದ್ದು ಪ್ರತಿಭಟನೆ ನಡೆಸಿದರು.

ಸೌಮ್ಯಾ ರೆಡ್ಡಿ ಪ್ರತಿಕ್ರಿಯಿಸಿ, "ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಕುರಿತು ಪರಿಷತ್ ಸದಸ್ಯ ಸಿ.ಟಿ.ರವಿಯವರು ಬಳಸಿದ ಪದ ಅತ್ಯಂತ ಹೀನ ಹಾಗು ಖಂಡನಾರ್ಹ. ಒಬ್ಬ ಮಹಿಳೆಯ ಕುರಿತು ಇಂತಹ ಮಾತು ಅವರ ನೀಚತನದ ಪರಮಾವಧಿ. ತಮ್ಮನ್ನು ತಾವು ಸಂಸ್ಕೃತಿಯ ರಕ್ಷಕರೆಂದು ಬಿಂಬಿಸಿಕೊಳ್ಳುವ ಬಿಜೆಪಿ ನಾಯಕರು ಬಾಯಿ ಬಿಟ್ಟರೆ ಸಾಕು, ಅವರ ಸಂಸ್ಕೃತಿ ತಿಳಿಯುತ್ತದೆ. ಅಂಬೇಡ್ಕರ್​ ಕುರಿತಾಗಿಯೇ ಹಗುರವಾಗಿ ಮಾತನಾಡುವ ಬಿಜೆಪಿಗರು ಮಹಿಳೆಯರ ಬಗ್ಗೆ ಇಂತಹ ಅವಾಚ್ಯ ಪದ ಬಳಸುವುದರಲ್ಲಿ ಯಾವುದೇ ಆಶ್ಚರ್ಯವಿಲ್ಲ" ಎಂದು ಕಿಡಿಕಾರಿದರು.

"ಸದನದಂತಹ ಸ್ಥಳದಲ್ಲಿಯೇ ಮಹಿಳೆಯರನ್ನು ಅವಮಾನಿಸುವ ಇವರು ಇನ್ನು ರಾಜ್ಯದ ದುರ್ಬಲರು, ಶೋಷಿತರು, ಮಹಿಳೆಯರನ್ನು ಹೇಗೆ ನಡೆಸಿಕೊಳ್ಳಬಹುದು. ಸಿ.ಟಿ.ರವಿಯವರು ಈ ಕೂಡಲೇ ರಾಜ್ಯದ ಮಹಿಳೆಯರ ಕ್ಷಮೆ ಕೇಳಬೇಕು. ಬಿಜೆಪಿ ಮಹಿಳೆಯರ ಪರ ಕಾಳಜಿ ಹೊಂದಿದ್ದರೆ ಈ ಕೂಡಲೇ ಸೂಕ್ತ ಕ್ರಮ ಕೈಗೊಳ್ಳಬೇಕು" ಎಂದು ಆಗ್ರಹಿಸಿದರು.

ಸಿ.ಟಿ.ರವಿ ವಿರುದ್ಧ ಕಾಂಗ್ರೆಸ್ ನಿಯೋಗದಿಂದ ರಾಜ್ಯ ಮಹಿಳಾ ಆಯೋಗಕ್ಕೆ ದೂರು:ಸಿ.ಟಿ.ರವಿ ವಿರುದ್ಧ ಕೆಪಿಸಿಸಿ ನಿಯೋಗ ಕರ್ನಾಟಕ ರಾಜ್ಯ ಮಹಿಳಾ ಆಯೋಗ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ ಅವರಿಗೆ ದೂರು ನೀಡಿದೆ.

ಸಿ.ಟಿ.ರವಿ ವಿರುದ್ಧ ಕಾಂಗ್ರೆಸ್ ನಿಯೋಗದಿಂದ ರಾಜ್ಯ ಮಹಿಳಾ ಆಯೋಗಕ್ಕೆ ದೂರು (ETV Bharat)

ಬೆಳಗಾವಿ ಅಧಿವೇಶನದ ವೇಳೆ ಪರಿಷತ್​ನಲ್ಲಿ ಬಾಬಾ ಸಾಹೇಬ್ ಅಂಬೇಡ್ಕ‌ರ್ ಪರವಾಗಿ ಧ್ವನಿಯೆತ್ತಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌ ವಿರುದ್ಧ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಅತ್ಯಂತ ಕೆಟ್ಟ ಪದ ಪ್ರಯೋಗ ಮಾಡಿರುವ ಹಿನ್ನೆಲೆಯಲ್ಲಿ ಕಾನೂನು ಕ್ರಮ‌ ಕೈಗೊಳ್ಳುವಂತೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಸ್.ಮನೋಹರ್ ನೇತೃತ್ವದ ನಿಯೋಗ ಆಯೋಗಕ್ಕೆ ದೂರು ನೀಡಿದೆ.

ನೇರವಾಗಿ ಕೆಟ್ಟ ಪದ ಹೇಳಿ ಲಕ್ಷ್ಮಿ ಹೆಬ್ಬಾಳ್ಕರ್ ಅವರನ್ನು ಅಪಮಾನಿಸಿದ್ದಾರೆ. ಅವರ ಹೇಳಿಕೆ ಮಹಿಳೆಯರ ವ್ಯಕ್ತಿತ್ವಕ್ಕೆ ಅಗೌರವ ತಂದಿದೆ. ಅಪಮಾನಗೊಳಿಸಿದೆ. ಇಂತಹ ಹೇಳಿಕೆಗಳು ಸಮಾಜದಲ್ಲಿನ ಹೆಣ್ಣು ಮಕ್ಕಳ ಬಾಳಿಗೆ ಅತ್ಯಂತ ಕೆಟ್ಟ ಪರಿಣಾಮ ಉಂಟು ಮಾಡುತ್ತದೆ ಎಂಬುದನ್ನು ಅರಿತಿದ್ದರೂ ಸಿ.ಟಿ.ರವಿ ಮಾಡಿರುವ ಈ ನೇರ ಹೇಳಿಕೆಯಿಂದ ಸಮಾಜ ತಲೆ ತಗ್ಗಿಸುವಂತೆ ಆಗಿದೆ. ಆದ್ದರಿಂದ ಕರ್ನಾಟಕ ರಾಜ್ಯ ಮಹಿಳಾ ಆಯೋಗ ಈ ಕೂಡಲೇ ಪ್ರಕರಣ ದಾಖಲಿಸಿಕೊಂಡು ಸಿ.ಟಿ.ರವಿ ವಿರುದ್ಧ ಅತ್ಯಂತ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ದೂರು ಸಲ್ಲಿಸಿದ್ದಾರೆ.

ಇದನ್ನೂ ಓದಿ:ಸಿ ಟಿ ರವಿ ಕೀಳುಭಾಷೆ ಬಳಸಿದ್ದನ್ನು ಸ್ಥಳದಲ್ಲಿದ್ದವರು ಕೇಳಿಸಿಕೊಂಡಿದ್ದಾರೆ: ಸಿಎಂ ಸಿದ್ದರಾಮಯ್ಯ

Last Updated : Dec 20, 2024, 7:24 PM IST

ABOUT THE AUTHOR

...view details