ಕರ್ನಾಟಕ

karnataka

ETV Bharat / state

ಬೆಳಗಾವಿಯ ಪ್ರವಾಹ ಪೀಡಿತ ಪ್ರದೇಶಗಳಿಗೆ ಇಂದು ಸಿದ್ದರಾಮಯ್ಯ ಭೇಟಿ: ಸಂತ್ರಸ್ತರಿಗೆ ಧೈರ್ಯ ತುಂಬಲಿರುವ ಸಿಎಂ - CM To Visit Belagavi - CM TO VISIT BELAGAVI

ಬೆಳಗಾವಿ ಜಿಲ್ಲೆಯ ಪ್ರವಾಹ ಪೀಡಿತ ಸ್ಥಳಗಳಿಗೆ ಸಿಎಂ ಸಿದ್ದರಾಮಯ್ಯ ಇಂದು ಭೇಟಿ ನೀಡಿ, ಅವಲೋಕನ ನಡೆಸಲಿದ್ದಾರೆ.

ಬೆಳಗಾವಿಯ ಪ್ರವಾಹ ಪೀಡಿತ ಪ್ರದೇಶಗಳಿಗೆ ಇಂದು ಸಿದ್ದರಾಮಯ್ಯ ಭೇಟಿ
ಬೆಳಗಾವಿಯ ಪ್ರವಾಹ ಪೀಡಿತ ಪ್ರದೇಶಗಳಿಗೆ ಇಂದು ಸಿದ್ದರಾಮಯ್ಯ ಭೇಟಿ (ETV Bharat)

By ETV Bharat Karnataka Team

Published : Aug 5, 2024, 7:53 AM IST

ಬೆಳಗಾವಿ: ಜಿಲ್ಲೆಯಲ್ಲಿ ಸಪ್ತ ನದಿಗಳ ಪ್ರವಾಹ ಹಾಗೂ ಧಾರಾಕಾರ ಮಳೆಯಿಂದ ಹಾನಿಯಾಗಿರುವ ಪ್ರದೇಶಗಳಿಗೆ ಇಂದು ಸಿಎಂ ಸಿದ್ದರಾಮಯ್ಯ ಭೇಟಿ‌ ನೀಡಿ, ಸಂತ್ರಸ್ತರಿಗೆ ಧೈರ್ಯ ತುಂಬಲಿದ್ದಾರೆ. ವಿಶೇಷ ವಿಮಾನದಲ್ಲಿ ಸೋಮವಾರ ಬೆಳಗ್ಗೆ 11 ಗಂಟೆಗೆ ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಬಂದಿಳಿಯಲಿರುವ ಮುಖ್ಯಮಂತ್ರಿ, 12.15ರ ಸುಮಾರಿಗೆ ಘಟಪ್ರಭಾ ನದಿ ಪ್ರವಾಹಕ್ಕೆ ಸಿಲುಕಿ ನಲುಗಿರುವ ಗೋಕಾಕ್ ಮತ್ತು ವಿವಿಧ ಪ್ರದೇಶಗಳಿಗೆ ಭೇಟಿ ನೀಡಿ, ಪ್ರವಾಹ ಪರಿಸ್ಥಿತಿ ಅವಲೋಕಿಸಲಿದ್ದಾರೆ.

ಇದಾದ ಬಳಿಕ, ಮಧ್ಯಾಹ್ನದ ಕೃಷ್ಣಾ ನದಿ ಪ್ರವಾಹಕ್ಕೆ ಒಳಗಾದ ಕಾಗವಾಡ ತಾಲೂಕಿನ ಜೂಗಳ‌ ಗ್ರಾಮಕ್ಕೆ ಸಿಎಂ ಸಿದ್ದರಾಮಯ್ಯ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ. ನಂತರ ಚಿಕ್ಕೋಡಿ ತಾಲೂಕಿನ ಮಾಂಜರಿ ಸೇತುವೆ ವೀಕ್ಷಣೆ ಮಾಡಲಿದ್ದಾರೆ. ರಾತ್ರಿ 8 ಗಂಟೆ ವಿಮಾನದ ಮೂಲಕ ಬೆಂಗಳೂರಿಗೆ ವಾಪಸ್ ತೆರಳಲಿದ್ದಾರೆ. ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡುವ ವೇಳೆ ಮುಖ್ಯಮಂತ್ರಿಗೆ ಜಿಲ್ಲೆಯ ಸಚಿವರು, ಶಾಸಕರು, ಅಧಿಕಾರಿಗಳು ಸಾಥ್ ಕೊಡಲಿದ್ದಾರೆ.

