ಕರ್ನಾಟಕ

karnataka

ETV Bharat / state

ಬಸ್​​ನಲ್ಲಿ‌ ಶಾಲಾ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ: ನಿರ್ವಾಹಕನಿಗೆ 2 ವರ್ಷ ಜೈಲು ಶಿಕ್ಷೆ - Mangaluru Court

ಕೆಎಸ್‌ಆರ್‌ಟಿಸಿ ಬಸ್​ನಲ್ಲಿ ಶಾಲಾ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಅಪರಾಧಿ ನಿರ್ವಾಹಕನಿಗೆ ಮಂಗಳೂರು ಕೋರ್ಟ್​ ಶಿಕ್ಷೆ ವಿಧಿಸಿದೆ.

harassment case
ಕೋರ್ಟ್

By ETV Bharat Karnataka Team

Published : Feb 24, 2024, 11:37 AM IST

ಮಂಗಳೂರು:ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಸಾಬೀತಾಗಿದ್ದು, ಅಪರಾಧಿ ಬಸ್ ನಿರ್ವಾಹಕನಿಗೆ ಎರಡು ವರ್ಷ ಕಠಿಣ ಸಜೆ ಹಾಗೂ ದಂಡ ವಿಧಿಸಿ ಮಂಗಳೂರಿನ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ತೀರ್ಪು ನೀಡಿದೆ. ಬಾಗಲಕೋಟೆ ಮೂಲದ ಕೆಎಸ್‌ಆರ್‌ಟಿಸಿ ಬಸ್​​ ನಿರ್ವಾಹಕನೇ ಶಿಕ್ಷೆಗೊಳಗಾದ ವ್ಯಕ್ತಿ.

2023ರ ಮಾರ್ಚ್​​ 23ರಂದು ಬಾಲಕಿಯು ಶಾಲೆಯಿಂದ ಬಿ.ಸಿ. ರೋಡ್‌ನಲ್ಲಿನ ತನ್ನ ಮನೆಗೆ ಬರಲು ಕೆಎಸ್‌ಆರ್‌ಟಿಸಿ ಬಸ್ ಹತ್ತಿದ್ದಳು. ಆಗ ಬಸ್‌ನಲ್ಲಿ ಕೆಲ ಪ್ರಯಾಣಿಕರಿದ್ದರು. ಮುಂದಿನ ನಿಲ್ದಾಣದಲ್ಲಿ ಅವರೆಲ್ಲ ಇಳಿದಿದ್ದರು. ಆಗ ಬಸ್ ಚಾಲಕ, ಆರೋಪಿ ನಿರ್ವಾಹಕ ಹಾಗೂ ಬಾಲಕಿ ಮಾತ್ರ ಇದ್ದರು. ಈ ವೇಳೆ, ಆಕೆಯ ಬಳಿ ಬಂದ ನಿರ್ವಾಹಕ ಕಿರುಕುಳ ನೀಡಿದ್ದಾನೆ. ತಾನು ಹೆತ್ತವರು, ಪೊಲೀಸರಿಗೆ ತಿಳಿಸುವುದಾಗಿ ಬಾಲಕಿ ಹೇಳಿದರೂ ಆರೋಪಿಯು ಕಿರುಕುಳ ಮುಂದುವರೆಸಿದ್ದ. ಅಸಭ್ಯವಾಗಿ ವರ್ತಿಸಿ, ಆಕೆಯ ಮಾನಕ್ಕೆ ಕುಂದುಂಟಾಗುವಂತೆ ವರ್ತಿಸಿದ್ದ ಎಂದು ದೂರಲಾಗಿತ್ತು.

