ಬೆಂಗಳೂರು:ಕೋವಿಡ್-19 ಸಾಂಕ್ರಾಮಿಕದ ಸಮಯದಲ್ಲಿ ವೈದ್ಯಕೀಯ ಉಪಕರಣಗಳಿಗೆ ಸಂಬಂಧಿಸಿದಂತೆ ನೇಮಿಸಲಾದ ಜಸ್ಟೀಸ್ ಮೈಕಲ್ ಡಿ. ಕುನ್ಹಾ ಅವರ ವಿಚಾರಣಾ ಆಯೋಗದ ಮಧ್ಯಂತರ ವರದಿ ಕುರಿತು ಅಗತ್ಯ ಕ್ರಮ ಕೈಗೊಳ್ಳಲು ಸಂಪುಟ ಉಪಸಮಿತಿ ರಚಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆದೇಶ ಹೊರಡಿಸಿದ್ದಾರೆ.
ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಉಪಸಮಿತಿ ರಚಿಸಲು ತೀರ್ಮಾನಿಸಲಾಗಿತ್ತು. ಈ ಸಂಬಂಧ ಇದೀಗ ಸಿಎಂ ಸಿದ್ದರಾಮಯ್ಯ ಆದೇಶ ಹೊರಡಿಸಿದ್ದಾರೆ. ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಒಟ್ಟು ಆರು ಸದಸ್ಯರ ಸಚಿವ ಸಂಪುಟ ಉಪಸಮಿತಿ ರಚಿಸಲಾಗಿದೆ. ಉಪಸಮಿತಿಯಲ್ಲಿ ಗೃಹ ಸಚಿವ ಡಾ.ಜಿ.ಪರಮೇಶ್ವರ್, ಕಾನೂನು ಸಚಿವ ಹೆಚ್.ಕೆ.ಪಾಟೀಲ್, ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ, ಕಾರ್ಮಿಕ ಸಚಿವ ಸಂತೋಷ್ ಲಾಡ್ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಶರಣ್ ಪ್ರಕಾಶ್ ಪಾಟೀಲ್ ಅವರು ಸದಸ್ಯರಾಗಿದ್ದಾರೆ.
ಕುನ್ಹಾ ಆಯೋಗವು 11 ಸಂಪುಟಗಳಲ್ಲಿ ವರದಿ ಸಲ್ಲಿಸಿದ್ದು, 7,223.64 ಕೋಟಿ ರೂ. ಮೊತ್ತದ ವೈದ್ಯಕೀಯ ಉಪಕರಣಗಳ ಖರೀದಿಯ ಅವ್ಯವಹಾರದ ಕುರಿತು ತನಿಖೆ ನಡೆಸಿದೆ. ವರದಿಯಲ್ಲಿ 500 ಕೋಟಿ ರೂ. ಮೊತ್ತದ ವಸೂಲಾತಿ ಶಿಫಾರಸು ಮಾಡಿದೆ. ಬಿಬಿಎಂಪಿ 4 ವಲಯಗಳ ಮತ್ತು ರಾಜ್ಯದ ಎಲ್ಲಾ 31 ಜಿಲ್ಲೆಗಳ ವರದಿ ಸಲ್ಲಿಕೆ ಬಾಕಿಯಿದೆ. 55,000 ಕಡತಗಳನ್ನು ಸಂಬಂಧಪಟ್ಟ ಇಲಾಖೆಗಳಿಂದ ಪಡೆದು ಪರಿಶೀಲಿಸಿ ಆಯೋಗವು ವರದಿ ಸಲ್ಲಿಸಿದೆ.
ಈ ತನಿಖೆ ಮತ್ತು ಕೈಗೊಳ್ಳಬೇಕಾದ ಕ್ರಮಗಳ ಕುರಿತು ನಿರಂತರವಾಗಿ ಮೇಲ್ವಿಚಾರಣೆ ನಡೆಸಲು ಸಚಿವ ಸಂಪುಟದ ಉಪಸಮಿತಿ ರಚಿಸಲು ತೀರ್ಮಾನಿಸಲಾಗಿದೆ. ಕೋವಿಡ್-19 ಸಾಂಕ್ರಾಮಿಕ ರೋಗದ ಸಮಯದಲ್ಲಿ ಸಾರ್ವಜನಿಕರ ಹಣದ ದುರುಪಯೋಗ ಮತ್ತು ಅಧಿಕಾರ ದುರುಪಯೋಗ ಬಗ್ಗೆ ಸಾರ್ವಜನಿಕ ಲೆಕ್ಕಪತ್ರ ಸಮಿತಿಯು ನೀಡಿದ ವರದಿಯನ್ನು 2023ರ ಜುಲೈ 17ರಂದು ಸದನದಲ್ಲಿ ಮಂಡಿಸಲಾಗಿತ್ತು. ಈ ವರದಿಯ ಆಧಾರದ ಮೇಲೆ ಸತ್ಯಸಂಶೋಧನೆ ಮಾಡಿ, ವರದಿ ನೀಡಲು ಕುನ್ಹಾ ಆಯೋಗವನ್ನು ನೇಮಿಸಲಾಗಿತ್ತು. ಈ ಆಯೋಗವು 12 ವಿಶ್ಲೇಷಣಾ ವರದಿಗಳನ್ನು ನೀಡಿತ್ತು.
ಇದನ್ನೂ ಓದಿ:ಗಣಿಗಾರಿಕೆ ಅಕ್ರಮಗಳ ತನಿಖೆ: SIT ಕಾರ್ಯಾವಧಿ ಒಂದು ವರ್ಷ ವಿಸ್ತರಿಸಲು ಸಂಪುಟ ಅಸ್ತು