ದಾವಣಗೆರೆ:ಮೀಸಲಾತಿ ಎಂಬುದು ಭಿಕ್ಷೆ ಭಿಕ್ಷೆ ಕೊಡುವುದಲ್ಲ, ಅದು ನಿಮ್ಮ ಹಕ್ಕು ಎಂದು ಸಿಎಂ ಸಿದ್ದರಾಮಯ್ಯ ಪರಿಶಿಷ್ಟ ಜಾತಿ ಪರಿಶಿಷ್ಟ ಸಮುದಾಯದ ಜನರನ್ನು ಉದ್ದೇಶಿಸಿ ಮಾತನಾಡಿದರು. ಜಿಲ್ಲೆಯ ಹರಿಹರ ತಾಲೂಕಿನ ರಾಜನಹಳ್ಳಿರುವ ವಾಲ್ಮೀಕಿ ಮಠದಲ್ಲಿ ಇಂದು ನಡೆದ ವಾಲ್ಮೀಕಿ ಜಾತ್ರೆಯಲ್ಲಿ ಮಾತನಾಡಿದ ಅವರು, ಅವಕಾಶ ವಂಚಿತರು ಶೋಷಣೆಗೆ ಒಳಗಾದವರಿಗೆ ಮೀಸಲಾತಿ ಸಿಗಬೇಕು ಎಂದರು.
2013ರಲ್ಲಿ ನಾನು ಸಿಎಂ ಆಗಿದ್ದಾಗ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದವರಿಗೆ ಜಾತಿ ಸಂಖ್ಯೆಗೆ ಅನುಗುಣವಾಗಿ ಅಭಿವೃದ್ಧಿ ಮಾಡಲು, ಅನುದಾನ ಮೀಸಲಿಡಲು ಕಾನೂನು ಮಾಡಿದ್ದೆ. ಇಡೀ ದೇಶದಲ್ಲಿ ಸಾಮಾಜಿಕ ನ್ಯಾಯ, ರಾಷ್ಟ್ರ ಭಕ್ತಿ, ಬದಲಾವಣೆ ಬಗ್ಗೆ ಭಾಷಣ ಹೊಡೀತರಲ್ಲಾ, ಈ ಕಾನೂನು ಇಡೀ ದೇಶದಲ್ಲಿ ಜಾರಿ ಮಾಡಲಿ ಎಂದು ಕೇಂದ್ರ ಸರ್ಕಾರಕ್ಕೆ ಸವಾಲು ಹಾಕಿದರು.
ವಾಲ್ಮೀಕಿ ರಾಮಾಯಣ ಬರೆದು ಮಹರ್ಷಿ ಆದರು: ಮಹರ್ಷಿ ವಾಲ್ಮೀಕಿಯವರು ರಾಮಾಯಣ ಬರೆದು ಮಹರ್ಷಿಯಾದರು. ಸಮಾಜದಲ್ಲಿ ಅವರ ವಿಚಾರಗಳಿಂದ ಜನರನ್ನು ಜಾಗೃತಿ ಮೂಡಿಸುವ ಕೆಲಸ ಮಾಡಿದರು. ರಾಮಾಯಣ ಒಂದು ಮಹಾನ್ ಗ್ರಂಥ. ನೂರಾರು ವರ್ಷಗಳ ಹಿಂದೆ ವಾಲ್ಮೀಕಿ ರಾಮಾಯಣ ಬರೆದರೆ, ವ್ಯಾಸ ಮಹಾಭಾರತ ಬರೆದರು. ಮಹಾನ್ ಗ್ರಂಥಗಳನ್ನು ರಚಿಸಬೇಕಾದ್ರೆ ಮೇಲ್ವರ್ಗದಲ್ಲಿ ಹುಟ್ಟಬೇಕೆಂಬ ಪ್ರತೀತಿ ಅಂದು ಇತ್ತು. ಗ್ರಂಥ ಬರೆಯುವ ಶಕ್ತಿ ಕೆಲವೇ ಜನರಿಗೆ ಸೀಮಿತವಾಗಿದ್ದಲ್ಲ. ಆ ಕಾವಿ ಶಕ್ತಿ ಶೂದ್ರರಲ್ಲಿಯೂ ಇದೆ ಎಂದು ಸಾಬೀತು ಮಾಡಿದವರು ವಾಲ್ಮೀಕಿ ಎಂದು ತಿಳಿಸಿದರು.