ಬಳ್ಳಾರಿ: "ಮಹಾರಾಷ್ಟ್ರ ಬಿಜೆಪಿ, 'ಕರ್ನಾಟಕ ಸರ್ಕಾರ ವಾದಾ ಕಿಯಾ: ಧೋಖಾ ದಿಯಾ' ಎಂದು ಸುಳ್ಳು ಜಾಹೀರಾತು ನೀಡಿದೆ. ಕರ್ನಾಟಕದಲ್ಲಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಭರವಸೆ ನೀಡಿತ್ತು. ಭರವಸೆ ಈಡೇರಿಸದೇ, ಯೋಜನೆಯನ್ನೇ ಇನ್ನೂ ಆರಂಭಿಸದೇ ವಂಚಿಸಿದೆ ಎನ್ನುವ ಅರ್ಥದ ಪರಮ ಸುಳ್ಳಿನ ಜಾಹೀರಾತುಗಳನ್ನು ಪುಟಗಟ್ಟಲೆ ನೀಡಿದೆ. ಆದರೆ, ನಾವು ವಾದಾ ದಿಯಾ: ಪೂರಾ ಕಿಯಾ ಎಂದು ಸಿಎಂ ಸಿದ್ದರಾಮಯ್ಯ ಅವರು ಬಿಜೆಪಿಯ ಸುಳ್ಳು ಜಾಹಿರಾತಿಗೆ ತಿರುಗೇಟು ನೀಡಿದರು.
ಸಂಡೂರು ಚುನಾವಣಾ ಪ್ರಚಾರದ ವೇದಿಕೆಯಲ್ಲೇ ಈ ಹೇಳಿಕೆ ನೀಡಿದ ಅವರು, ಈ ಸುಳ್ಳಿನ ಜಾಹಿರಾತನ್ನು ಉಲ್ಲೇಖಿಸಿದ ಸಿಎಂ ಸಿದ್ದರಾಮಯ್ಯ ಅವರು ಅವರದೇ ಶೈಲಿಯಲ್ಲಿ ಉತ್ತರಿಸಿ, "ವಾದಾ ದಿಯಾ ಪೂರಾ ಕಿಯಾ" ಎಂದು ವ್ಯಂಗ್ಯವಾಗಿ ತಿರುಗೇಟು ನೀಡಿದರು.
ಸುಳ್ಳೇ ಬಿಜೆಪಿಯ ಮನೆ ದೇವರು: "ರಾಜ್ಯದಲ್ಲಿ ಶಕ್ತಿ ಯೋಜನೆ ಸೇರಿದಂತೆ ಐದಕ್ಕೆ ಐದೂ ಗ್ಯಾರಂಟಿಗಳು ಯಶಸ್ವಿಯಾಗಿ ನಡೆದುಕೊಂಡು ಹೋಗುತ್ತಿದೆ. ಗೃಹಲಕ್ಷ್ಮಿಯ ಮುಂದಿನ ಕಂತಿನ ಹಣ ಒಂದೆರಡು ದಿನಗಳಲ್ಲೇ ಬಿಡುಗಡೆ ಕೂಡ ಆಗುತ್ತದೆ. ಆದರೆ, ಬಿಜೆಪಿಯವರು ಸುಳ್ಳುಗಳನ್ನು ಹರಡಿಸುತ್ತಾ, ಸುಳ್ಳುಗಳನ್ನು ಹರಡುವುದಕ್ಕೇ ಕೋಟಿ ಕೋಟಿ ಖರ್ಚು ಮಾಡುತ್ತಿದ್ದಾರೆ. ಬಿಜೆಪಿಯವರಿಗೆ ಸುಳ್ಳೇ ಮನೆ ದೇವರು" ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮೋದಿ ಹೇಳಿದ್ದೇನು? ಮಾಡಿದ್ದೇನು?:"ವಿದೇಶದಲ್ಲಿರುವ ಕಪ್ಪುಹಣ ತಂದು ಎಲ್ಲರ ಖಾತೆಗೆ 15 ಲಕ್ಷ ಹಾಕುತ್ತೇವೆ ಎಂದು ಹೇಳಿದ್ರಲ್ಲ ಮೋದಿಯವರೇ ಕೊಟ್ರೇನ್ರೀ? ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿ ಮಾಡ್ತೀನಿ ಅಂದ್ರಲ್ಲ ಮೋದಿಯವರೇ, ಉದ್ಯೋಗ ಸೃಷ್ಟಿ ಮಾಡಿದ್ರಾ? ಎಲ್ರೀ ಸ್ವಾಮಿ ನಿಮ್ಮ ಅಚ್ಛೇ ದಿನ್? ರೈತರ ಆದಾಯ ದುಪ್ಪಟ್ಟು ಮಾಡ್ತೀನಿ ಅಂದ್ರಲ್ಲ ಮೋದಿಯವರೇ, ಮಾಡಿದ್ರಾ? ಮೋದಿ ಪ್ರಧಾನಿ ಆಗುವ ಮೊದಲು ದೇಶದ ಸಾಲ ಇದ್ದದ್ದು 54 ಲಕ್ಷ ಕೋಟಿ ಮಾತ್ರ. ಈಗ ನಿಮ್ಮ ಅವಧಿಯಲ್ಲಿ ದೇಶದ ಸಾಲವನ್ನು 185 ಲಕ್ಷ ಕೋಟಿಗೆ ಏರಿಸಿದ್ದೀರಿ. ಇದೇನಾ ಸ್ವಾಮಿ ನಿಮ್ಮ ಅಚ್ಛೇ ದಿನ್?" ಎಂದು ವ್ಯಂಗ್ಯವಾಡಿದರು.
ಇನ್ನೂ ಮೂರು ವರ್ಷ ನಾನೇ ಸಿಎಂ:"ಇನ್ನೂ ಮೂರು ವರ್ಷ ನಾನೇ ಸಿಎಂ. ಇದರಲ್ಲಿ ಯಾವುದೇ ಅನುಮಾನ ಬೇಡ. ಸಂಡೂರಲ್ಲಿ ಅನ್ನಪೂರ್ಣ ಅವರನ್ನು ಗೆಲ್ಲಿಸಿ. ಈ.ತುಕಾರಾಮ್ ಅವರು ಕ್ಷೇತ್ರದ ಅಭಿವೃದ್ಧಿಗಾಗಿ ಸದಾ ಕಾತರಿಸುತ್ತಾ ಕೆಲಸ ಮಾಡುವ ಶಾಸಕರಾಗಿದ್ದರು, ಈಗ ಸಂಸದರಾಗಿದ್ದಾರೆ. ಸಂಡೂರಿನಲ್ಲಿ ಈಗ ಆಗಿರುವ ಎಲ್ಲಾ ಅಭಿವೃದ್ಧಿಗಳೂ ತುಕಾರಾಮ್ ಮತ್ತು ಸಂತೋಷ್ ಲಾಡ್ ಅವರ ಅವಧಿಯಲ್ಲಿ ಆಗಿರುವಂಥವು. ಕಾಂಗ್ರೆಸ್ ಸ್ವಾತಂತ್ರ್ಯ ಹೋರಾಟದ ಅವಧಿಯಿಂದಲೂ ಅಭಿವೃದ್ಧಿ ಮತ್ತು ಸಾಮಾಜಿಕ ನ್ಯಾಯದ ಪರವಾಗಿದೆ. ಬಿಜೆಪಿ ಸ್ವಾತಂತ್ರ್ಯ ಹೋರಾಟದಲ್ಲೂ ಜನರ ಪರವಾಗಿ ಇರಲಿಲ್ಲ. ಈಗಲೂ ಇಲ್ಲ" ಎಂದರು.