ಕರ್ನಾಟಕ

karnataka

ETV Bharat / state

ಮಲ್ಲಿಕಾರ್ಜುನ ಖರ್ಗೆ ತವರು ಕ್ಷೇತ್ರದಲ್ಲಿ ಬೃಹತ್​ ಕಾಂಗ್ರೆಸ್ ಸಮಾವೇಶ: ಬಿಜೆಪಿ ನಾಯಕರಿಗೆ ಟಕ್ಕರ್​ - congress convention

ಕಲ್ಯಾಣ ಕರ್ನಾಟಕ ಕಲಬುರಗಿಯಲ್ಲಿ ಲೋಕಸಭಾ ಚುನಾವಣೆ ಹಿನ್ನೆಲೆ ಕಾಂಗ್ರೆಸ್ ಬೃಹತ್ ಪ್ರಚಾರ ಸಮಾವೇಶ ನಡೆಸಿದೆ.

ಮಲ್ಲಿಕಾರ್ಜುನ ಖರ್ಗೆ
ಮಲ್ಲಿಕಾರ್ಜುನ ಖರ್ಗೆ

By ETV Bharat Karnataka Team

Published : Apr 13, 2024, 7:44 AM IST

Updated : Apr 13, 2024, 10:57 AM IST

ಕಲಬುರಗಿ : ಲೋಕಸಭಾ ಚುನಾವಣೆ ಹೊಸ್ತಿಲಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತವರು ಕ್ಷೇತ್ರದಲ್ಲಿ ಕಾಂಗ್ರೆಸ್ ರಣಕಹಳೆ ಮೊಳಗಿಸಿದೆ. ಕಲ್ಯಾಣ ಕರ್ನಾಟಕವನ್ನೇ ಟಾರ್ಗೆಟ್ ಮಾಡಿ ಚುನಾವಣಾ ಪ್ರಚಾರ ಆರಂಭಿಸಿದ್ದ ಪ್ರಧಾನಿ ನರೇಂದ್ರ ಮೋದಿಗೆ ಟಕ್ಕರ್ ಕೊಡಲು ಶುಕ್ರವಾರ ಕಲಬುರಗಿ ನಗರದ ಎನ್‌ವಿ ಕಾಲೇಜು ಮೈದಾನದಲ್ಲಿ ಬೃಹತ್ ಕಾಂಗ್ರೆಸ್ ಪ್ರಚಾರ ಸಮಾವೇಶ ಆಯೋಜನೆ ಮಾಡಿತ್ತು.

ಸಮಾವೇಶವನ್ನು ಜ್ಯೋತಿ ಬೆಳಗಿಸುವುದರ ಮೂಲಕ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಉದ್ಘಾಟಿಸಿದರು. ಈ ವೇಳೆ ವೇದಿಕೆ ಮೇಲೆ ಮಾತಾನಾಡಿದ ಮಲ್ಲಿಕಾರ್ಜುನ ಖರ್ಗೆ, ಪ್ರಧಾನಿ ನರೇಂದ್ರ ಮೋದಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಹತ್ತು ವರ್ಷ ಆಡಳಿತ ಮಾಡಿದ ಪ್ರಧಾನಿ ಮೋದಿ ಈ ಭಾಗಕ್ಕೆ ಒಂದು ಕೊಡುಗೆಯನ್ನೂ ನೀಡಿಲ್ಲ. ನಾನು ಮಂತ್ರಿಯಾಗಿದ್ದಾಗ ಕಲ್ಯಾಣ ಕರ್ನಾಟಕ ಭಾಗ ಸೇರಿದಂತೆ ರಾಜ್ಯಕ್ಕೆ ಸಾಕಷ್ಟು ಕೊಡುಗೆಗಳನ್ನು ಕೊಟ್ಟಿದ್ದೇನೆ.

