ಚಾಮರಾಜನಗರ:ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸುನೀಲ್ ಬೋಸ್ ನಾಮಪತ್ರ ಸಲ್ಲಿಕೆಗೂ ಮುನ್ನ ಮುಖ್ಯಮಂತ್ರಿ ಸಿದ್ದರಾಮಯ್ಯ ನಗರದಲ್ಲಿ ಇಂದು ರೋಡ್ ಶೋ ನಡೆಸಿದರು. ಭುವನೇಶ್ವರಿ ವೃತ್ತದಿಂದ ಬಿ.ರಾಚಯ್ಯ ಜೋಡಿರಸ್ತೆಯಲ್ಲಿ ರೋಡ್ ಶೋ ನಡೆಸಿದ ಅವರು ಕೇಂದ್ರ ಸರ್ಕಾರ, ಪ್ರಧಾನಿ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ವಿರುದ್ಧ ಟೀಕಾಸಮರ ನಡೆಸಿದರು.
ಬಿಜೆಪಿ ಸರ್ಕಾರ ಹತ್ತು ವರ್ಷ ಕೇಂದ್ರದಲ್ಲಿದ್ದರೂ ಕೊಟ್ಟ ಮಾತು ಈಡೇರಿಸಿಲ್ಲ. ಮೋದಿ ಸುಳ್ಳು ಹೇಳಿ ಜನರನ್ನು ವಂಚಿಸಿದ್ದಾರೆ. 15 ಲಕ್ಷ ರೂ ಜನರ ಖಾತೆಗೆ, ಉದ್ಯೋಗ ಸೃಷ್ಟಿ, ಪೆಟ್ರೋಲ್, ಡೀಸೆಲ್, ಗ್ಯಾಸ್ ಬೆಲೆ ಇಳಿಕೆಯಾಯಿತಾ?, ಅವರಿಗೆ ವೋಟ್ ಹಾಕಬೇಕಾ?. ಕೇಂದ್ರ ಸಂಪೂರ್ಣವಾಗಿ ವೈಫಲ್ಯ ಕಂಡಿದೆ. ಅದರ ಬಗ್ಗೆ ಜನರಿಗೆ ತಿಳಿಸಿ, ಅದರೊಂದಿಗೆ ನಮ್ಮ ಗ್ಯಾರಂಟಿಗಳನ್ನೂ ತಿಳಿಸಿ ಎಂದು ಮನವಿ ಮಾಡಿದರು.
ಬರ ಪರಿಹಾರಕ್ಕೆ ವರದಿ ನೀಡಿಲ್ಲ ಎಂದು ಅಮಿತ್ ಶಾ ಸುಳ್ಳು ಹೇಳುತ್ತಿದ್ದಾರೆ. ಬರ ಪರಿಹಾರಕ್ಕಾಗಿ ಆರಂಭದಲ್ಲೇ ಮನವಿ ಸಲ್ಲಿಸಿ ಐದು ತಿಂಗಳದಾದರೂ ಹಣ ಬಿಡುಗಡೆ ಮಾಡದೇ ಈಗ ಮನವಿಯನ್ನೇ ಕೊಟ್ಟಿಲ್ಲ ಎಂದಿದ್ದಾರೆ. ನಾನೇ ಸ್ವತಃ ಪ್ರಧಾನಿ ಅವರನ್ನು ಭೇಟಿ ಮಾಡಿ ರೈತರ ಕಷ್ಟದ ಬಗ್ಗೆ ತಿಳಿಸಿದ್ದೇನೆ. ಬರಗಾಲವನ್ನು ನಮ್ಮ ಸಂಪನ್ಮೂಲಗಳಿಂದ ಎದುರಿಸುತ್ತಿದ್ದೇವೆ. ಕೇಂದ್ರದಿಂದ ಒಂದು ರೂಪಾಯಿ ಬಂದಿಲ್ಲ. ಬಿಜೆಪಿಯನ್ನು ಸೋಲಿಸಿ ಕಾಂಗ್ರೆಸ್ ಅಭ್ಯರ್ಥಿಯನ್ನು 3 ಲಕ್ಷ ಮತಗಳ ಅಂತರದಿಂದ ಗೆಲ್ಲಿಸಿ ಎಂದು ಮನವಿ ಮಾಡಿದ ಅವರು, ನಮ್ಮ ಗೆಲುವು ನೂರಕ್ಕೆ ನೂರು ಗ್ಯಾರಂಟಿ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಡಿಸಿಎಂ ಡಿ.ಕೆ.ಶಿವಕುಮಾರ್, ಡಾ.ಜಿ.ಪರಮೇಶ್ವರ್, ಕೆ.ವೆಂಕಟೇಶ್, ಸತೀಶ್ ಜಾರಕಿಹೋಳಿ, ಡಾ.ಎಚ್.ಸಿ.ಮಹದೇವಪ್ಪ, ಯತೀಂದ್ರ ಸಿದ್ದರಾಮಯ್ಯ, ಶಾಸಕ ಪುಟ್ಟರಂಗಶೆಟ್ಟಿ, ಎ.ಆರ್.ಕೃಷ್ಣಮೂರ್ತಿ ಸೇರಿದಂತೆ ಇತರ ನಾಯಕರು ರೋಡ್ ಶೋನಲ್ಲಿ ಭಾಗವಹಿಸಿದ್ದರು.