ಬಳಿಕ ಮುಂದಿನ ಬಸ್ ಸ್ಟಾಪ್‌ನಲ್ಲಿ ಕೆಲವು ಪ್ರಯಾಣಿಕರು ಹತ್ತಿದ್ದರು. ಆಗ ಆರೋಪಿ ವಿದ್ಯಾರ್ಥಿನಿ ಬಳಿಯಿಂದ ತೆರಳಿ ಪ್ರಯಾಣಿಕರಿಗೆ ಟಿಕೆಟ್ ನೀಡಿದ್ದ. ತೀವ್ರ ನೊಂದಿದ್ದ ಬಾಲಕಿ ಮನೆಗೆ ಬಂದು ಬಸ್ ಸಂಖ್ಯೆ ಸಹಿತ ತಾಯಿಯ ಬಳಿ ಘಟನೆ ಬಗ್ಗೆ ವಿವರಿಸಿದ್ದಳು. ನಂತರ ತಾಯಿ ಮತ್ತು ಬಾಲಕಿ ಬಂಟ್ವಾಳ ನಗರ ಪೊಲೀಸ್​​ ಠಾಣೆಗೆ ತೆರಳಿ ದೂರು ನೀಡಿದ್ದರು.

ಪ್ರಕರಣ ದಾಖಲಿಸಿದ ಪೊಲೀಸರು ನಿರ್ವಾಹಕನನ್ನು ಬಂಧಿಸಿದ್ದರು. ಈ ಬಗ್ಗೆ ಇನ್ಸ್​ಪೆಕ್ಟರ್ ನಂದಿನಿ ಎಸ್.ಶೆಟ್ಟಿ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಮಂಗಳೂರಿನ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯದ ನ್ಯಾಯಾಧೀಶರಾದ ಮಂಜುಳಾ ಇಟ್ಟಿ ಅವರು ಆರೋಪಿಗೆ ಶಿಕ್ಷೆ ವಿಧಿಸಿ, ತೀರ್ಪು ನೀಡಿದ್ದಾರೆ. ಪ್ರಾಸಿಕ್ಯೂಷನ್ ಪರವಾಗಿ ಪೋಕ್ಸೊ ವಿಶೇಷ ಸರ್ಕಾರಿ ಅಭಿಯೋಜಕಿ ಸಹನಾದೇವಿ ಬೋಳೂರು ಅವರು ವಾದಿಸಿದ್ದರು.

ಆರೋಪಿಗೆ ಐಪಿಸಿ ಕಲಂ 509ರಡಿ ಒಂದು ವರ್ಷ ಸಾದಾ ಸಜೆ ಮತ್ತು 5 ಸಾವಿರ ರೂ. ದಂಡ, ಒಂದು ವೇಳೆ, ದಂಡ ಪಾವತಿಸಲು ತಪ್ಪಿದರೆ ಹೆಚ್ಚುವರಿಯಾಗಿ ಒಂದು ತಿಂಗಳು ಸಾದಾ ಸಜೆ, ಪೋಕ್ಸೊ ಕಾಯ್ದೆಯ ಕಲಂ 12ರಡಿ 2 ವರ್ಷ ಕಠಿಣ ಸಜೆ ಮತ್ತು 10 ಸಾವಿರ ರೂ. ದಂಡ, ಒಂದು ವೇಳೆ ದಂಡ ಪಾವತಿಸದಿದ್ದರೆ ಮತ್ತೆ 2 ತಿಂಗಳು ಸಾದಾ ಸಜೆ ವಿಧಿಸಲಾಗಿದೆ. ಅಲ್ಲದೇ, ಸಂತ್ರಸ್ತ ವಿದ್ಯಾರ್ಥಿನಿಗೆ 10 ಸಾವಿರ ರೂ. ಪರಿಹಾರ ನೀಡುವಂತೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರಕ್ಕೆ ಆದೇಶ ನೀಡಲಾಗಿದೆ.

ಇದನ್ನೂ ಓದಿ:ಅಪ್ರಾಪ್ತೆ ಮೇಲೆ ಅತ್ಯಾಚಾರ: ಯುವಕನಿಗೆ 20 ವರ್ಷ ಕಠಿಣ ಶಿಕ್ಷೆ ವಿಧಿಸಿದ ನ್ಯಾಯಾಲಯ

ABOUT THE AUTHOR

...view details