ಜೊತೆಗೆ ಇಎಸ್‍ಐ ಆಸ್ಪತ್ರೆ ಕಟ್ಟಿದ್ದೇವೆ. ಅಲ್ಲಿ ಏಮ್ಸ್ ನಿರ್ಮಾಣ ಮಾಡಲು ಮೋದಿ ಅವರಿಗೆ ಮನವಿ ಮಾಡಿದ್ದೆ. ಆದರೆ, ನನ್ನ ಮೇಲೆ ಏನು ಸಿಟ್ಟು ಗೊತ್ತಿಲ್ಲ ನಮ್ಮ ಮನವಿಯನ್ನು ಪುರಸ್ಕರಿಸಲಿಲ್ಲ. ನನ್ನ ಅವಧಿಯಲ್ಲಿ ಮಂಜೂರಾಗಿದ್ದ ರೇಲ್ವೆ ವಲಯ ಯೋಜನೆ ವಾಪಸ್ ಹೋಗಿದೆ. ನಾನು ನನ್ನ ಅವಧಿಯಲ್ಲಿ ಮಾಡಿದ ಅಭಿವೃದ್ದಿ ಕಾರ್ಯಗಳಲ್ಲಿ ಶೇಕಡಾ 10ರಷ್ಟು ಅಭಿವೃದ್ಧಿ ಮಾಡಿದ್ದರೆ ತೋರಿಸಲಿ ಆಗ ನಾನು ಶಹಬ್ಬಾಶ್ ಎನ್ನುತ್ತೇನೆ ಎಂದು ಸವಾಲು ಹಾಕಿದರು.

ನಮ್ಮ ಗ್ಯಾರಂಟಿ ಯೋಜನೆಗಳನ್ನು ಬಿಜೆಪಿ ಮೋದಿ ಗ್ಯಾರಂಟಿ ಯೋಜನೆಗಳು ಎಂದು ಹೇಳಿಕೊಳ್ಳುತ್ತಿದೆ. ನಮ್ಮದು ಇನ್ನೂ 25 ಗ್ಯಾರಂಟಿಗಳಿದ್ದು, ಅಧಿಕಾರಿಕ್ಕೆ ಬಂದ ನಂತರ ಅದನ್ನು ಮಾಡಿ ತೋರಿಸುತ್ತೇವೆ. ಖರ್ಗೆ ಒಳ್ಳೆ‌ ಕೆಲಸ ಮಾಡಿದ್ದಾರೆಂದು ಹೇಳುತ್ತಾರೆ. ಆದರೇ ಮತಗಟ್ಟೆಗೆ ಹೋದಾಗ ಅವರಿಗೆ ಏನು ಅನಿಸುತ್ತೋ ಗೋತ್ತಿಲ್ಲ. ನಮ್ಮನ್ನೆ ಮರೆತು ಬಿಡುತ್ತಾರೆ. ನಾನಿನ್ನು ಸತ್ತಿಲ್ಲ, ಬದುಕಿದ್ದೇನೆ. ಕೆಲಸ ಮಾಡಲು ಬದ್ಧನಾಗಿದ್ದೇನೆಂದು ಖರ್ಗೆ ಭಾವುಕರಾದರು.

