ಕೊಪ್ಪಳ: ಕೊಪ್ಪಳ ನಗರದ ಜಿಲ್ಲಾಸ್ಪತ್ರೆಯ ಆವರಣದಲ್ಲಿರುವ ಎಂಸಿಹೆಚ್ ಆಸ್ಪತ್ರೆಯಿಂದ 22 ದಿನದ ಹೆಣ್ಣು ಮಗುವನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಜಯದೇವ ಹೃದ್ರೋಗ ಆಸ್ಪತ್ರೆಗೆ ಆಂಬ್ಯುಲೆನ್ಸ್ ಮೂಲಕ ಝೀರೋ ಟ್ರಾಫಿಕ್‌ನಲ್ಲಿ ಬುಧವಾರ ರವಾನಿಸಲಾಯಿತು. ಪೋಷಕರು ಸ್ಥಳೀಯ ಆಂಬ್ಯುಲೆನ್ಸ್‌ನವರ ಸಹಕಾರದಲ್ಲಿ ಮಗುವನ್ನು ಬೆಂಗಳೂರಿಗೆ ಕರೆದುಕೊಂಡು ಹೋಗಿದ್ದು, ಆಂಬ್ಯುಲೆನ್ಸ್ ಚಾಲಕರ ಸಮಯಪ್ರಜ್ಞೆ ಹಾಗೂ ಕಾರ್ಯಕ್ಕೆ ಸಾರ್ವಜನಿಕರಿಂದ ಶ್ಲಾಘನೆ ವ್ಯಕ್ತವಾಗಿದೆ.
ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಗಾದಿಗನೂರು ಗ್ರಾಮದ ಫಕೀರಸ್ವಾಮಿ ಹಾಗೂ ಹುಲಿಗೆಮ್ಮ ದಂಪತಿಯ 22 ದಿನದ ಮಗುವನ್ನು ಚಿಕಿತ್ಸೆಗಾಗಿ 4 ದಿನಗಳ ಹಿಂದೆಯಷ್ಟೇ ಕೊಪ್ಪಳದ ಎಂಸಿಹೆಚ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಶಿಶುವನ್ನು ತಪಾಸಣೆ ಮಾಡಿದ ವೈದ್ಯರು ಮಗುವಿನ ಹೃದಯದಲ್ಲಿ ಸಮಸ್ಯೆ ಇರುವ ಬಗ್ಗೆ ಪೋಷಕರಿಗೆ ತಿಳಿಸಿದ್ದರು. ಆದಷ್ಟು ಬೇಗನೇ ಮಗುವಿಗೆ ಹೆಚ್ಚಿನ ಚಿಕಿತ್ಸೆಯನ್ನು ಕೊಡಿಸಬೇಕು. ಬೆಂಗಳೂರಿನ ಜಯದೇವ ಹೃದ್ರೋಗ ಆಸ್ಪತ್ರೆಗೆ ಮಗುವನ್ನು ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸವಂತೆ ವೈದ್ಯರು ಸಲಹೆ ನೀಡಿದ್ದಾರೆ. ಅದರಂತೆ ಬುಧವಾರ ಮಗುವಿನ ಪೋಷಕರು ಸ್ಥಳೀಯ ಆಂಬ್ಯುಲೆನ್ಸ್‌ನವರ ಸಹಕಾರದೊಂದಿಗೆ ಝೀರೋ ಟ್ರಾಫಿಕ್‌ನಲ್ಲಿ ಮಗುವನ್ನು ಬೆಂಗಳೂರಿಗೆ ಕರೆದೊಯ್ದರು.