ಬೆಂಗಳೂರು : ಅಂತರ್ಜಲ ಕುಸಿತದಿಂದ ನೀರಿನ ಅಭಾವಕ್ಕೆ ತುತ್ತಾಗಿರುವ ರಾಜಧಾನಿಯಲ್ಲಿ ಅಂತರ್ಜಲ ವೃದ್ಧಿಸುವ ಹಾಗೂ ಕೆರೆಗಳಿಗೆ ಮಳೆ ನೀರು ತುಂಬಿಸುವ ಉದ್ದೇಶದಿಂದ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಸಮುದಾಯ ಮಳೆ ಕೊಯ್ಲು (ಕಮ್ಯೂನಿಟಿ ರೈನ್ ಹಾರ್ವೆಸ್ಟಿಂಗ್) ಪ್ರಾರಂಭಿಸಲು ಚಿಂತಿಸಲಾಗುತ್ತಿದೆ ಎಂದು ಜಲಮಂಡಳಿ ಅಧ್ಯಕ್ಷ ಡಾ. ರಾಮ್ ಪ್ರಸಾತ್ ಮನೋಹರ್ ಅವರು ತಿಳಿಸಿದರು.
ಬೆಂಗಳೂರು ನಗರದಲ್ಲಿ ಕಟ್ಟಡಗಳಲ್ಲಿ ಮಳೆ ನೀರು ಕೊಯ್ಲು ಅಳವಡಿಕೆ ಕಡ್ಡಾಯಗೊಳಿಸಲಾಗಿದೆ. ಆದರೆ, ಕಟ್ಟಡಗಳಲ್ಲಿನ ಜಾಗದ ಕೊರತೆ ಹಾಗೂ ನಿರ್ಲಕ್ಷ್ಯದಿಂದ ಇದರ ಸರಿಯಾದ ಅನುಷ್ಠಾನ ಸಾಧ್ಯವಾಗಿಲ್ಲ. ಬಹುತೇಕ ಕಡೆಗಳಲ್ಲಿ ಕೇವಲ ಅಗತ್ಯ ಅನುಮತಿ ಪಡೆದುಕೊಳ್ಳಲು ಮಳೆ ನೀರು ಕೊಯ್ಲು ಪದ್ದತಿಯನ್ನು ಅಳವಡಿಸಿದ್ದು, ಮಳೆ ನೀರನ್ನು ಸಂಗ್ರಹಿಸಿ ಒಳಚರಂಡಿಗೆ ನೇರವಾಗಿ ಹರಿ ಬಿಡಲಾಗುತ್ತಿದೆ.
ಇದರಿಂದ ಮಳೆಗಾಲದಲ್ಲಿ ಒಳಚರಂಡಿ ವ್ಯವಸ್ಥೆ ಒತ್ತಡಕ್ಕೆ ಒಳಗಾಗಿ ಪ್ರವಾಹ ಪರಿಸ್ಥಿತಿ ಉಂಟಾಗುತ್ತದೆ. ಅಲ್ಲದೇ, ಇದರಿಂದ ಅಮೂಲ್ಯ ನೀರು ವ್ಯರ್ಥವಾಗಿ ಹರಿದು ಚರಂಡಿಪಾಲಾಗುತ್ತಿದೆ. ನೀರು ವ್ಯರ್ಥವಾಗದಂತೆ ಅಮೂಲ್ಯ ಮಳೆ ನೀರನ್ನು ಸಂಗ್ರಹಿಸಿ ಅದನ್ನು ಅಂತರ್ಜಲ ವೃದ್ದಿಗೆ ಬಳಸಿಕೊಳ್ಳಲು ಕಮ್ಯೂನಿಟಿ ರೈನ್ ಹಾರ್ವೆಸ್ಟಿಂಗ್ ಯೋಜನೆಯನ್ನು ಜಲಮಂಡಳಿ ರೂಪಿಸುವ ನಿಟ್ಟಿನಲ್ಲಿ ಚಿಂತನೆ ನಡೆಸಿದೆ ಎಂದು ಹೇಳಿದರು.