ಬೆಂಗಳೂರು :ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹಾಳಾಗಿದೆ. ಈ ಬಗ್ಗೆ ಚರ್ಚೆಗೆ ಅವಕಾಶ ನೀಡಬೇಕು ಎಂದು ಬಿಜೆಪಿ ನಿಲುವಳಿ ಸೂಚನೆ ಮಂಡಿಸಿತು. ನಿಯಮ 59 ರ ಅಡಿ ಚರ್ಚೆಗೆ ಪಟ್ಟು ಹಿಡಿದ ಹಿನ್ನೆಲೆಯಲ್ಲಿ ಆಡಳಿತಾರೂಢ ಕಾಂಗ್ರೆಸ್ ಮತ್ತು ಪ್ರತಿಪಕ್ಷ ಬಿಜೆಪಿ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು. ಅಂತಿಮವಾಗಿ ನಿಯಮ 72ರ ಅಡಿ ಚರ್ಚೆಗೆ ಅವಕಾಶ ನೀಡಿ ಸಭಾಪತಿ ಬಸವರಾಜ ಹೊರಟ್ಟಿ ರೂಲಿಂಗ್ ನೀಡಿದರು.
ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪ ಮುಗಿಯುತ್ತಿದ್ದಂತೆ ಪ್ರತಿಪಕ್ಷ ಬಿಜೆಪಿ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹಾಳಾಗಿರುವ ವಿಷಯದ ಕುರಿತು ಚರ್ಚೆಗೆ ಅವಕಾಶ ಕೋರಿ ನಿಲುವಳಿ ಸೂಚನೆ ಮಂಡಿಸಿತು. ಪ್ರತಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ, ನಿಲುವಳಿ ಸೂಚನೆ ಮಂಡನೆ ಪ್ರಸ್ತಾಪ ಮಾಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ಸರ್ಕಾರ ಬಂದಾಗಿನಿಂದಲೂ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹಾಳಾಗಿದೆ. ಬೆಳಗಾವಿ ಸೇರಿದಂತೆ ರಾಜ್ಯದ ಹಲವು ಭಾಗದಲ್ಲಿ ಅನೇಕ ಅಹಿತಕರ ಘಟನೆಗಳು ನಡೆದಿವೆ. ಬೆಂಗಳೂರಿನಲ್ಲಿಯೂ ಕಾನೂನು ಸುವ್ಯವಸ್ಥೆ ಹಾಳಾಗಿದೆ. ಈ ಬಗ್ಗೆ ನಿಯಮ 59ರ ಅಡಿ ಚರ್ಚೆಗೆ ಅವಕಾಶ ನೀಡುವಂತೆ ಮನವಿ ಮಾಡಿದರು.
ಆದರೆ ಬಿಜೆಪಿ ಮನವಿಯಂತೆ ನಿಯಮ 59ರ ಅಡಿ ಚರ್ಚೆಗೆ ಅವಕಾಶ ನೀಡಲು ಸಭಾಪತಿ ಬಸವರಾಜ ಹೊರಟ್ಟಿ ನಿರಾಕರಿಸಿದರು. ನಿಯಮ 72ರ ಅಡಿ ಚರ್ಚೆಗೆ ಅವಕಾಶ ನೀಡಿ ರೂಲಿಂಗ್ ಕೊಟ್ಟರು. ಇದಕ್ಕೆ ಪ್ರತಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ವಿರೋಧ ವ್ಯಕ್ತಪಡಿಸಿದರು. ನಾನು ವಿಷಯವನ್ನ ಪ್ರಸ್ತಾಪ ಮಾಡಿಲ್ಲ. ಆಗಲೇ ನಿಯಮ 72ರ ಅಡಿ ಚರ್ಚೆಗೆ ಅವಕಾಶ ಕಲ್ಪಿಸಿ ರೂಲಿಂಗ್ ನೀಡಿದರೆ ಹೇಗೆ? ವಿಷಯ ಪ್ರಸ್ತಾಪಕ್ಕೆ ಅವಕಾಶ ಕೊಡಿ ಎಂದರು.
ಸದನದಲ್ಲಿ ಗದ್ದಲದ ವಾತಾವರಣ:ಈ ವೇಳೆ ಮಧ್ಯಪ್ರವೇಶ ಮಾಡಿದ ಕಾಂಗ್ರೆಸ್ ಸದಸ್ಯರು ವಿರೋಧ ವ್ಯಕ್ತಪಡಿಸಿದರು. ಇದು ನಿಯಮ 59ರ ಅಡಿ ಬರುವುದಿಲ್ಲ. ನಿಯಮ 72ರ ಅಡಿ ಚರ್ಚೆ ಮಾಡಿ ಎಂದು ಸಭಾಪತಿ ರೂಲಿಂಗ್ ಸಮರ್ಥಿಸಿಕೊಂಡರು. ಈ ವೇಳೆ ಪಟ್ಟು ಬಿಡದ ಬಿಜೆಪಿ ಸದಸ್ಯರು ನಿಯಮ 59 ರ ಅಡಿ ಚರ್ಚೆಗೆ ಅವಕಾಶ ನೀಡುವಂತೆ ಒತ್ತಾಯಿಸಿದರು. ಈ ಸಮಯದಲ್ಲಿ ಕಾಂಗ್ರೆಸ್-ಬಿಜೆಪಿ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು. ಸದನದಲ್ಲಿ ಗದ್ದಲದ ವಾತಾವರಣ ಸೃಷ್ಟಿಯಾಯಿತು.