ಇದನ್ನೂ ಓದಿ:ಬೆಳಗಾವಿ ಜಿಲ್ಲೆಯ 46 ಗ್ರಾಮಗಳು ಜಲಾವೃತ: ಐವರು ಸಾವು, 10,304 ಸಂತ್ರಸ್ತರು ಕಾಳಜಿ ಕೇಂದ್ರಕ್ಕೆ ಸ್ಥಳಾಂತರ - 46 villages of Belagavi are flooded

ಹಿಂದೆ ಬೆಳಗಾವಿ ಜಿಲ್ಲಾಧಿಕಾರಿಗಳಾಗಿ ಕಾರ್ಯನಿರ್ವಹಿಸಿ ಅಪಾರ ಜನ ಮೆಚ್ಚುಗೆ ಗಳಿಸಿದ್ದ ಡಾ.ಶಾಲಿನಿ ರಜನೀಶ್ ಅವರು ಸದ್ಯ ರಾಜ್ಯ ಸರ್ಕಾರದ ಮುಖ್ಯಕಾರ್ಯದರ್ಶಿಯಾಗಿ ನೇಮಕವಾಗಿದ್ದಾರೆ. ರಾಜ್ಯ ಸರ್ಕಾರದ ಮುಖ್ಯಕಾರ್ಯದರ್ಶಿಯಾಗಿ ಶಾಲಿನಿ ರಜನೀಶ್ ಅವರು ಕೂಡ ಮೊದಲ ಬಾರಿಗೆ ಮುಖ್ಯಮಂತ್ರಿಗಳೊಂದಿಗೆ ಇಂದು ಬೆಳಗಾವಿಗೆ ಭೇಟಿ ನೀಡಲಿದ್ದಾರೆ. ಅಲ್ಲದೇ, ಜಿಲ್ಲೆಯ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಲಿರುವ ಸಿಎಂ ಜೊತೆ ಅವರೂ ಅತಿವೃಷ್ಠಿಯಿಂದಾದ ಹಾನಿಯನ್ನು ಪರಿಶೀಲನೆ ನಡೆಸಲಿದ್ದಾರೆ.

ಬೆಳಗಾವಿ ತತ್ತರ: ಜುಲೈ 30ರ ವರೆಗೆ 6.3 ಮಿ.ಮೀ. ವಾಡಿಕೆ ಮಳೆ ಆಗಬೇಕಿತ್ತು. ಆದರೆ 110 ಮಿ‌.ಮೀ. ಮಳೆ ಸುರಿದಿದೆ. ಅಂದರೆ ಶೇ.110ರಷ್ಟು ಹೆಚ್ಚು ಮಳೆ ಬಂದಿದೆ. ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ 332 ಮಿ.ಮೀ. ವಾಡಿಕೆ ಮಳೆ ಸುರಿಯಬೇಕಿತ್ತು. ಆದರೆ, 533 ಮಿ.ಮೀ. ಮಳೆ ಆಗಿದ್ದು, ಶೇ. 60ರಷ್ಟು ವಾಡಿಕೆಗಿಂತ ಮಳೆ ಹೆಚ್ಚಾಗಿದೆ. ಇದರಿಂದಾಗಿ ನದಿಗಳು ಉಕ್ಕಿ ಪ್ರವಾಹ ಉಂಟಾಗದ ಪರಿಣಾಮ ಬೆಳಗಾವಿ ಜಿಲ್ಲೆಯ ಹಲವು ಗ್ರಾಮಗಳು, ಸಾವಿರಾರು ಎಕರೆ ಕೃಷಿ ಜಮೀನುಗಳು ಜಲಾವೃತವಾಗಿವೆ. ಜಿಲ್ಲೆಯಲ್ಲಿ ಕೃಷ್ಣಾ, ಘಟಪ್ರಭಾ, ಮಲಪ್ರಭಾ, ದೂಧಗಂಗಾ, ವೇದಗಂಗಾ, ಮಾರ್ಕಂಡೇಯ, ಹಿರಣ್ಯಕೇಶಿ ನದಿಗಳು ಪ್ರವಾಹ ಸೃಷ್ಟಿಸಿದ ಪರಿಣಾಮ ಜನಜೀವನ ಅಸ್ತವ್ಯಸ್ತವಾಗಿದೆ.

ಜಿಲ್ಲೆಯಲ್ಲಿ ಈವರೆಗೆ 46 ಗ್ರಾಮಗಳು ಜಲಾವೃತವಾಗಿದ್ದು, 3,684 ಕುಟುಂಬಗಳ 10,304 ಜನ ಪ್ರವಾಹ ಸಂತ್ರಸ್ತರಾಗಿದ್ದಾರೆ. ಸಾವಿರಾರು ಜನರು ಮನೆ ಬಿಟ್ಟು ಇಡೀ ಕುಟುಂಬ ಸಮೇತ ಕಾಳಜಿ ಕೇಂದ್ರಗಳಲ್ಲಿ ಆಶ್ರಯ ಪಡೆದಿದ್ದಾರೆ. ಪ್ರವಾಹ ಪರಿಸ್ಥಿತಿ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ 54 ಕಾಳಜಿ ಕೇಂದ್ರಗಳನ್ನು ತೆರೆಯಲಾಗಿದೆ.

ಇದನ್ನೂ ಓದಿ: ಕೃಷ್ಣಾ, ಮಲಪ್ರಭಾ ನದಿ ಅಬ್ಬರ: ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿದ್ದ ವಿವಿಧ ಬೆಳೆಗಳು ಜಲಾವೃತ - Krishna River Flood

ABOUT THE AUTHOR

...view details