ಬೆಳಗಾವಿ: ಪ್ರಯಾಗ್ರಾಜ್ ಮಹಾಕುಂಭ ಮೇಳದಲ್ಲಿ ಜರುಗಿದ ಕಾಲ್ತುಳಿತ ಪ್ರಕರಣದ ಬಗ್ಗೆ ಬೆಳಗಾವಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಸ್ಪಷ್ಟನೆ ನೀಡಿದ್ದು, ''ಗಾಯಾಳುಗಳ ಕುರಿತು ಮಾಹಿತಿ ಸಿಕ್ಕಿಲ್ಲ. ಆದರೆ, ತೊಂದರೆಯಲ್ಲಿ ಸಿಲುಕಿದವರ ರಕ್ಷಣೆಗೆ ನಾವು ಸಿದ್ಧರಿದ್ದೇವೆ'' ಎಂದರು.
ಮಹಾಕುಂಭ ಮೇಳದಲ್ಲಿ ತಮ್ಮವರು ತಪ್ಪಿಸಿಕೊಂಡಿರುವ ಬಗ್ಗೆ ಮಾಧ್ಯಮದವರ ಜೊತೆ ಮಾತನಾಡಿದ್ದ ಬೆಳಗಾವಿಯ ಮಹಿಳೆ ಸರೋಜಿನಿ ಅವರು, "ನಾವು ಎರಡು ಬಸ್ಗಳಲ್ಲಿ 60 ಜನ ಮಹಾಕುಂಭ ಮೇಳಕ್ಕೆ ಬಂದಿದ್ದೇವೆ. ಇದ್ದಕ್ಕಿದ್ದಂತೆ ಕಾಲ್ತುಳಿತ ಉಂಟಾಯಿತು. ನಮ್ಮ ಜೊತೆ ಬಂದರಲ್ಲಿ ನಾಲ್ಕೈದು ಜನ ಕಾಣುತ್ತಿಲ್ಲ. ನಮ್ಮದು ಒಂಭತ್ತು ಜನರ ಗುಂಪು ಇತ್ತು. ಇದರಲ್ಲಿ ಮೂರ್ನಾಲ್ಕು ಜನರು ಇಲ್ಲೇ ಇದ್ದಾರೆ. ಉಳಿದವರು ಕಾಣುತ್ತಿಲ್ಲ" ಎಂದು ಆತಂಕ ವ್ಯಕ್ತಪಡಿಸಿದ್ದರು.
ಭಯಪಡುವ ಅಗತ್ಯವಿಲ್ಲ ಎಂದ ಡಿಸಿ : ಘಟನೆ ಬಗ್ಗೆ ಮಾಧ್ಯಮದವರಿಗೆ ಮಾಹಿತಿ ನೀಡಿದ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್, ''ಇಂದು ಬೆಳಗ್ಗೆ ಕಾಲ್ತುಳಿತ ಆಗಿದೆ ಅಂತಾ ತಿಳಿಯಿತು. ಬೆಳಗಾವಿ ಜಿಲ್ಲೆಯ 30 ಜನರ ತಂಡ ಪ್ರಯಾಗ್ರಾಜ್ಗೆ ಹೋಗಿತ್ತು. ಈಗ ಒಬ್ಬರಿಗೊಬ್ಬರ ಸಂಪರ್ಕ ಸಿಗುತ್ತಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ. ಘಟನೆ ನಡೆದು ಈಗ ಆರೇಳು ತಾಸು ಅಷ್ಟೇ ಆಗಿದೆ. ಅಲ್ಲಿ ಸೇರಿರುವ ಜನರ ಸಂಖ್ಯೆ ಹೆಚ್ಚಾಗಿದೆ. ಅಮಾವಾಸ್ಯೆ ಸ್ನಾನಕ್ಕೆಂದು 8 ಕೋಟಿಗೂ ಅಧಿಕ ಜನ ಸೇರುವ ಸಂದರ್ಭ ಸೃಷ್ಟಿಯಾಗಿದೆ. ಅದರಿಂದ ಯಾತ್ರಾರ್ಥಿಗಳ ಪೋಷಕರು ಯಾವುದೇ ರೀತಿ ಭಯಪಡುವ ಅಗತ್ಯತೆ ಇಲ್ಲ'' ಎಂದು ತಿಳಿಸಿದರು.
''ಟ್ರಾವೆಲ್ ಏಜೆನ್ಸಿ ಸೇರಿ ಎಲ್ಲರ ಜೊತೆಗೂ ನಾವು ಸಂಪರ್ಕದಲ್ಲಿದ್ದೇವೆ. ಉತ್ತರ ಪ್ರದೇಶದ ಜಿಲ್ಲಾಡಳಿತ ಜೊತೆಗೆ ನಾನು ಸಂಪರ್ಕದಲ್ಲಿದ್ದೇನೆ. ಹಾಗಾಗಿ, ಜಿಲ್ಲಾಡಳಿತ ಮತ್ತು ಸರ್ಕಾರದಿಂದ ಎಲ್ಲ ರೀತಿಯ ಸಹಕಾರ ನೀಡಲು ನಾವು ಸಿದ್ಧರಿದ್ದೇವೆ. ಅದೇ ರೀತಿ ವಿಶೇಷ ಜಿಲ್ಲಾಧಿಕಾರಿಗಳು, ಐಪಿಎಸ್ ಅಧಿಕಾರಿಗಳ ಸಂಪರ್ಕದಲ್ಲೂ ನಾವಿದ್ದೇವೆ'' ಎಂದು ಹೇಳಿದರು.
