ಕರ್ನಾಟಕ

karnataka

By ETV Bharat Karnataka Team

Published : 5 hours ago

ETV Bharat / state

ರೋಗಿಗಳನ್ನು ಪ್ರೀತಿ, ವಾತ್ಸಲ್ಯದಿಂದ ಕಂಡರೆ ಅದಕ್ಕಿಂತ ದೊಡ್ಡ ಉಪಚಾರ ಮತ್ತೊಂದಿಲ್ಲ: ಸಿಎಂ - Mysuru Medical College Centenary

ವೈದ್ಯರು ಮತ್ತು ವೈದ್ಯಕೀಯ ಕ್ಷೇತ್ರ ಮನುಕುಲದ ಆಯಸ್ಸು ಹೆಚ್ಚಿಸುತ್ತದೆ ಎಂದು ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ಶತಮಾನೋತ್ಸವ ಸಮಾರೋಪ ಸಮಾರಂಭದಲ್ಲಿ ಸಿಎಂ ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.

ಮೈಸೂರು ವೈದ್ಯಕೀಯ ಕಾಲೇಜ್ ಶತಮಾನೋತ್ಸವ ಸಮಾರಂಭದಲ್ಲಿ ಸಿಎಂ
ಮೈಸೂರು ವೈದ್ಯಕೀಯ ಕಾಲೇಜು ಶತಮಾನೋತ್ಸವ ಸಮಾರಂಭ (ETV Bharat)

ಮೈಸೂರು: ಆಸ್ಪತ್ರೆಗೆ ಬರುವ ಪ್ರತಿಯೊಬ್ಬ ರೋಗಿಗಳನ್ನೂ ಅತ್ಯಂತ ಪ್ರೀತಿ, ವಾತ್ಸಲ್ಯ, ವಿಶ್ವಾಸ ಮತ್ತು ಅನ್ಯೋನ್ಯತೆಯಿಂದ ಕಂಡರೆ ಅದಕ್ಕಿಂತ ಉಪಚಾರ ಬೇರೊಂದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ವೈದ್ಯಕೀಯ ಶಿಕ್ಷಣ ಇಲಾಖೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇಂಜಿನಿಯರಿಂಗ್ ಘಟಕದ ವತಿಯಿಂದ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ಗ್ರಂಥಾಲಯ ಕಟ್ಟಡದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ಶತಮಾನೋತ್ಸವದ ಸಮಾರೋಪ ಸಮಾರಂಭ ಉದ್ಘಾಟಿಸಿ, ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.

ಶತಮಾನ ಕಂಡ ಮೈಸೂರು ವೈದ್ಯಕೀಯ ಕಾಲೇಜು 9 ಸಾವಿರ‌ ಮಂದಿ ವೈದ್ಯ ಸಂಪತ್ತನ್ನು ಸೃಷ್ಟಿಸಿದ ಹೆಗ್ಗಳಿಕೆ ಹೊಂದಿದೆ. ಪ್ರಪಂಚದಾದ್ಯಂತ ಈ ಕಾಲೇಜಿನಲ್ಲಿ ಕಲಿತ ವೈದ್ಯರು ವಿಸ್ತರಿಸಿಕೊಂಡಿದ್ದಾರೆ ಎಂದರು.

ಖಾಸಗಿ ಆಸ್ಪತ್ರೆಗಳಿಗಿಂತ ಸರ್ಕಾರಿ ಆಸ್ಪತ್ರೆಗಳ ವೈದ್ಯರಿಗೆ ಹೆಚ್ಚು ಪರಿಣತಿ ಮತ್ತು ಅನುಭವ ಇರುತ್ತದೆ ಎನ್ನುವುದು ನನ್ನ ಭಾವನೆ. ಸರ್ಕಾರಿ ಆಸ್ಪತ್ರೆಗೆ ಬರುವವರು ಹೆಚ್ಚಿನವರು ಬಡವರು. ಅವರು ವೈದ್ಯರನ್ನು ದೇವರಂತೆ ಕಾಣುತ್ತಾರೆ. ವೈದ್ಯಕೀಯ ಕ್ಷೇತ್ರಕ್ಕೆ ಎರಡು ರೀತಿಯ ಜವಾಬ್ದಾರಿ ಇದೆ. ರೋಗ ಬಂದ ನಂತರ ಚಿಕಿತ್ಸೆ ಕೊಡುವುದು ಮತ್ತು ರೋಗ ಬರದಂತೆ ತಡೆಯುವುದೂ ಕೂಡ ವೈದ್ಯಕೀಯ ಕ್ಷೇತ್ರದ ಜವಾಬ್ದಾರಿ ಎಂದು ಹೇಳಿದರು.

ಮೈಸೂರು ವೈದ್ಯಕೀಯ ಕಾಲೇಜಿನ ಶತಮಾನೋತ್ಸವ ಸಮಾರಂಭದಲ್ಲಿ ಸಿಎಂ ಸಿದ್ದರಾಮಯ್ಯ (ETV Bharat)

ವೈದ್ಯರು ಸಮಾಜದ ಆಸ್ತಿ. ಇನ್ನೂ ಹೆಚ್ಚಿನ ವೈದ್ಯರು ಈ ಕಾಲೇಜಿನಿಂದ ಹೊರಗೆ ಬಂದು ಜನರ ಆಸ್ತಿ ಆಗಲಿ.‌ ಸೇವೆ, ಶುಚಿತ್ವ ಮತ್ತು ಗುಣಮಟ್ಟದಲ್ಲಿ ಯಾವುದಕ್ಕೂ ಕಡಿಮೆ ಇಲ್ಲದಂತೆ ಮೈಸೂರು ವೈದ್ಯಕೀಯ ಕಾಲೇಜು ಪ್ರಗತಿ ಕಾಣಲಿ ಎಂದು ಹಾರೈಸಿದರು.

ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಹೆಚ್.ಸಿ.ಮಹದೇವಪ್ಪ ಮಾತನಾಡಿ, ವೈದ್ಯಕೀಯ ಕಾಲೇಜು ಸ್ಥಾಪನೆಯಾಗಿ 100 ವರ್ಷವಾಯಿತು. ಜನರಿಕ್ ಮೆಡಿಸನ್ಸ್ ಅಂದರೆ ಎಲ್ಲರಿಗೂ ಒಂದೇ ಎಂಬ ಪರಿಭಾವನೆ ಇತ್ತು. ಆದರೆ ಈಗ ವೈದ್ಯಕೀಯ ಜಗತ್ತಿನಲ್ಲಿ ನಾನಾ ರೀತಿಯ ವಿಭಾಗಗಳಿವೆ. ಅದಕ್ಕೆ ಸೀಮಿತವಾಗಿ ಸ್ಪೆಷಲಿಸ್ಟ್​ಗಳು ವೈದ್ಯಕೀಯ ಕ್ಷೇತ್ರದಲ್ಲಿದ್ದಾರೆ. 1994ರಲ್ಲಿ ನಾನು ಆರೋಗ್ಯಮಂತ್ರಿಯಾಗಿದ್ದಾಗ ಹಣಕಾಸು ಮಂತ್ರಿಯಾಗಿ ಸಿದ್ದರಾಮಯ್ಯನವರಿದ್ದರು. ದೇವೇಗೌಡರು ಸಿಎಂ ಆಗಿದ್ದ ಸಂದರ್ಭದಲ್ಲಿ ಸಿದ್ದರಾಮಯ್ಯನವರ ಜೊತೆ ಮಾತನಾಡಿ ಎಲ್ಲ ವೈದ್ಯಕೀಯ ಕ್ಷೇತ್ರಗಳನ್ನು ಒಂದೆಡೆ ಸೀಮಿತಗೊಳಿಸಬೇಕು, ಒಂದೇ ವಿಶ್ವವಿದ್ಯಾಲಯಕ್ಕೆ ಒಳಪಡಿಸಬೇಕು ಎಂದು ಆ ಸಂದರ್ಭದಲ್ಲಿ ಮಾತನಾಡಿದ್ದೆ. ಆಗ 'ಫಸ್ಟ್ ಹೆಲ್ತ್ ಯುನಿವರ್ಸಿಟಿ' ಎಂದು ಜಾರಿಗೆ ತರಲಾಯಿತು. ಈಗ ಆ ಕ್ಷೇತ್ರ ತುಂಬಾ ಬೆಳೆದಿದೆ. ಭಾರತ ಒಂದು ಅಭಿವೃದ್ಧಿ ಹೊಂದುತ್ತಿರುವ ದೇಶ. ಪ್ರೈಮರಿ ಹೆಲ್ತ್ ಕೇರ್ ಡೆವಲಪ್ಮೆಂಟ್ ಬಗ್ಗೆ ಗಮನಹರಿಸಿ ಹಳ್ಳಿ ಕಡೆಗಳಲ್ಲಿ ವಾಸಿಸುತ್ತಿರುವ ಜನರ ಬಗ್ಗೆ ಕಾಳಜಿ ವಹಿಸಬೇಕಿದೆ ಎಂದರು.

ವೈದ್ಯಕೀಯ ಶಿಕ್ಷಣ ಸಚಿವ ಶರಣ ಪ್ರಕಾಶ್ ಪಾಟೀಲ್, ಶಾಸಕ ಡಾ.ಶ್ರೀನಿವಾಸ್, ವಿಧಾನ ಪರಿಷತ್ ಸದಸ್ಯ ಡಾ.ತಿಮ್ಮಯ್ಯ, ಹಿರಿಯ ಐಪಿಎಸ್ ಅಧಿಕಾರಿ ಬೋರಲಿಂಗಯ್ಯ, ಕರ್ನಾಟಕ ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷರಾದ ಡಾ.ಪುಷ್ಪ ಅಮರನಾಥ್, ಜಿಲ್ಲಾಧಿಕಾರಿ ಜಿ.ಲಕ್ಷ್ಮಿಕಾಂತ ರೆಡ್ಡಿ ಸೇರಿದಂತೆ ಹಲವು ಪ್ರಮುಖರು ಉಪಸ್ಥಿತರಿದ್ದರು.

ಇದನ್ನೂ ಓದಿ: ಹೊಟ್ಟೆ ತುಂಬ ಹಿಟ್ಟು - ಬಾಯಿ ತುಂಬ ಅನ್ನ: ಅಮ್ಮನ ಮಾತು ಸ್ಮರಿಸಿದ ಸಿಎಂ ಸಿದ್ದರಾಮಯ್ಯ - CM Siddaramaiah

ABOUT THE AUTHOR

...view details