ಮೈಸೂರು : ಚಾಮರಾಜನಗರ ಜಿಲ್ಲೆಯ ಗುಂಡ್ಲಪೇಟೆ ತಾಲ್ಲೂಕಿನ ಹಿರೇಕಾಟಿ ಗೇಟ್ ಬಳಿ ಮಂಗಳವಾರ ತಡರಾತ್ರಿ ಬೈಕ್ ಹಾಗೂ ಕಾರಿನ ನಡುವೆ ಅಪಘಾತ ಸಂಭವಿಸಿ ನವದಂಪತಿ ಹಾಗೂ ಹುಡುಗನ ತಾಯಿ ಸ್ಥಳದಲ್ಲೇ ಸಾವನ್ನಪ್ಪಿದ್ದರು. ಮೂವರ ಕಣ್ಣುಗಳನ್ನು ದಾನ ಮಾಡುವ ಮೂಲಕ 6 ಜನರಿಗೆ ದೃಷ್ಟಿ ನೀಡಿ, ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ.
ಮಂಗಳವಾರ ರಾತ್ರಿ ಹೆಚ್. ಡಿ. ಕೋಟೆ ತಾಲ್ಲೂಕಿನ ಚಿಕ್ಕದೇವಮ್ಮನ ಬೆಟ್ಟಕ್ಕೆ ಹೋಗಿ ತಮ್ಮ ಸ್ವಗ್ರಾಮಕ್ಕೆ ಹಿಂತಿರುಗುವಾಗ ಅಪಘಾತ ನಡೆದಿತ್ತು. 9 ತಿಂಗಳ ಹಿಂದೆ ಮದುವೆಯಾಗಿದ್ದ ಶಾಲಿನಿ ಹಾಗೂ ಶಶಿಧರ್ ಹಾಗೂ ಶಶಿಧರ್ ತಾಯಿ ಭಾಗ್ಯಮ್ಮ ಬೈಕ್ನಲ್ಲಿ ಹೋಗುವಾಗ ಕಾರಿಗೆ ಡಿಕ್ಕಿ ಹೊಡೆದು ಮೂವರು ಸ್ಥಳದಲ್ಲೇ ಮೃತಪಟ್ಟಿದ್ದರು. ಮೈಸೂರಿನ ಕೆ. ಆರ್. ಆಸ್ಪತ್ರೆಯ ಶವಾಗಾರದಲ್ಲಿ ಮೃತರ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಕುಟುಂಬದವರು ಮೂವರ ಕಣ್ಣುಗಳನ್ನು ಕೆ. ಆರ್. ಆಸ್ಪತ್ರೆಯ ನೇತ್ರದಾನ ಕೇಂದ್ರಕ್ಕೆ ದಾನ ಮಾಡಿದ್ದು, 6 ಜನರ ಬಾಳಿಗೆ ಬೆಳಕಾಗಿದ್ದಾರೆ.
ಶಶಿಧರ್ ದೊಡ್ಡಪ್ಪ ಸಿದ್ದಯ್ಯ ಹೇಳಿದ್ದೇನು? "ನಂಜನಗೂಡು ತಾಲ್ಲೂಕಿನ ಚಿಕ್ಕದೇವಮ್ಮ ದೇವಾಲಯದಿಂದ ವಾಪಸ್ ಬರುವಾಗ ಅಪಘಾತ ಸಂಭವಿಸಿದೆ. ಮೈಸೂರಿನಿಂದ ಗುಂಡ್ಲುಪೇಟೆ ಮಾರ್ಗವಾಗಿ ವೇಗವಾಗಿ ಹೋಗುತ್ತಿದ್ದ ಕಾರು ನಿಯಂತ್ರಣ ತಪ್ಪಿ ಎರಡು ಬೈಕ್ಗೆ ಡಿಕ್ಕಿ ಹೊಡೆದಿದೆ. ಬೈಕ್ನಲ್ಲಿ ಹೋಗುತ್ತಿದ್ದ ನನ್ನ ತಮ್ಮನ ಹೆಂಡತಿ, ಸೊಸೆ, ಮಗ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮಗ-ಸೊಸೆ ಮದುವೆ ಆಗಿ 9 ತಿಂಗಳಾಗಿತ್ತು ಅಷ್ಟೇ. ಅನಿರೀಕ್ಷಿತ ಅಪಘಾತದಲ್ಲಿ ಜೀವ ಕಳೆದುಕೊಂಡಿದ್ದಾರೆ. ಅವರ ಕಣ್ಣುಗಳಾದರೂ ಬೇರೆಯವರ ಜೀವನಕ್ಕೆ ಬೆಳಕಾಗಲಿ ಎಂದು 3 ಜನರ ಕಣ್ಣುಗಳನ್ನು ದಾನ ಮಾಡಿದ್ದೇವೆ. ಇದರಿಂದ ಒಟ್ಟು 6 ಜನರಿಗೆ ಆ ಕಣ್ಣುಗಳು ಉಪಯೋಗ ಆಗುತ್ತವೆ. ಕಣ್ಣುದಾನದ ಎಲ್ಲಾ ಪ್ರಕ್ರಿಯೆ ಮುಗಿದಿದೆ" ಎಂದು ಮೃತ ಶಶಿಧರ್ ದೊಡ್ಡಪ್ಪ ಗುರುಸಿದ್ದಪ್ಪ ಹೇಳಿದರು.
ಇದನ್ನೂ ಓದಿ: ಚಾಮರಾಜನಗರ: ಬೈಕ್-ಕಾರು ಅಪಘಾತ: ಪತಿ, ಪತ್ನಿ, ತಾಯಿ ಸ್ಥಳದಲ್ಲೇ ಸಾವು