ದಾವಣಗೆರೆ: ದಾವಣಗೆರೆ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ.ಪ್ರಭಾ ಮಲ್ಲಿಕಾರ್ಜುನ್ ಅವರು ಇಂದು ತಮ್ಮ ಉಮೇದುವಾರಿಕೆ ಸಲ್ಲಿಸಿದರು. ಇದೇ ವೇಳೆ, ಅಫಿಡವಿಟ್‌ನಲ್ಲಿ ತಾವು 44.43 ಕೋಟಿ ರೂ ಮೌಲ್ಯದ ಆಸ್ತಿ ಹೊಂದಿರುವುದಾಗಿ ಘೋಷಿಸಿದ್ದಾರೆ. ಡಾ.ಪ್ರಭಾ ಮಲ್ಲಿಕಾರ್ಜುನ್ ಅವರು ಗಣಿ, ಭೂವಿಜ್ಞಾನ ಮತ್ತು ತೋಟಗಾರಿಕೆ ಇಲಾಖೆ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಅವರ ಪತ್ನಿ.
ಇವರು ತಮ್ಮ ಬಳಿ ಒಟ್ಟು 97.28 ಲಕ್ಷ ಸಾಲ ಇರುವುದಾಗಿ ವಿವರ ನೀಡಿದ್ದಾರೆ. 67,566 ರೂಪಾಯಿ ನಗದು, ವಿವಿಧ ಬ್ಯಾಂಕ್‌ಗಳಲ್ಲಿ 13,76,105 ಠೇವಣಿ ಹೊಂದಿದ್ದಾರೆ. ಷೇರು, ಡಿಬೆಂಚರ್ ಇತರೆಡೆ 2,65,20,500 ರೂಪಾಯಿ ಬಂಡವಾಳ ಹೂಡಿದ್ದಾರೆ.
1.80 ಕೋಟಿ ರೂಪಾಯಿ ಬೆಲೆಬಾಳುವ 3.189.528 ಗ್ರಾಂ ಚಿನ್ನ, ಇತರೆ 5.976 ಇತರೆ ಗ್ರಾಂ ಆಭರಣಗಳಿವೆ. ಬೆಳ್ಳಿಯ ಆಭರಣ ಇಲ್ಲ. 10,23,009 ರೂಪಾಯಿ ಮೌಲ್ಯದ ಇತರೆ ಆಸ್ತಿಗಳು ಇವರ ಹೆಸರಲ್ಲಿವೆ.
1.54 ಕೋಟಿ ಮೌಲ್ಯದ 47.11 ಎಕರೆ ಕೃಷಿ ಭೂಮಿ ಇದೆ. 16.1 ಲಕ್ಷ ಮೌಲ್ಯದ 11,050 ಚದರ ಅಡಿಯಷ್ಟು ಕೃಷಿಯೇತರ ಭೂಮಿ ಇದೆ. 21.4 ಲಕ್ಷ ಮೌಲ್ಯದ 34,483 ಚದರ ಅಡಿ ಮನೆಯ ಜತೆಗೆ 2500 ಚದರಡಿ ಬಿಲ್ಡ್ ಏರಿಯಾ ಇದೆ. ವೈಯಕ್ತಿಕವಾಗಿ ಯಾವುದೇ ಆಸ್ತಿ ಇಲ್ಲ ಎಂದು ಪ್ರಮಾಣಪತ್ರದಲ್ಲಿ ತಿಳಿಸಿದ್ದಾರೆ. ಪತಿ ಎಸ್.ಎಸ್.ಮಲ್ಲಿಕಾರ್ಜುನ್ 194.88 ಕೋಟಿ ರೂ. ಮೌಲ್ಯದ ಆಸ್ತಿಗೆ ಮಾಲೀಕರು. ಪುತ್ರ ಸಮರ್ಥ ಮಲ್ಲಿಕಾರ್ಜುನ್ 34.70 ಲಕ್ಷ ರೂ.ಗಳ ಚರಾಸ್ತಿ ಹೊಂದಿದ್ದಾರೆ.
ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಜಿ.ಬಿ.ವಿನಯ್ ಕುಮಾರ್ ಆಸ್ತಿ ವಿವರ:ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಜಿ.ಬಿ.ವಿನಯ್ ಕುಮಾರ್ ಆಸ್ತಿ ಮೌಲ್ಯ 56.21 ಕೋಟಿ ರೂ. ಎಂದು ನಾಮಪತ್ರದ ವೇಳೆ ನೀಡಿರುವ ಪ್ರಮಾಣಪತ್ರದಲ್ಲಿ ತಿಳಿಸಿದ್ದಾರೆ.