ಕಾಂಗ್ರೆಸ್ ಅಭ್ಯರ್ಥಿ ರಾಧಾಕೃಷ್ಣ ದೊಡ್ಡಮನಿ ಅವರನ್ನು ಗೆಲ್ಲಿಸಿ, ಮುಂದಿನ ಐದು ವರ್ಷಗಳಲ್ಲಿ ಈ ಭಾಗವನ್ನು ನಿಜವಾದ ಕಲ್ಯಾಣ ಕರ್ನಾಟಕವನ್ನಾಗಿ ಮಾಡಿ ತೋರಿಸುತ್ತೇನೆ. ಈ ಚುನಾವಣೆ ಕೇವಲ ರಾಧಾಕೃಷ್ಣ ಅಥವಾ ಕಾಂಗ್ರೆಸ್ ಚುನಾವಣೆಯಲ್ಲ. ಬದಲಿಗೆ ದೇಶದ ಸಂವಿಧಾನ ಪ್ರಜಾಸತ್ತೆ ಉಳಿಸುವ ಚುನಾವಣೆಯಾಗಲಿದೆ. ಪ್ರತಿಯೊಂದು ಸಂಸ್ಥೆಗಳಲ್ಲಿ ಆರ್​ಎಸ್‍ಎಸ್ ಹುಡುಗರನ್ನು ಸೇರಿಸುತ್ತಿದ್ದಾರೆ. ಹಾಗಾಗಿ ಪ್ರಜಾತಂತ್ರ ಉಳಿಯಬೇಕು ಹಾಗೂ ಈ ಭಾಗ ಬೆಳೆಯಬೇಕು ಎನ್ನುವ ಇಚ್ಛೆ ಇದ್ದರೆ ಕಾಂಗ್ರೆಸ್‍ಗೆ ಮತ ನೀಡಿ ಎಂದು ಕೋರಿದರು.

ಮೋದಿ-ಶಾ ಗೆ ಖರ್ಗೆ ತೀರುಗೇಟು : ಬಿಜೆಪಿ ಬಳಿ ವಾಷಿಂಗ್ ಮಷಿನ್ ಇದೆ. ಯಾರನ್ನೂ ಭ್ರಷ್ಟಾಚಾರಿಗಳು ಎಂದು ಹೇಳಿ ಜೈಲಿಗೆ ಹಾಕುತ್ತಾರೋ ಅಂತವರನ್ನೇ ಆ ಮಷಿನ್ ಮೂಲಕ ಪಕ್ಷಕ್ಕೆ ಸೇರಿಸಿಕೊಂಡು ಅವರನ್ನು ಒಳ್ಳೆಯವರು ಎಂದು ಬಿಂಬಿಸುತ್ತಾರೆ. ಭ್ರಷ್ಟಾಚಾರಿಗಳನ್ನು ಬಿಡುವುದಿಲ್ಲವೆಂದು ಮೋದಿ ಹಾಗೂ ಅಮಿತ್ ಶಾ ಹೇಳುತ್ತಾರೆ. ಬಿಡುವ ಮಾತಿರಲಿ ನಿಮ್ಮ ಪಕ್ಕದಲ್ಲೇ ಕೂಡಿಸಿಕೊಂಡಿದ್ದೀರಲ್ಲ ಎಂದು ತಿರುಗೇಟು ನೀಡಿದರು.

ಡಿ.ಕೆ ಶಿವಕುಮಾರ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಚುನಾವಣೆ ಅಧಿಸೂಚನೆಗೂ ಮುನ್ನವೇ ಕ್ಷೇತ್ರಕ್ಕೆ ಬಂದು ದ್ವೇಷದ ಪ್ರಚಾರ ಆರಂಭಿಸಿದ್ದಾರೆ ಎಂದು ಗುಡುಗಿದರು. ಹಿರಿಯ ನಾಯಕ ಮಲ್ಲಿಕಾರ್ಜುನ್ ಖರ್ಗೆ ಅವರು ಇದೂವರೆಗೆ ಕೈಗೊಂಡ ಅಭಿವೃದ್ದಿ ಕಾರ್ಯಗಳ ಅದರಲ್ಲೂ ಆರ್ಟಿಕಲ್ 371ಜೆ ಜಾರಿಗೆ ತಂದಿರುವುದಕ್ಕೆ ಪ್ರತಿಯಾಗಿ ನೀವೆಲ್ಲ ರಾಧಾಕೃಷ್ಣ ಅವರನ್ನು ಗೆಲ್ಲಿಸುವ ಮೂಲಕ ಮೋದಿ ಅವರಿಗೆ ಉತ್ತರ ನೀಡಬೇಕು. ಈಗ ಕೇಂದ್ರದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಪ್ರತಿ ಮಹಿಳೆಯರಿಗೆ ವಾರ್ಷಿಕ ಒಂದು ಲಕ್ಷ ರೂ.ಗಳ ಅನುದಾನ ನೀಡಲಾಗುವುದು. ಶ್ರಮಿಕರಿಗಾಗಿ ಪ್ರತಿದಿನ 400 ರೂ.ಗಳ ರಾಷ್ಟ್ರೀಯ ಕನಿಷ್ಠ ವೇತನ ನೀಡಲಾಗುವುದು ಎಂದು ಘೋಷಿಸಿದರು.

