ಬೆಂಗಳೂರು:ನಗರದ ಖಾಸಗಿ ಹೊಟೇಲ್ನಲ್ಲಿ ಸೋಮವಾರ ನಡೆದ ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲಿ ಹಲವು ಕೈ ಶಾಸಕರು ಅನುದಾನ ನೀಡದಿರುವ ಬಗ್ಗೆ ಅಸಮಾಧಾನ ಹೊರಹಾಕಿದರು. ಕ್ಷೇತ್ರದಲ್ಲಿ ಅಭಿವೃದ್ಧಿಗೆ ಹೆಚ್ಚಿನ ಅನುದಾನದ ಅಗತ್ಯವಿದೆ. ಹೀಗಾಗಿ, ಅನುದಾನ ನೀಡಬೇಕು ಎಂದು ಒತ್ತಾಯಿಸಿದರು. ಈ ವೇಳೆ ಸಿಎಂ ಸಿದ್ದರಾಮಯ್ಯ, ಬಜೆಟ್ನಲ್ಲಿ ಹೆಚ್ಚಿನ ಅನುದಾನ ಒದಗಿಸುವುದಾಗಿ ಭರವಸೆ ನೀಡಿದರು.
ಎಲ್ಲ ಪಕ್ಷಗಳ ಶಾಸಕರಿಗೂ ತಲಾ 10 ಕೋಟಿ ರೂ ಅನುದಾನ: ಬಜೆಟ್ ಮಂಡನೆಗೂ ಮೊದಲು ಮತ್ತೊಮ್ಮೆ ಶಾಸಕಾಂಗ ಸಭೆ ಕರೆಯಲಾಗುವುದು. ಸರ್ಕಾರ ಸ್ಥಿರವಾಗಿದೆ, ಸಂಪನ್ಮೂಲ ಕ್ರೋಢೀಕರಣ ಆಗ್ತಿದೆ. ಅನುದಾನದ ವಿಚಾರ ಗಮನದಲ್ಲಿದೆ ಎಂದಿರುವ ಸಿಎಂ ಶಾಸಕರಿಗೆ ತಲಾ 10 ಕೋಟಿ ರೂ ಅನುದಾನ ನೀಡುವುದಾಗಿ ಅಭಯ ನೀಡಿದರು. ಜೊತೆಗೆ, ನಿನ್ನೆಯಷ್ಟೇ ಅನುದಾನಕ್ಕೆ ಸಹಿ ಹಾಕಿದ್ದೇನೆ. ಎಲ್ಲಾ ಪಕ್ಷದವರಿಗೂ ಅನುದಾನ ನೀಡ್ತಿದ್ದೇವೆ. ಬಿಜೆಪಿ, ಜೆಡಿಎಸ್ ಶಾಸಕರಿಗೂ ಹತ್ತು ಕೋಟಿ ಕೊಡ್ತಿದ್ದೇವೆ ಎಂದರು.
ಬಹಿರಂಗ ಹೇಳಿಕೆ ನೀಡಬಾರದು- ಶಾಸಕರಿಗೆ ಸುರ್ಜೇವಾಲ ತಾಕೀತು:ಶಾಸಕಾಂಗ ಪಕ್ಷದ ಸಭೆಯಲ್ಲಿ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೆವಾಲ ಅವರು ಕೈ ಶಾಸಕರು, ಸಚಿವರಿಗೆ ಬಹಿರಂಗ ಹೇಳಿಕೆ ನೀಡದಂತೆ ತಾಕೀತು ಮಾಡಿದರು. ಏನೇ ಗೊಂದಲಗಳಿದ್ದರೂ ನಾಲ್ಕು ಗೋಡೆಗಳ ಮಧ್ಯೆ, ಪಕ್ಷದ ಚೌಕಟ್ಟಿನಲ್ಲಿ ಚರ್ಚಿಸುವಂತೆ ಸೂಚಿಸಿದರು. ಸುರ್ಜೆವಾಲ ಮಾತಿಗೆ ಸಿಎಂ ದನಿಗೂಡಿಸಿದರು. ಎಲ್ಲವೂ ಹೈಕಮಾಂಡ್ಗೆ ಬಿಟ್ಟ ವಿಚಾರ. ಅದರಂತೆ ಎಲ್ಲರೂ ನಡೆಯಬೇಕು ಎಂದು ಹೇಳಿದರು.
ಡಿ.ಕೆ.ಶಿವಕುಮಾರ್ ಮಾತಿಗೆ ಸತೀಶ್ ಜಾರಕಿಹೊಳಿ ಸಿಡಿಮಿಡಿ:ಸಭೆಯಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಹಾಗೂ ಸಚಿವ ಸತೀಶ್ ಜಾರಕಿಹೊಳಿ ನಡುವೆ ಬಿಸಿ ಬಿಸಿ ಚರ್ಚೆ ನಡೆದ ಘಟನೆಯೂ ನಡೆಯಿತು. ಬೆಳಗಾವಿ ಡಿಸಿಸಿ ಕಚೇರಿಯನ್ನು ಲಕ್ಷ್ಮೀ ಹೆಬ್ಬಾಳಕರ್ ಕಟ್ಟಿದ್ದಾರೆ ಎಂದು ಡಿಕೆಶಿ ಹೇಳಿದರು. ಇದರಿಂದ ಸಿಡಿಮಿಡಿಗೊಂಡ ಸತೀಶ್ ಜಾರಕಿಹೊಳಿ, ಎದ್ದು ಬಂದು ಮೈಕ್ ಹಿಡಿದು ಪದೇ ಪದೇ ಲಕ್ಷ್ಮೀ ಹೆಬ್ಬಾಳಕರ್ ಕಟ್ಟಿದ್ರು ಅಂತ ಹೇಳಬೇಡಿ. ಹೀಗೆ ಹೇಳಿ ಇತರರನ್ನು ಅವಮಾನಿಸಬೇಡಿ. ಡಿಸಿಸಿ ಕಚೇರಿ ಕಟ್ಟಡಕ್ಕೆ ನಾನೂ ಹಣ ನೀಡಿದ್ದೇನೆ. ರಮೇಶ್ ಜಾರಕಿಹೊಳಿ ಕಟ್ಟಡ ನಿರ್ಮಾಣಕ್ಕೆ ಜಾಗ ನೀಡಿದ್ದರು. ಮೂರು ಕೋಟಿ ರೂ ನನ್ನ ಸ್ವಂತ ದುಡ್ಡು ನೀಡಿದ್ದೇನೆ ಎಂದು ತಿರುಗೇಟು ನೀಡಿದರು. ಈ ವೇಳೆ ಮಧ್ಯ ಪ್ರವೇಶಿಸಲು ಲಕ್ಷ್ಮಿ ಹೆಬ್ಬಾಳ್ಕರ್ ಯತ್ನಿಸಿದರು. ಕೊನೆಗೆ ಪರಿಸ್ಥಿತಿ ಬೇರೆ ಕಡೆ ಹೋಗುತ್ತಿರುವುದನ್ನು ಅರಿತು ಸುರ್ಜೇವಾಲ ಸಮಾಧಾನಪಡಿಸಿದರು.