''ಈಗಲೇ ನಾಪತ್ತೆ ಅಂತಾ ಹೇಳಲು ಬರಲ್ಲ. 24 ಗಂಟೆ ಆದ ಬಳಿಕ ನಾಪತ್ತೆ ಆಗಿರುವವರ ವಿವರವನ್ನು ಘೋಷಿಸುತ್ತೇವೆ. 6-8 ಕೋಟಿ ಜನ ಒಂದೇ ನಗರದಲ್ಲಿ ಸಮಾವೇಶಗೊಂಡಿದ್ದಾರೆ. ಹಾಗಾಗಿ, ಆತಂಕ ಸೃಷ್ಟಿಯಾಗಿದೆ. ನಮ್ಮನ್ನು ಸಂಪರ್ಕಿಸಿದ ಮಹಿಳೆ ಆತಂಕದಲ್ಲಿದ್ದರು. ಅವರಿಗೆ ಯಾವುದೇ ಸಮಸ್ಯೆ ಇಲ್ಲ ಎಂದು ತಿಳಿಸಿದ್ದೇವೆ. ಅವರ ಜೊತೆಗೆ ಮಿಸ್ಸಿಂಗ್ ಆದವರನ್ನು ಸ್ಥಳೀಯ ಪೊಲೀಸರ ಸಹಾಯದಿಂದ ಒಂದೆಡೆ ಸೇರಿಸಲು ಪ್ರಯತ್ನಿಸುತ್ತಿದ್ದೇವೆ'' ಎಂದು ತಿಳಿಸಿದರು.
ಜಿಲ್ಲಾಧಿಕಾರಿ ಕಚೇರಿ ಸಂಪರ್ಕಿಸಿ : ''ಬೆಳಗಾವಿಯವರು ಕಾಲ್ತುಳಿತದಲ್ಲಿ ಗಾಯಗೊಂಡಿರುವ ಬಗ್ಗೆ ಮಾಹಿತಿ ಇಲ್ಲ. ಆದರೆ, ಅಲ್ಲಿ ತೊಂದರೆಯಲ್ಲಿ ಸಿಲುಕಿದವರು ನಮ್ಮ ಜಿಲ್ಲಾಧಿಕಾರಿ ಕಚೇರಿಯನ್ನು ಸಂಪರ್ಕಿಸಬಹುದು. ಸಹಾಯವಾಣಿ ತೆರೆಯಲಾಗಿದೆ. ಅಗತ್ಯತೆ ಇದ್ದವರು ಜಿಲ್ಲಾಧಿಕಾರಿ ವೆಬ್ಸೈಟ್ನಲ್ಲಿರುವ ಸಂಖ್ಯೆಗೆ ಸಂಪರ್ಕಿಸಬಹುದು'' ಎಂದು ಡಿಸಿ ಮೊಹಮ್ಮದ್ ರೋಷನ್ ತಿಳಿಸಿದ್ದಾರೆ.
''ಬೆಳಗಾವಿ ಜಿಲ್ಲೆಯಿಂದ ಎಷ್ಟು ಜನರು ಪ್ರಯಾಗ್ರಾಜ್ಗೆ ತೆರಳಿದ್ದಾರೆ ಎಂಬುದು ಗೊತ್ತಾಗಿಲ್ಲ. ಯಾಕೆಂದರೆ ಬಹಳಷ್ಟು ಜನರು ರೈಲ್ವೆ, ಖಾಸಗಿ ಟ್ರಾವೆಲ್ಸ್, ಸ್ವಂತ ವಾಹನಗಳಲ್ಲಿ ಹೋಗಿದ್ದಾರೆ. ಹಾಗಾಗಿ, ನಿಖರವಾಗಿ ಇಷ್ಟೇ ಜನರು ಹೋಗಿದ್ದಾರೆ ಎಂಬುದನ್ನು ಹೇಳಲು ಆಗಲ್ಲ. ಆದರೆ, ಅಲ್ಲಿ ಯಾರಿಗೇ ತೊಂದರೆ ಆದರೂ ಅವರಿಗೆ ಸಹಾಯಕ್ಕೆ ನಾವು ಸಿದ್ಧ'' ಎಂದು ಜಿಲ್ಲಾಧಿಕಾರಿ ಅಭಯ ನೀಡಿದರು.
ಇದನ್ನೂ ಓದಿ: ಮಹಾಕುಂಭ ಮೇಳದಲ್ಲಿ ಭೀಕರ ಕಾಲ್ತುಳಿತ; 17 ಮಂದಿ ಸಾವು ಶಂಕೆ, ಸಂಕಷ್ಟದಲ್ಲಿ ಬೆಳಗಾವಿಯ ಭಕ್ತರು