ಖರ್ಗೆ ಸಾಹೇಬರ ಕೈ ಬಲಪಡಿಸಬೇಕು : ಬಡವರ ಪರವಾದ ಕಾಂಗ್ರೆಸ್ ಪಕ್ಷ ಕೇಂದ್ರದಲ್ಲಿ ಖರ್ಗೆ ಸಾಹೇಬರ ಹಾಗೂ ರಾಹುಲ್‍ ಗಾಂಧಿ ಅವರ ನೇತೃತ್ವದಲ್ಲಿ ಅಧಿಕಾರಕ್ಕೆ ಬರಬೇಕು. ಕಳೆದ ವಿಧಾನಸಭೆ ಚುನಾವಣೆಯಲ್ಲಿ 135 ಸ್ಥಾನಗೆಲ್ಲಿಸಿಕೊಟ್ಟಂತೆ ಈ ಸಲದ ಲೋಕಸಭೆ ಚುನಾವಣೆಯಲ್ಲಿ 25ಕ್ಕೂ ಅಧಿಕ ಸ್ಥಾನ ಗೆಲ್ಲಿಸಬೇಕು ಇದು ಎಲ್ಲರ ಆಸೆಯಾಗಿದೆ. ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ರಾಧಾಕೃಷ್ಣ ಅವರನ್ನು ಗೆಲ್ಲಿಸುವ ಮೂಲಕ ಖರ್ಗೆ ಸಾಹೇಬರ ಕೈ ಬಲಪಡಿಸಿ ಎಂದು ಡಿಕೆಶಿ ಮನವಿ ಮಾಡಿದರು.

ಎಐಸಿಸಿ ಕಾರ್ಯದರ್ಶಿ ರಂದೀಪ್ ಸುರ್ಜೆವಾಲಾ, ರಾಜ್ಯಸಭಾ ಸದಸ್ಯ ನಾಸೀರ್ ಹುಸೇನ್, ಸಚಿವರಾದ ಡಾ. ಶರಣಪ್ರಕಾಶ್ ಪಾಟೀಲ್, ಪ್ರಿಯಾಂಕ್ ಖರ್ಗೆ, ಶರಣಬಸಪ್ಪ ದರ್ಶನಾಪುರ, ಮುಖ್ಯಮಂತ್ರಿಗಳ ಸಲಹೆಗಾರ ಹಾಗೂ ಆಳಂದ್ ಶಾಸಕ ಬಿ.ಆರ್. ಪಾಟೀಲ್, ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಅಧ್ಯಕ್ಷ ಡಾ. ಅಜಯ್ ಸಿಂಗ್ ಸೇರಿದಂತೆ ಅನೇಕರು ವೇದಿಕೆ ಮೇಲಿದ್ದರು.

ಇದನ್ನೂ ಓದಿ :ಗ್ಯಾರಂಟಿ ಯೋಜನೆಗೆ ಎಷ್ಟೇ ಖರ್ಚಾದರೂ ಸರಿ ಯಾವುದೇ ಕಾರಣಕ್ಕೂ ನಿಲ್ಲಿಸುವುದಿಲ್ಲ: ಸಿಎಂ ಸಿದ್ದರಾಮಯ್ಯ ಭರವಸೆ - CM Siddaramaiah

Last Updated : Apr 13, 2024, 10:57 AM IST

ABOUT THE AUTHOR

...view details